ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ
ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯ ಹೆಸರಿನಲ್ಲಿ ಹಿಂದೂ ಧರ್ಮ ಒಡೆಯುವ ಸಂಚು ನಡೆದಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಆರೋಪಿಸಿದರು.ಸೋಮವಾರ ತಮ್ಮ ಗೃಹಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಮೀಕ್ಷೆಯ ಹೆಸರಿನಲ್ಲಿ ಹಿಂದುಗಳ ಸಂಖ್ಯೆಯನ್ನು ಕಡಿತಗೊಳಿಸುವುದು, ಹಿಂದೂ ಧರ್ಮವನ್ನು ಒಡೆದು, ಸರ್ಕಾರಿ ಸೌಲಭ್ಯಗಳು ದೊರೆಯದಂತೆ ನೋಡಿಕೊಳ್ಳುವ ವ್ಯವಸ್ಥಿತ ಸಂಚು ನಡೆಸುತ್ತಿದೆ. ದೇಶದ ಸಂವಿಧಾನದಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಸಿಖ್, ಜೈನ, ಬೌದ್ಧ ಹೀಗೆ ಆರು ಜಾತಿಗಳಿಗೆ ಮಾತ್ರ ಮಾನ್ಯತೆ ನೀಡಲಾಗಿದೆ. ಉಳಿದೆಲ್ಲ ಜಾತಿಗಳು, ಉಪಜಾತಿಗಳು ಹಿಂದೂ ಧರ್ಮದ ಅಡಿಯಲ್ಲಿಯೇ ಬರುತ್ತವೆ. ಅದ್ದರಿಂದ ಸಾರ್ವಜನಿಕರು ಜನಗಣತಿ ಸಂದರ್ಭದಲ್ಲಿ ಒಂದನೇ ಕಾಲಂನಲ್ಲಿ ಹಿಂದೂ ಎಂದು ನಮೂದಿಸಬೇಕು, ಎರಡನೇಯ ಕಾಲಂನಲ್ಲಿ ಜಾತಿಯ ಹೆಸರು ಹಾಗೂ ಮೂರನೇಯ ಕಾಲಂನಲ್ಲಿ ಉಪಜಾತಿಯ ಹೆಸರನ್ನು ನೊಂದಾಯಿಸಬೇಕು ಎಂದು ಮನವಿ ಮಾಡಿದರು.
ಮುಸ್ಲಿಂ, ಕ್ರೈಸ್ತ, ಬೌದ್ಧ, ಸಿಖ, ಜೈನ ಧರ್ಮಿಯರನ್ನು ಹೊರತುಪಡಿಸಿ ಉಳಿದೆಲ್ಲ ಜಾತಿಗಳ ಜನರು ಒಂದನೇ ಕಾಲಂನಲ್ಲಿ ಹಿಂದೂ ಎಂದೇ ಬರೆಯಿಸಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿ ಹಿಂದುಗಳು ಸಂಖ್ಯೆ ಕಡಿಮೆಯಾಗಿ, ನಮ್ಮ ಅಸ್ತಿತ್ವ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ರಸ್ತೆತಡೆ, ಪ್ರತಿಭಟನೆ; ಅಭಿವೃದ್ಧಿ ಶೂನ್ಯ , ಭ್ರಷ್ಟಸರ್ಕಾರ ನೀತಿ ಖಂಡಿಸಿ ಬಿಜೆಪಿ ವತಿಯಿಂದ ಸೆ.24ರಂದು ರಸ್ತೆ ತಡೆದು, ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಾಳಾದ ರಸ್ತೆಗಳು, ಗುತ್ತಿಗೆದಾರರಿಗೆ ಬಿಲ್ ಪಾವತಿಸದೇ ಸತಾಯಿಸುತ್ತಿರುವುದು, ವೈದ್ಯರಿಲ್ಲದ ಸರ್ಕಾರಿ ಆಸ್ಪತ್ರೆಗಳು, ಹಾಳಾದ ರಸ್ತೆಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಯ ಕೊರತೆ, ಮಿತಿಮೀರಿದ ಭ್ರಷ್ಟಾಚಾರ ವಿರುದ್ಧ ಸರ್ಕಾರವನ್ನು ಎಚ್ಚರಿಸಲು ಪ್ರತಿಭಟನೆ ನಡೆಸಲಾಗುತ್ತಿದೆ. ಎಷ್ಟೇ ಮನವಿ ಸಲ್ಲಿಸಿದರೂ ಕ್ಯಾರೇ ಎನ್ನದ ಸರ್ಕಾರವನ್ನು ಪ್ರತಿಭಟನೆಯ ಮೂಲಕ ಎಚ್ಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು. ಬುಧವಾರ ನಗರದ ಮುಧೋಳ ಬೈಪಾಸ್ ರಸ್ತೆ ಕಟ್ಟೆ ಕೆರೆಯ ಹತ್ತಿರ ರಸ್ತೆ ತಡೆದು ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭ್ರಷ್ಟ ಸರ್ಕಾರವನ್ನು ಎಚ್ಚರಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಜಿ.ಎಸ್. ನ್ಯಾಮಗೌಡ, ಸಿ.ಟಿ. ಉಪಾಧ್ಯಾಯ. ಈಶ್ವರ ಆದೆಪ್ಪನವರ, ಮಲ್ಲು ದಾನಗೌಡ, ಅಜಯ ಕಡಪಟ್ಟಿ, ಶ್ರೀಧರ ಕಂಬಿ, ಸುರೇಶಗೌಡ ಪಾಟೀಲ,ಶಂಕರ ಕಾಳೆ ಇತರರು ಇದ್ದರು.