ಸಾರಾಂಶ
ಭಟ್ಕಳ: ತಾಲೂಕಿನಾದ್ಯಂತ 76ನೇ ಗಣರಾಜ್ಯೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗಿದ್ದು, ತಾಲೂಕು ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಭಾರತ ಪ್ರಜಾಪ್ರಭುತ್ವದ ದೊಡ್ಡ ದೇಶವಾಗಿದೆ. ಭಾರತ ವಿಶ್ವದಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನ ಹೊಂದಿರುವ ದೇಶವಾಗಿದೆ. ಭಾರತದ ಸಂವಿಧಾನ ಕೇವಲ ದಾಖಲೆಯಲ್ಲ. ಇದು ನಮ್ಮ ಪ್ರಜಾಪ್ರಭುತ್ವ ರಾಷ್ಟ್ರದ ಆತ್ಮವಾಗಿದೆ ಎಂದ ಅವರು, ಸ್ವಾತಂತ್ರ‍್ಯ, ಸಮಾನತೆ, ಏಕತೆ, ಭಾತೃತ್ವ, ಸಹೋದರತ್ವ, ನಮ್ಮ ಸಂವಿಧಾನದಲ್ಲಿ ಇರುವ ಪ್ರಮುಖ ಮೌಲ್ಯಗಳಾಗಿವೆ ಎಂದರು.ನಮ್ಮ ದೇಶಕ್ಕೆ ಇದು ಸಂವಿಧಾನ ನೀಡಿದ ದೊಡ್ಡ ಕೊಡುಗೆಯಾಗಿದೆ. ಭಾರತ ಸಂವಿಧಾನವು ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತ ರಾಷ್ಟ್ರವನ್ನು ಪ್ರತಿಪಾದಿಸುತ್ತಿದೆ. ಭಾರತ ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದು ಮಾತ್ರವಲ್ಲದೇ ಸಾಮಾಜಿಕ ಸಾಮರಸ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯಲ್ಲಿ ಬೆಳೆಯುತ್ತಿರುವ ದೇಶಕ್ಕಾಗಿ ಕೆಲಸ ಮಾಡಲು ಪ್ರತಿಜ್ಞೆ ಮಾಡಬೇಕು ಎಂದರು.
ಭಾರತದಲ್ಲಿ ಸಂವಿಧಾನದ ನಿಯಮವನ್ನು ಎಲ್ಲರೂ ಪಾಲಿಸುತ್ತಾ ದೇಶಸೇವೆಗಾಗಿ ನಮ್ಮನ್ನು ನಾವು ಮುಡಿಪಾಗಿಡೋಣ ಎಂದರು. ಇದಕ್ಕೂ ಪೂರ್ವದಲ್ಲಿ ಪೊಲೀಸ್ ಇಲಾಖೆ ಸೇರಿದಂತೆ ಶಾಲಾ- ಕಾಲೇಜು ವಿದ್ಯಾರ್ಥಿಗಳಿಂದ ಅಕರ್ಷಕ ಪಥಸಂಚಲನ ನಡೆಯಿತು.ವೇದಿಕೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ ನಾವಡ, ಜಾಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜಪ್ಪ, ಸಹಾಯಕ ಆಯುಕ್ತರ ಕಚೇರಿಯ ತಹಸೀಲ್ದಾರ್ ಸಂತೋಷ ಭಂಡಾರಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಎನ್. ನಾಯ್ಕ, ಪುರಸಭಾ ಉಪಾಧ್ಯಕ್ಷ ಅಲ್ತಾಫ್ ಖರೂರಿ, ಜಾಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹಪ್ಸಾ ಖಾಜಿಯಾ ಮುಂತಾದವರಿದ್ದರು. ಶಿಕ್ಷಕ ಶ್ರೀಧರ ಶೇಟ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಕಾಶ ಶಿರಾಲಿ ಸಹಕರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ ವಂದಿಸಿದರು.ಸಂವಿಧಾನ ಭವ್ಯ ಭಾರತದ ಬುನಾದಿ
ಯಲ್ಲಾಪುರ: ಸಂವಿಧಾನವು ಭವ್ಯ ಭಾರತದ ಭದ್ರ ಬುನಾದಿ. ಸಂವಿಧಾನದ ನೆರಳಿನಲ್ಲಿ ಗಣತಂತ್ರ ವ್ಯವಸ್ಥೆಯಲ್ಲಿ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತ ಮುನ್ನಡೆಯುತ್ತಿದೆ ಎಂದು ತಾಲೂಕು ದಂಡಾಧಿಕಾರಿ ಯಲ್ಲಪ್ಪ ಗೋನೆಣ್ಣವರ್ ತಿಳಿಸಿದರು.ಪಟ್ಟಣದ ಕಾಳಮ್ಮ ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ76 ನೆ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಜಗತ್ತಿನ ಹಲವು ದೇಶಗಳ ಸರ್ವಶ್ರೇಷ್ಠ ವಿಚಾರಧಾರೆಗಳನ್ನು ಅಳವಡಿಸಿಕೊಂಡ ಸಂವಿಧಾನ ನಮ್ಮ ದೇಶದ್ದಾಗಿದೆ. ಇಂತಹ ಶ್ರೇಷ್ಠ ಭಾರತದ ಹೆಮ್ಮೆಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಪಟ್ಟಣದ ಎಲ್ಲ ಶಾಲೆಗಳ ವಿದ್ಯಾರ್ಥಿಗಳು ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪಾಲ್ಗೊಂಡು ಗೌರವವಂದನೆ ಸಲ್ಲಿಸಿದರು. ನಂತರ ಮೈದಾನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ರಾಜ್ಯ ವಿಕೇಂದ್ರೀಕರಣ ಯೋಜನಾ ಸಮಿತಿ ಉಪಾಧ್ಯಕ್ಷ ಪ್ರಮೋದ್ ಹೆಗಡೆ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನರ್ಮದಾ ನಾಯ್ಕ್, ಉಪಾಧ್ಯಕ್ಷ ಅಮಿತ್ ಅಂಗಡಿ, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಂಜೀವ್ ಹೊಸ್ಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ, ಪಿಎಸ್ಐ ಸಿದ್ದು ಗುಡಿ, ನಸ್ರಿನ್ ತಾಜ್, ಪಪಂ ಮುಖ್ಯಾಧಿಕಾರಿ ಸುನಿಲ್ ಗಾವಡೆ, ಪಪಂ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.