ವಿದ್ಯಾರ್ಥಿಗಳೇ ಮತದಾನ ಪಾವಿತ್ರ್ಯತೆ ಕಾಪಾಡಿ: ನ್ಯಾ. ವಿ. ಪುಷ್ಪವತಿ

| Published : Jan 26 2024, 01:47 AM IST

ವಿದ್ಯಾರ್ಥಿಗಳೇ ಮತದಾನ ಪಾವಿತ್ರ್ಯತೆ ಕಾಪಾಡಿ: ನ್ಯಾ. ವಿ. ಪುಷ್ಪವತಿ
Share this Article
  • FB
  • TW
  • Linkdin
  • Email

ಸಾರಾಂಶ

ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬರು ಮತದಾನದ ಹಕ್ಕನ್ನು ಪಡೆದಿದ್ದು, ಅದನ್ನು ಯಾವುದೇ ಪ್ರಭಾವಕ್ಕೆ ಒಳಗಾಗದೆ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಚಲಾಯಿಸುವ ಮೂಲಕ ಮತದಾನದ ಮೌಲ್ಯ ಮತ್ತು ಮಹತ್ವ ಕಾಪಾಡಬೇಕೆಂದು ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ವಿ. ಪುಷ್ಪವತಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬರು ಮತದಾನದ ಹಕ್ಕನ್ನು ಪಡೆದಿದ್ದು, ಅದನ್ನು ಯಾವುದೇ ಪ್ರಭಾವಕ್ಕೆ ಒಳಗಾಗದೆ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಚಲಾಯಿಸುವ ಮೂಲಕ ಮತದಾನದ ಮೌಲ್ಯ ಮತ್ತು ಮಹತ್ವ ಕಾಪಾಡಬೇಕೆಂದು ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ವಿ. ಪುಷ್ಪವತಿ ತಿಳಿಸಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಆಡಳಿತ, ರಾಜ್ಯಶಾಸ್ತ್ರ ವಿಭಾಗ, ಚುನಾವಣಾ ಸಾಕ್ಷರತಾ ಕ್ಲಬ್ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ 14ನೇ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಭಾರತೀಯ ಪ್ರಜೆಯಾಗಿ ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಗಮಹರಿಸಬೇಕು. ಸಂವಿಧಾನ ಎಲ್ಲರಿಗೂ ಮತದಾನ ಹಕ್ಕನ್ನು ಕಲ್ಪಿಸಿಕೊಟ್ಟಿದ್ದು, ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಮೂಲಕ ವಿದ್ಯಾರ್ಥಿಗಳಾದ ನೀವು ಮತದಾನದ ಪಾವಿತ್ರ್ಯತೆಯನ್ನು ಕಾಪಾಡಬೇಕು. ಈ ಬಗ್ಗೆ ಅರಿವು ಪಡೆದುಕೊಂಡು ಸಮುದಾಯಕ್ಕೆ ಜಾಗೃತಿ ಮೂಡಿಸಬೇಕು. ಕಾನೂನುಗಳಿಲ್ಲದಿದ್ದರೆ ದೇಶ ಸುವ್ಯವಸ್ಥಿತವಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ನಮ್ಮ ಸಂವಿಧಾನ ರಚನೆಯಾಗಿದ್ದು ಕಾನೂನುಗಳ ತಾಯಿಯೇ ಸಂವಿಧಾನ. ಆದ್ದರಿಂದ ಪ್ರತಿಯೊಬ್ಬರು ಸಂವಿಧಾನದಡಿಯಲ್ಲಿ ವಿಧೇಯತೆಯಿಂದ ನಡೆದುಕೊಳ್ಳಬೇಕೆಂದರು.

ತಹಸೀಲ್ದಾರ್ ಪವನ್‌ಕುಮಾರ್ ಮಾತನಾಡಿ, ಪ್ರಜಾಪ್ರಭುತ್ವದ ಹಬ್ಬವೆಂದರೆ ಅದು ಮತದಾನವಾಗಿದ್ದು ವಿದ್ಯಾರ್ಥಿಗಳು ಮುಂದಿನ ಪ್ರಜೆಗಳಾಗಿದ್ದು ನಿಮಗೆ ಮತದಾನದ ಬಗ್ಗೆ ಅರಿವು ಮೂಡಿಸಿದರೆ ಉತ್ತಮ ದೇಶಕಟ್ಟಲು ಸಾಧ್ಯವಿದ್ದು, ಈ ನಿಟ್ಟಿನಲಿ ಭಾರತ ದೇಶ ಅಭಿವೃದ್ಧಿ ಪಥದಲ್ಲಿ ಸಾಗಬೇಕೆಂದರೆ ಮತದಾನ ಮುಖ್ಯ. ನಿಮ್ಮ ಚಿಂತನೆಗಳು ರಾಜಕಾರಣಿಗಳಿಗೆ ತಲುಪಬೇಕೆಂದರೆ ಯೋಗ್ಯ, ಸಮರ್ಥ ವ್ಯಕ್ತಿಗೆ ಮತದಾನ ಮಾಡಿದಾಗ ಮಾತ್ರ ಸಾಧ್ಯ ಎಂದರು.

ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ ಇಒ ಸುದರ್ಶನ್ ಮಾತನಾಡಿ, ಮತದಾರರಲ್ಲಿ ಜಾಗೃತಿಯ ಕೊರತೆ ಇರುವ ಕಾರಣ ಮತದಾನದ ದಿನಾಚರಣೆ ಆಚರಿಸಿ ಜನಸಮುದಾಯಕ್ಕೆ ತಿಳುವಳಿಕೆ ಕೊಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಬಹುತೇಕ ಜನರು ಮತದಾನ ಮಾಡುತ್ತಾರ. ಆದರೆ ನಗರ ಪ್ರದೇಶದಲ್ಲಿ ಮತದಾನದ ಶೇಕಡವಾರು ಕಡಿಮೆಯಾಗುತ್ತಿದೆ. ಚುನಾವಣೆಗಳಲ್ಲಿ ಮತದಾನ ಮಾಡುವಾಗ ಯಾವುದೇ ಆಸೆ, ಆಮೀಷಕ್ಕೆ ಒಳಗಾಗದೆ ಮತದಾನ ಮಾಡಿ ಉತ್ತಮ ನಾಯಕನನ್ನು ಆರಿಸುವ ಮೂಲಕ ಭವ್ಯ ಭಾರತ ನಿರ್ಮಾಣಕ್ಕೆ ಶ್ರಮಿಸಬೇಕೆಂದರು.

ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಮಾತನಾಡಿ, ನಿಮ್ಮ ಮತದಲ್ಲಿ ಶಕ್ತಿಯಿದ್ದು ಪ್ರಧಾನಿ, ಮುಖ್ಯಮಂತ್ರಿ, ಶಾಸಕರನ್ನು ಆಯ್ಕೆ ಮಾಡುವ ಶಕ್ತಿ ಇದೆ. ಯಾವುದೇ ಕಾರಣಕ್ಕೂ ಮತದಾನ ಮಾಡುವುದನ್ನು ನಿರ್ಲಕ್ಷ್ಯಿಸದೆ ನಾನು ಖಚಿತವಾಗಿ ಮತದಾನ ಮಾಡುವೆ ಎನ್ನುವ ಮನಸ್ಸು ಇರಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಹೆಚ್.ಬಿ. ಕುಮಾರಸ್ವಾಮಿ ಮಾತನಾಡಿ, ಮತದಾನಕ್ಕೆ ಮೌಲ್ಯ ಕಟ್ಟಲಾಗದು. ಮತದಾನ ವ್ಯವಸ್ಥೆ ಕ್ರಮಬದ್ದವಾಗಿದ್ದು ಮತದಾನ ಮಾಡುವ ಮುಂಚೆ ಒಳ್ಳೆಯ ನಾಯಕನನ್ನು ಆರಿಸಿ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು. ಸಮುದಾಯಕ್ಕೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮತದಾನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಚುನಾವಣಾ ಸಾಕ್ಷರತಾ ಕ್ಲಬ್ ಸಂಚಾಲಕ ಸೈಯಾದ್ ರಿಯಾಜ್ ಪಾಷ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಗ್ರೇಡ್-೨ ತಹಶೀಲ್ದಾರ್ ಜಗನ್ನಾಥ್, ಪ್ರೊ. ಚಂದ್ರಶೇಖರ್, ಪ್ರೊ. ಸ್ಮಿತಾ, ಪ್ರೊ. ಕಲ್ಪನಾ, ಪ್ರೊ. ಸುಭದ್ರಮ್ಮ, ಹೇಮಲತಾ, ಲೋಕೇಶ್, ರಾಘವೇಂದ್ರ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಂತರ ಪ್ರಾಧ್ಯಾಪಕರಾದ ಡಾ. ಎಂ.ಆರ್. ಚಿಕ್ಕಹೆಗ್ಗಡೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.