ಸಾರಾಂಶ
ಮಂಗಳೂರು, ಉಡುಪಿ, ಪುತ್ತೂರು, ಕೊಡಗು, ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಸಂಸ್ಕೃತ ಭಾರತಿಯ ಮಂಗಳೂರು ವಿಭಾಗದಿಂದ ನಗರದ ಸಂಘನಿಕೇತನದಲ್ಲಿ ಶುಕ್ರವಾರ ಸಂಜೆ ಆರಂಭಗೊಂಡ ‘ಅಖಂಡ ರಾಮಾಯಣ ಪಾರಾಯಣ’ ಭಾನುವಾರ ಸಂಜೆ ವೇಳೆಗೆ ಸಮಾಪನಗೊಂಡಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಲೋಕಾರ್ಪಣೆಯ ನಿಮಿತ್ತ ಮಂಗಳೂರು, ಉಡುಪಿ, ಪುತ್ತೂರು, ಕೊಡಗು, ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಸಂಸ್ಕೃತ ಭಾರತಿಯ ಮಂಗಳೂರು ವಿಭಾಗದಿಂದ ನಗರದ ಸಂಘನಿಕೇತನದಲ್ಲಿ ಶುಕ್ರವಾರ ಸಂಜೆ ಆರಂಭಗೊಂಡ ‘ಅಖಂಡ ರಾಮಾಯಣ ಪಾರಾಯಣ’ ಭಾನುವಾರ ಸಂಜೆ ವೇಳೆಗೆ ಸಮಾಪನಗೊಂಡಿತು.ಸಮಾರೋಪ ಭಾಷಣ ಮಾಡಿದ ಕುಟುಂಬ ಪ್ರಬೋಧನ್ ಪ್ರಮುಖರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಮನುಷ್ಯ ಹೇಗೆ ಇರಬೇಕು, ಬದುಕಬೇಕು ಎಂಬುದನ್ನು ತಿಳಿಸುವ ಅತ್ಯಂತ ಪ್ರಾಚೀನ ಗ್ರಂಥ ರಾಮಾಯಣ. ರಾಮಾಯಣ ಓದಿನಿಂದ ಆನಂದ ಉಂಟಾಗುತ್ತದೆ, ಅದು ಆದರ್ಶಗಳನ್ನು ಹೇಳುತ್ತದೆ, ಜತೆಗೆ ನಮ್ಮಲ್ಲಿ ಪರಿವರ್ತನೆಗೆ ಕಾರಣವಾಗುತ್ತದೆ. ಪ್ರತಿ ಹಂತದಲ್ಲಿ ಜೀವನದ ಆದರ್ಶವನ್ನು ರಾಮಾಯಣ ನೀಡುತ್ತದೆ. ಈ ಹಿನ್ನೆಲೆಯಲ್ಲಿ ರಾಮಾಯಣ ಓದಬೇಕು ಎಂದರು.ರಾಮಾಯಣದ ಒಂದೊಂದು ಪಾತ್ರವೂ ಅದ್ಭುತ. ರಾಮ, ಸೀತೆ, ಲಕ್ಷ್ಮಣ, ಭರತ, ಹನೂಮಂತ ಸಹಿತ ರಾಮಾಯಣದ ಪಾತ್ರಗಳು ತ್ಯಾಗ, ಸಹನೆ, ಸೇವೆಯ ಸಂದೇಶವನ್ನು ನಮಗೆ ಕಟ್ಟಿಕೊಟ್ಟಿವೆ. ರಾಮಾಯಣದ ಒಂದೊಂದು ಶ್ಲೋಕ, ಘಟನೆ ಬಗ್ಗೆ ಮಕ್ಕಳ ಜತೆ ಸಂವಾದ ನಡೆಸಿದರೆ ಅದರ ಆದರ್ಶಗಳು ಮಕ್ಕಳಲ್ಲಿ ಮೈಗೂಡಲು ಸಾಧ್ಯ. ರಾಮನ ದಿಕ್ಕಿನಲ್ಲಿ ಹೋಗುವ ಪ್ರಯತ್ನ ಮಾಡೋಣ ಎಂದು ಅವರು ಹೇಳಿದರು.
ಎಸ್‌ಸಿಎಸ್ ಆಸ್ಪತ್ರೆ ಎಂಡಿ ಡಾ.ಜೀವರಾಜ ಸೊರಕೆ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ಭಾರತಿ ಅಖಿಲ ಭಾರತೀಯ ಸಂಘಟನಾ ಮಂತ್ರಿ ದಿನೇಶ್ ಕಾಮತ್ ಅತಿಥಿಯಾಗಿದ್ದರು. ಡಾ. ಶಾಂತಲಾ ವಿಶ್ವಾಸ ಸ್ವಾಗತಿಸಿದರು. ಸಂಸ್ಕೃತ ಭಾರತಿ ಪ್ರಾಂತ ಸಂಪರ್ಕ ಪ್ರಮುಖ್ ಸತ್ಯನಾರಾಯಣ ಕೆ.ವಿ., ವಿಭಾಗ ಸಂಯೋಜಕ ನಟೇಶ್ ಇದ್ದರು.