ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ಕೂಡಲೇ 500 ಕೋಟಿ ರು. ಅನುದಾನ ಬಿಡುಗಡೆ ಮಾಡಬೇಕು. ಕುಲಕಸುಬು ಕಳೆದುಕೊಂಡಿರುವ ಈಡಿಗ ಸಮುದಾಯದವರಿಗೆ ಮದ್ಯ ಮಾರಾಟದಲ್ಲಿ ಶೇಕಡ 50 ರಷ್ಟು ಮೀಸಲಾತಿ ನೀಡಬೇಕು ಎಂಬ ಒತ್ತಾಯದ ಜೊತೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಲಬುರ್ಗಿಯ ಕರದಾಳದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಡಾ.ಪ್ರಣಾವನಂದ ಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿದರು.ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜನವರಿ 6 ರಿಂದ ಕರದಾಳ ನಾರಾಯಣಗುರು ಶಕ್ತಿಪೀಠದಿಂದ ಬೆಂಗಳೂರುವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು. 41 ದಿನಗಳ 700 ಕಿ.ಮೀ ದೂರದ ಪಾದಯಾತ್ರೆಯ ನಂತರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಹೇಳಿದರು.ಈಡಿಗ, ಬಿಲ್ಲವ, ನಾಮದಾರಿ, ಧೀವರು ಸಮಾಜದ ಸುಮಾರು 40 ಲಕ್ಷ ಜನ ರಾಜ್ಯದಲ್ಲಿದ್ದಾರೆ. ಕರಾವಳಿ ಜಿಲ್ಲೆಯಲ್ಲಿ ನಮ್ಮ ಸಮುದಾಯದವರು ಚುನಾವಣೆಗಳ ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಈ ಮೊದಲು ಸರ್ಕಾರದಲ್ಲಿ ಸಮುದಾಯದ ಐದಾರು ಮಂದಿ ಶಾಸಕರು, ಸಚಿವರು ಇರುತ್ತಿದ್ದರು. ಈಗ ಕೇವಲ ಒಬ್ಬರಿದ್ದಾರೆ. ಇತ್ತೀಚಿಗೆ ಸಮುದಾಯದ ನಾಯಕರನ್ನು ರಾಜಕೀಯವಾಗಿ ನಿರ್ನಾಮ ಮಾಡುವ ಪ್ರಯತ್ನ ನಡೆದಿದೆ ಎಂದು ಸ್ವಾಮೀಜಿ ಆಪಾದಿಸಿದರು.ಈಡಿಗ ಸಮುದಾಯ ಶ್ರೀಮಂತ ಸಮುದಾಯ ಎಂಬ ಭಾವನೆ ಎಲ್ಲರಲ್ಲಿದೆ. ಆದರೆ ನಮ್ಮಲ್ಲಿ ಶೇಕಡ 90 ಬಡವರಿದ್ದಾರೆ. ಬಡವರಿಗೆ ಸರ್ಕಾರದಿಂದ ದೊರೆಯಬೇಕಾದ ಹಕ್ಕು, ಸೌಲಭ್ಯಗಳನ್ನು ಪಡೆಯಲು ಹೋರಾಟ ನಡೆಸುತ್ತಿರುವುದಾಗಿ ಹೇಳಿದ ಅವರು, ಸೇಂದಿ, ಸಾರಾಯಿ ಮಾರಾಟ ನಿಷೇಧವಾದ ನಂತರ ಇದೇ ಕುಲಕಸುಬು ಮಾಡಿಕೊಂಡಿದ್ದ ಈಡಿಗ ಸಮುದಾಯ ಸಂಕಷ್ಟದಲ್ಲಿದೆ. ಮದ್ಯ ಮಾರಾಟದಲ್ಲಿ ಸಮುದಾಯಕ್ಕೆ ಶೇಕಡ 50 ರಷ್ಟು ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಮಮಕ್ಕೆ ಸರ್ಕಾರ ಇದೂವರೆಗೆ ಒಂದೂ ರುಪಾಯಿ ಅನುದಾನ ಕೊಟ್ಟಿಲ್ಲ. ಸಮಾಜದ ಅಭಿವೃದ್ಧಿಗಾಗಿ ನಿಗಮಕ್ಕೆ ಕೂಡಲೇ 500 ಕೋಟಿ ರು.ಬಿಡುಗಡೆ ಮಾಡಬೇಕು. ಶಿವಮೊಗ್ಗ ಜಿಲ್ಲೆಯ ಮುಳುಗಡೆ ಸಂತ್ರಸ್ಥರಿಗೆ ಮನೆ, ಜಮೀನು ಸೇರಿದಂತೆ ಸೂಕ್ತ ಪರಿಹಾರ ನೀಡಬೇಕು. ಈ ಸಮಾಜವನ್ನು 2 ಎನಿಂದ ಎಸ್.ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಬೇಕು. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ನಾರಾಯಣ ಗುರುಗಳ ಅಧ್ಯಯನ ಪೀಠ ಸ್ಥಾಪಿಸಬೇಕು. ವಿಧಾನಸೌಧದ ಆವರಣದಲ್ಲಿ ನಾರಾಯಣಗುರುಗಳ ಪುತ್ಥಳಿ ಸ್ಥಾಪನೆ ಮಾಡಬೇಕು. ವಸತಿ ಯೋಜನೆಯಲ್ಲಿ ನಮ್ಮ ಸಮಾಜಕ್ಕೆ 25 ಸಾವಿರ ಮನೆ ಮಂಜೂರು ಮಾಡಬೇಕು ಎಂದು ಪ್ರಣಾವನಂದ ಸ್ವಾಮೀಜಿ ಆಗ್ರಹಿಸಿದರು.ಸಮಾಜದ ಮುಖಂಡ, ಕೆಪಿಎಸ್‌ಸಿ ಮಾಜಿ ಸದಸ್ಯ ಲಕ್ಷ್ಮೀನರಸಯ್ಯ, ಈಡಿಗ ಮಹಾಮಂಡಳ ರಾಜ್ಯಾಧ್ಯಕ್ಷ ತಿಪ್ಪೇಶ್, ಮುಖಂಡರಾದ ರಂಗಸ್ವಾಮಯ್ಯ, ಡಿ.ಆರ್.ಹನುಮಂತರಾಜು, ಪ್ರಭಾ ವಸಂತ್, ಮಣಿಕಂಠ, ನಾರಾಯಣಗುರು ಸಮಾಜಂ ಉಪಾಧ್ಯಕ್ಷ ರಾಜನ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಮೊದಲಾದವರು ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))