ಕೆಎಸ್‌ಪಿಸಿಬಿ ಅಂಗಳ ತಲುಪಿದ ಜಾಲಿವುಡ್ ಸ್ಟುಡಿಯೋಸ್ ಮನವಿ ಚೆಂಡು

| Published : Oct 09 2025, 02:00 AM IST

ಸಾರಾಂಶ

ಜಿಲ್ಲಾ ಕಚೇರಿಗಳ ಸಂಕೀರ್ಣದಲ್ಲಿ ಬುಧವಾರ ಬೆಳಗ್ಗೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರನ್ನು ಭೇಟಿ ಮಾಡಿದ ಜಾಲಿವುಡ್ ಸ್ಟುಡಿಯೋಸ್‌ನ ವ್ಯವಸ್ಥಾಪಕ ಹಾಗೂ ಇತರೆ ಸಿಬ್ಬಂದಿ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಮನಗರನಿಯಮ ಉಲ್ಲಂಘನೆ ಮೇರೆಗೆ ಸೀಜ್ ಆಗಿರುವ ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಸ್ ಆಡಳಿತ ಮಂಡಳಿಯವರು ಬೀಗ ಮುದ್ರೆ ತೆಗೆಯುವಂತೆ ಜಿಲ್ಲಾಧಿಕಾರಿಗಳಲ್ಲಿ ಮಾಡಿರುವ ಮನವಿಯ ಚೆಂಡು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಗಳ ತಲುಪಿದೆ.ಜಿಲ್ಲಾ ಕಚೇರಿಗಳ ಸಂಕೀರ್ಣದಲ್ಲಿ ಬುಧವಾರ ಬೆಳಗ್ಗೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರನ್ನು ಭೇಟಿ ಮಾಡಿದ ಜಾಲಿವುಡ್ ಸ್ಟುಡಿಯೋಸ್‌ನ ವ್ಯವಸ್ಥಾಪಕ ಹಾಗೂ ಇತರೆ ಸಿಬ್ಬಂದಿ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು.ತಮ್ಮ ತಪ್ಪು ಸರಿಪಡಿಸಿಕೊಳ್ಳಲು 15 ದಿನಗಳ ಕಾಲಾವಕಾಶ ನೀಡಬೇಕು. ಸ್ಟುಡಿಯೋದಲ್ಲಿ 400ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ. ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕೂಡ ನಡೆಯುತ್ತಿದೆ. ಸ್ಟುಡಿಯೋಗೆ ಬೀಗ ಹಾಕಿರುವುದರಿಂದ, ಅವರೆಲ್ಲರ ಕೆಲಸಕ್ಕೆ ತೊಂದರೆಯಾಗಲಿದೆ.‌ ಹಾಗಾಗಿ, ಷರತ್ತುಬದ್ಧ ಅನುಮತಿ ನೀಡುವಂತೆ ಆಡಳಿತ ಮಂಡಳಿಯವರು ಮನವಿ ಮಾಡಿದರು.ಆದರೆ, ಜಿಲ್ಲಾಧಿಕಾರಿಗಳು ಜಾಲಿವುಡ್​​ನ ಮನವಿ ಪತ್ರವನ್ನು ಪಡೆಯದೇ ಕಾಯಲು ಹೊರಗೆ ಕಳುಹಿಸಿದರು. ಕೆಲ ಸಮಯದ ನಂತರ ಆಡಳಿತ ಮಂಡಳಿಯವರಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶವನ್ನು ನಾವು ಪಾಲಿಸಿದ್ದೇವೆ. ಹಾಗಾಗಿ, ಮಂಡಳಿಗೆ ನೀವು ಮನವಿ ಮಾಡಿ. ಅವರು ‌ನೀಡುವ ಆದೇಶದಂತೆ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಬಿಗ್​ಬಾಸ್​ ಶೋಗೆ ರಿಲೀಫ್:ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ , ಜಾಲಿವುಡ್ ಸ್ಟುಡಿಯೋ ಆಗಿರುವ ತಪ್ಪುಗಳನ್ನು ಸರಿ ಪಡಿಸಿಕೊಳ್ಳಲು 10 ದಿನಗಳ ಕಾಲಾವಕಾಶ ಕೇಳಿ ಮನವಿ‌ ಮಾಡಿದೆ. ಮಾಲಿನ್ಯ ನಿಯಂತ್ರಣ ಮಂಡಳಿಗೆ ಆ ಮನವಿಯನ್ನು ವರ್ಗಾವಣೆ ‌ಮಾಡಿದ್ದೇನೆ. ಮಂಡಳಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಿಟ್ಟಿದ್ದೇನೆ ಎಂದು ತಿಳಿಸಿದರು.ಈ 10 ದಿನಗಳ ಕಾಲಾವಕಾಶ ಸಿಕ್ಕಿರುವುದರಿಂದ, ಬಿಗ್ ಬಾಸ್ ಶೋ ಮತ್ತೆ ಪ್ರಸಾರವಾಗುವ ನಿರೀಕ್ಷೆ ಮೂಡಿದೆ. ವಾಸ್ತವವಾಗಿ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಿದ್ದಕ್ಕೂ, ಬಿಗ್ ಬಾಸ್ ಶೋಗೂ ನೇರ ಸಂಬಂಧ ಇರಲಿಲ್ಲ. ಆದರೆ, ಸ್ಟುಡಿಯೋ ಬಂದ್ ಆಗಿದ್ದರಿಂದ ಶೋಗೂ ಅಡಚಣೆ ಉಂಟಾಗಿತ್ತು. ಈಗ 10 ದಿನಗಳ ಕಾಲಾವಕಾಶ ಸಿಕ್ಕಿರುವುದರಿಂದ, ಶೋ ಶೀಘ್ರದಲ್ಲಿಯೇ ಪುನರಾರಂಭವಾಗುವ ಸಾಧ್ಯತೆ ಇದೆ.

ಸ್ಪರ್ಧಿಗಳನ್ನು ಇಂದೇ ಬಿಗ್ ಬಾಸ್ ಮನೆಗೆ ಕರೆತರುತ್ತಾರೋ ಅಥವಾ 10 ದಿನಗಳ ಗಡುವು ಮುಗಿದು, ಎಲ್ಲ ಅನುಮತಿಗಳು ದೊರೆತ ಬಳಿಕ ಶೋ ಆರಂಭವಾಗುತ್ತದೋ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ, ಬುಧವಾರ ರಾತ್ರಿ ಬಿಗ್ ಬಾಸ್ ಎಂದಿನಂತೆ ಪ್ರಸಾರವಾಗುವ ಸಾಧ್ಯತೆಗಳಿವೆ.

ದಾಖಲೆ ಓದಗಿಸಿದ ಮೇಲೆ ಬೀಗಮುದ್ರೆ ತೆರವು :ಈಗಾಗಲೇ ಶೋನ ಪ್ರೋಮೊಗಳೂ ಬಿಡುಗಡೆಯಾಗಿದ್ದು, ನಾಳಿನ ಎಪಿಸೋಡ್ ಗೂ ಕಂಟೆಂಟ್ ಈಗಾಗಲೇ ಸಿದ್ದ ಇದೆ ಎಂದು ಹೇಳಲಾಗಿದೆ. ಒಂದು ವೇಳೆ ಸ್ಪರ್ಧಿಗಳು ಮನೆಗೆ ಮರಳಿದರೆ, ಯಾವುದೇ ಅಡಚಣೆಯಿಲ್ಲದೆ ಎಪಿಸೋಡ್‌ಗಳು ಪ್ರಸಾರವಾಗಲಿವೆ ಎಂದು ತಿಳಿದು ಬಂದಿದೆ.ಬುಧವಾರ ರಾತ್ರಿಯಾದರು ಜಾಲಿವುಡ್ ಸ್ಟುಡಿಯೋಸ್ ಗೆ ಜಿಲ್ಲಾಡಳಿತ ಹಾಕಿರುವ ಬೀಗ ಮುದ್ರೆಯನ್ನು ತೆಗೆದಿಲ್ಲ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಕೆಲವು ದಾಖಲೆಗಳನ್ನು ಕೇಳಿದ್ದು, ಅದನ್ನು ಜಾಲಿವುಡ್ ಸ್ಟುಡಿಯೋಸ್ ಆಡಳಿತ ಮಂಡಳಿಯವರು ನೀಡಬೇಕಿದೆ. ಆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಜಾಲಿವುಡ್ ಗೆ ಹಾಕಿದ್ದ ಸೀಲ್ ಅನ್ನು ಓಪನ್ ಮಾಡಲಾಗುತ್ತದೆ. ಆನಂತರ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ 12 ರ ಚಿತ್ರೀಕರಣ ಮತ್ತೆ ಶುರುವಾಗಲಿದೆ.-------ಜಾಲಿವುಡ್ ಮನವಿಯಲ್ಲಿ ಏನಿದೆ:ನಾವು ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಪಾಲನೆ ಮಾಡುತ್ತೇವೆ. ವೆಲ್ಸ್ ಸ್ಟುಡಿಯೋದಲ್ಲಿ ನೂರಾರು ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಏಕಾಏಕಿ ಬೀಗ ಹಾಕಿರುವ ಕಾರಣ ನೂರಾರು ಜನರ ಭವಿಷ್ಯ ಅತಂತ್ರವಾಗಿದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಬಿಗ್ ಬಾಸ್ ಶೋ ನಡೆಸಲಾಗುತ್ತಿದೆ. ಹಠಾತ್ ಸ್ಥಗಿತಗೊಳಿಸಿದ ಕಾರಣ ನಷ್ಟವಾಗಿದೆ. ನೀವು 15 ದಿನಗಳ ಕಾಲಾವಕಾಶ ಕೊಡಬೇಕು. 15 ದಿನದೊಳಗೆ ಎಲ್ಲಾ ಅನುಮತಿಗಳನ್ನು ಪಡೆದುಕೊಳ್ಳುತ್ತೇವೆ.------ರಿಲ್ಯಾಕ್ಸ್ ಮೂಡ್‌ನಲ್ಲಿ ಬಿಗ್ ಬಾಸ್ ಸ್ಪರ್ಧಿಗಳು:ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಜಡಿದಿರುವ ಕಾರಣ ಬಿಡದಿ ಬಳಿಯ ಈಗಲ್ ಟನ್ ರೆಸಾರ್ಟ್ ಗೆ ಸ್ಥಳಾಂತರಗೊಂಡಿರುವ ಸ್ಪರ್ಧಿಗಳು ಬುಧವಾರ ರಿಲ್ಯಾಕ್ಸ್ ಮೂಡ್ ನಲ್ಲಿದ್ದರು.ಬಿಗ್ ಬಾಸ್ ಮನೆಗೆ ಬೀಗ ಜಡಿದ ಬಳಿಕ ಅಲ್ಲಿದ್ದ ಸ್ಪರ್ಧಿಗಳನ್ನು ಈಗಲ್ ಟನ್ ರೆಸಾರ್ಟ್ ಗೆ ಸ್ಥಳಾಂತರ ಮಾಡಲಾಯಿತು. ರಾತ್ರಿಯಿಂದಲೇ ವಾಸ್ತವ್ಯ ಹೂಡಿರುವ ಸ್ಪರ್ಧಿಗಳು ಬೆಳಗ್ಗೆ ರೆಸಾರ್ಟ್ ಬಾಲ್ಕನಿಯಲ್ಲಿ ನಿಂತು ಮಾತಾಡಿಕೊಳ್ಳುತ್ತಿದ್ದರು. ಈ ಘಟನೆಯ ಅರಿವಿಲ್ಲದೇ ರಿಲ್ಯಾಕ್ಸ್ ಮೂಡ್ ಗೆ ಜಾರಿದ್ದಾರೆ. ಜೊತೆಗೆ ಬಿಗ್ ಬಾಸ್ ಸ್ಪರ್ಧಿಗಳಾದ ಧನುಷ್ ಗೌಡ ಹಾಗೂ ಅಭಿಷೇಕ್ ಧೂಮಪಾನ ಮಾಡುತ್ತಾ ಮಾತನಾಡುತ್ತಾ ನಿಂತಿರುವ ವಿಡಿಯೋ ವೈರಲ್ ಆಗಿದೆ.-------------ಸುದೀಪ್‌ಗೂ ಡಿಕೆಶಿಗೂ ತಂದಿಡೋದು ಬೇಡ: ಶಾಸಕ ಬಾಲಕೃಷ್ಣರಾಮನಗರ :

ನಟ್ಟು ಬೋಲ್ಟ್ ವಿಚಾರಕ್ಕೂ ಬಿಗ್‌ಬಾಸ್ ಶೋ ಬಂದ್ ಆಗಿದ್ದಕ್ಕೂ ಯಾವುದೇ ಸಂಬಂಧ ಇಲ್ಲ. ಈ ವಿಚಾರದಲ್ಲಿ ನಟ ಸುದೀಪ್‌ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಧ್ಯೆ ತಂದಿಡೋದು ಬೇಡ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ ಬಾಲಕೃಷ್ಣ ಪ್ರತಿಕ್ರಿಯಿಸಿದರು.ಕಲಾವಿದರ ಮೇಲೆ ಸೇಡು ತೀರಿಸಿಕೊಂಡ ನಟ್ಟು ಬೋಲ್ಟ್ ಮಿನಿಸ್ಟರ್ ಎಂಬ ಜೆಡಿಎಸ್ ಟ್ವೀಟ್ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶಾಸಕ ಬಾಲಕೃಷ್ಣರವರು, ನಟ್ಟು ಬೋಲ್ಟಿಗೂ ಬಿಗ್‌ಬಾಸ್ ಶೋ ಬಂದ್ ಆಗಿದ್ದಕ್ಕೂ ಏನು ಸಂಬಂಧ? ನಟ್ಟು ಬೋಲ್ಟ್ ವಿಚಾರಕ್ಕೂ ಇದ್ದಕ್ಕೂ ಸಂಬಂಧವೇ ಇಲ್ಲ. ನಟ ಸುದೀಪ್ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನಡುವೆ ತಂದಿಡೋದು ಬೇಡ ಎಂದರು.ಜಿಲ್ಲಾಡಳಿತವು ಜಾಲಿವುಡ್ ಸ್ಟುಡಿಯೋದವರಿಗೆ ನೋಟಿಸ್ ಕೊಟ್ಟು, ಬೀಗ ಹಾಕಿದ್ದಾರೆ. ಜಾಲಿವುಡ್ ಅವರು ಎನ್‌ಓಸಿ ಪಡೆದು ಕಾರ್ಯಕ್ರಮ ನಡೆಸಲಿ. ಬಿಗ್‌ಬಾಸ್ ಶೋ ಅನ್ನು ಒಂದು ತಿಂಗಳು ಮುಂದಕ್ಕೆ ಹಾಕಿದರೆ ಪ್ರಾಣ ಹೋಗಲ್ಲ. ಕಾನೂನಾತ್ಮಕವಾಗಿ ಅನುಮತಿ ಪಡೆದುಕೊಳ್ಳಲಿ ಎಂದು ಬಾಲಕೃಷ್ಣ ಹೇಳಿದರು.

-----8ಕೆಆರ್ ಎಂಎನ್ 4.ಜೆಪಿಜಿಈಗಲ್ ಟನ್ ರೆಸಾರ್ಟ್ ನಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ರಿಲ್ಯಾಕ್ಸ್ ಮೂಡ್ ನಲ್ಲಿರುವುದು-----