ಇಂದಿನಿಂದ 28 ದಿನ ಸಂವಿಧಾನ ಜಾಗೃತಿ ಜಾಥಾ ಸಂಚಾರ: ಜಿಲ್ಲಾಧಿಕಾರಿ

| Published : Jan 26 2024, 01:47 AM IST

ಸಾರಾಂಶ

ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್‌ ಅವರಿಂದ ಚಾಲನೆ. ಕಾರ್ಯಕ್ರಮದ ಯಶಸ್ವಿಗೆ ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳನ್ನು ನೇಮಿಸಿ ಅನುಷ್ಠಾನ ತಂಡಗಳ ರಚನೆ ಮಾಡಲಾಗಿದೆ ಎಂದು ಡಿಸಿ ಎಲ್‌. ಚಂದ್ರಶೇಖರ ನಾಯಕ ತಿಳಿಸಿದರು.

ಕನ್ನಡ್ರಭ ವಾರ್ತೆ ರಾಯಚೂರು

ಜಿಲ್ಲೆಯಾದ್ಯಂತ ಇಂದಿನಿಂದ 28 ದಿನಗಳ ಕಾಲ ಸಂವಿಧಾನ ಜಾಗೃತಿ ಜಾಥಾ ಸಂಚಾರ ಮಾಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಶುಕ್ರವಾರ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ನಮ್ಮ ದೇಶದ ಅತ್ಯಂತ ಪವಿತ್ರ ಗ್ರಂಥ ಸಂವಿಧಾನದ ಆಶಯಗಳನ್ನು ಮನೆ ಮನೆಗೆ ತಲುಪಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾರ್ಯಕ್ರಮದ ಮೂಲ ಆಶಯದಂತೆ ರಾಯಚೂರು ಜಿಲ್ಲೆಯ ಜಿಲ್ಲಾಡಳಿತ, ಜಿಪಂ ಮತ್ತು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಜ.26 ರಿಂದ ಬರುವ ಫೆ.22ರವರೆಗೆ ಒಟ್ಟು 28 ದಿನಗಳ ಕಾಲ ಇಡಿ ಜಿಲ್ಲೆಯಾದ್ಯಂತ ಒಟ್ಟು 179 ಗ್ರಾಮ ಪಂಚಾಯಿತಿ ಮತ್ತು 13 ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಸಂವಿಧಾನ ಜಾಗೃತಿ ಜಾಥಾ (ಎಲ್ಇಡಿ ಪರದೆಯುಳ್ಳ ಟ್ಯಾಬ್ಲೋ) ಒಳಗೊಂಡ ಸ್ತಬ್ಧಚಿತ್ರ ವಾಹನದೊಂದಿಗೆ ಸಂಚರಿಸಲಿದೆ ಎಂದು ವಿವರಿಸಿದ್ದಾರೆ.

ಜಿಲ್ಲಾಮಟ್ಟದ ಸಮಿತಿ ರಚನೆ

ಕಾರ್ಯಕ್ರಮದ ಯಶಸ್ವಿಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಮತ್ತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಂಘಟನಾ ಸಮಿತಿಯ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರನ್ನು ಕಾರ್ಯನಿರ್ವಹಣಾ ಸಮಿತಿ ಸದಸ್ಯ ಕಾರ್ಯದರ್ಶಿ ಸೇರಿದಂತೆ ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳನ್ನು ನೇಮಿಸಿ ಅನುಷ್ಠಾನ ತಂಡಗಳನ್ನು ರಚಿಸಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವು ರಾಜ್ಯಮಟ್ಟದಲ್ಲಿ ಜ.26ರಿಂದ ಫೆ.25 ರವರೆಗೆ ನಡೆಯಲಿದ್ದು, ಒಟ್ಟು 28 ದಿನಗಳ ಕಾಲ ಸಂವಿಧಾನ ಜಾಗೃತಿ ಜಾಥಾಾ ಸಮಾವೇಶ ಜರುಗಲಿದೆ. ಸಂವಿಧಾನ ಜಾಗೃತಿ ಜಾಥಾ ಸಮಾವೇಶವು ರಾಯಚೂರು ತಾಲೂಕಿನಲ್ಲಿ ಆರು ದಿನ, ಮಾನ್ವಿ ಮತ್ತು ಸಿರವಾರ ತಾಲೂಕಿನಲ್ಲಿ ಐದು, ಲಿಂಗಸುಗೂರು ಮತ್ತು ಮಸ್ಕಿ ತಾಲೂಕಿನಲ್ಲಿ ಎಂಟು, ದೇವದುರ್ಗ ತಾಲೂಕಿನಲ್ಲಿ ನಾಲ್ಕು, ಸಿಂಧನೂರು ತಾಲೂಕಿನಲ್ಲಿ ಐದು 5 ದಿನಗಳವರೆಗೆ ಸಂವಿಧಾನ ಜಾಗೃತಿ ಜಾಥಾದ ಸ್ತಬ್ಧಚಿತ್ರ ಸಂಚರಿಸಲಿದೆ ಎಂದು ಹೇಳಿದ್ದಾರೆ.

ಈ ಸ್ತಬ್ಧಚಿತ್ರದ ವಾಹನದ ಜೊತೆಗೆ ಕಲಾತಂಡಗಳು, ಐಇಆ ವಿಡಿಯೋ ಕ್ಲಿಪ್, ಉಪನ್ಯಾಸ ಕಾರ್ಯಕ್ರಮ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಅಭಿನಂದನಾ ಪತ್ರ ವಿತರಣೆ, ಸ್ಥಳೀಯ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡು ಜಾಥಾ ಸಮಾವೇಶ ನಡೆಯಲಿದೆ. ಬಳಿಕ ಅದ್ಧೂರಿಯಾಗಿ ಮುಂದಿನ ಸ್ಥಳಕ್ಕೆ ಬೀಳ್ಕೊಡಲಾಗುತ್ತದೆ ಎಂದು ಡಿಸಿ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.