ಸಾರಾಂಶ
ಪರಿಸರ ಅಧ್ಯಯನಕಾರರ ಆತಂಕ । ಗುಡವಿಯ ಕಾಡಿನಲ್ಲಿ ಅಪಾರ ಪ್ರಮಾಣದ ಬೆಲೆ ಬಾಳುವ ಪಾರಂಪರಿಕ ವೃಕ್ಷಗಳ ಕಡಿದು ನಾಶ ಆರೋಪ
ಎಚ್.ಕೆ.ಬಿ. ಸ್ವಾಮಿಕನ್ನಡಪ್ರಭ ವಾರ್ತೆ ಸೊರಬ
ಅರಣ್ಯ ಭೂಮಿ ವಾಣಿಜ್ಯ ಬೆಳೆಗಾಗಿ ಪರಿವರ್ತನೆ ಹೊಂದುತ್ತಿರುವ ಕಾರಣ ಮತ್ತು ಯಥೇಚ್ಛವಾಗಿ ಲಭ್ಯವಿರುವ ಕಾನನ ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಸಂಪೂರ್ಣ ನಾಶವಾಗುವ ಮತ್ತು ನೀರಿನ ಅಭಾವದ ಜತೆಗೆ ಆಹಾರ ಬೆಳೆಗಳಿಗೆ ಧಕ್ಕೆಯಾಗಿರುವುದು ಪರಿಸರ ತಜ್ಞರ, ಅಧ್ಯಯನಕಾರರ ಆತಂಕಕ್ಕೆ ಕಾರಣವಾಗಿದೆ.ತಾಲೂಕಿನ ಐತಿಹಾಸಿಕ ಹಿನ್ನೆಲೆಯುಳ್ಳ ಚಂದ್ರಗುತ್ತಿ ಹೋಬಳಿಯ ಹೊಳೆಮರೂರು, ತೋರಣಗೊಂಡನಕೊಪ್ಪ, ಅಂದವಳ್ಳಿ, ಮುಟಗುಪ್ಪೆ, ಗೊಗ್ಗೆಹಳ್ಳಿ, ಹರಳಿಗೆ, ಕೋಡಂಬಿ ಇನ್ನೂ ಅನೇಕ ಕಡೆ ಕಾಡುಗಳ್ಳರಿಂದಾಗಿ ಅರಣ್ಯ ನಾಶವಾದ ಬಳಿಕ ಕಸಬಾ ಹೋಬಳಿ, ಗುಡವಿ ಗ್ರಾಪಂ ವ್ಯಾಪ್ತಿಯ ಕಂತನಹಳ್ಳಿ ಗ್ರಾಮದ ಸ.ನಂ. ೮ರ ನಿತ್ಯ ಹರಿದ್ವರ್ಣದ ಸಮೃದ್ಧ ಕಾಡಿನಲ್ಲಿ ಅಪಾರ ಪ್ರಮಾಣದ ಬೆಲೆ ಬಾಳುವ ಪಾರಂಪರಿಕ ವೃಕ್ಷಗಳನ್ನು ಕಡಿದು ನಾಶಪಡಿಸಲಾಗಿದೆ ಎನ್ನುವ ದೂರುಗಳ ಕೇಳಿ ಬಂದಿವೆ.
ಕಳೆದ ಒಂದು ವರ್ಷದ ಈಚೆಗೆ ಸೊರಬ ತಾಲೂಕಿನಲ್ಲಿ ಅವ್ಯಾಹತವಾಗಿ ಅರಣ್ಯ ನಾಶವಾಗದ ಬಗ್ಗೆ ಅಂಕಿ ಅಂಶಗಳು ದೊರೆತಿದ್ದು, ಚಂದ್ರಗುತ್ತಿ ಹೋಬಳಿಯಲ್ಲಿ ಅತಿ ಹೆಚ್ಚು ಅಂದರೆ ಶೇ.೭೫ ರಷ್ಟು ಮತ್ತು ಕಸಬಾ, ಉಳವಿ, ಕುಪ್ಪಗಡ್ಡೆ, ಜಡೆ ಭಾಗದಲ್ಲಿ ಶೇ. ೫೦ ರಷ್ಟು ಕಾಡು ಅತಿಕ್ರಮಣ, ಮರಗಳ ನಾಶ ಪ್ರಕರಣ ಕಂಡು ಬಂದಿದೆ. ಸಾಲದೆಂಬಂತೆ ಚಂದ್ರಗುತ್ತಿ ಭಾಗದಲ್ಲಿ ಅವ್ಯಾಹತ ಅನಧಿಕೃತ ಮರಳು ದಂಧೆಯೂ ನಡೆಯುತ್ತಿದೆ ಮತ್ತು ಅಕ್ರಮ ಗಣಿಗಾರಿಕೆಯಿಂದ ಕಂದಾಯ ಭೂಮಿಯಲ್ಲಿನ ನಿತ್ಯಹರಿಧ್ವರ್ಣದ ಕಾಡು ಒತ್ತುವರಿಯಾಗುತ್ತಿದೆ.ಕಂತನಹಳ್ಳಿ ಸ.ನಂ.೮ರಲ್ಲಿ ಒಟ್ಟು ೫೩೩ ಎಕರೆ ಅರಣ್ಯವಿದೆ. ಇದಕ್ಕೆ ತಾಗಿಕೊಂಡು ಸಾರೆಮರೂರು ಗ್ರಾಮದ ಸ.ನಂ.೨೭ರಲ್ಲಿ ೩೫೨ ಎಕರೆ ಅರಣ್ಯವಿದೆ. ಪ್ರಸ್ತುತ ಈ ಸ.ನಂ.ಗೆ ತಾಗಿಕೊಂಡು ಕೆಲ ಖಾಸಗಿ ಅಸ್ತಿಯೂ ಇದೆ. ಇದೇ ಸನಂನಲ್ಲಿ ಸುಮಾರು ೧೫ ಎಕರೆ ಅತಿಕ್ರಮಣವೂ ಆಗಿದೆ.
ಒತ್ತುವರಿ ಅಥವಾ ಅತಿಕ್ರಮಣಕ್ಕಾಗಿ ನಾಶಪಡಿಸಲು ಸಜ್ಜುಗೊಂಡಿರುವ ಕಾಡಿನಲ್ಲಿ ಬೆಲೆ ಬಾಳುವ ಮರಗಳನ್ನು ಕಟ್ಟಿಗೆ ಮಾಡಲು ಕತ್ತರಿಸಲಾಗಿದೆ. ಇನ್ನೂ ಕೆಲವು ಬಗರ್‌ಹುಕುಂಗಾಗಿ ಒತ್ತುವರಿಯಾಗುತ್ತಿದೆ. ಇದರಿಂದ ಬೃಹತ್ ಪೈಕಸ್ ಮರವನ್ನು ಧರೆಗುರುಳಿಸಿದ್ದು ಸಾವಿರಾರು ಪಕ್ಷಿಗಳ ಆವಾಸ, ಆಹಾರಕ್ಕೆ ಕುತ್ತು ತರಲಾಗಿದೆ. ನೂರಾರು ಪಕ್ಷಿಗಳ ಮೊಟ್ಟೆ, ಮರಿಗಳು ಅಸು ನೀಗಿವೆ.ಈಗಾಗಲೇ ಕೊಡಲಿ ಏಟು ನೀಡಿ ಧರೆಗುರುಳಿಸಲು ಸಜ್ಜಗೊಂಡಿರುವ ಕಂತನಹಳ್ಳಿ ಸುತ್ತುಮುತ್ತಲಿನ ಕಾಡಿನ ೮೦ಕ್ಕೂ ಹೆಚ್ಚು ಮರಗಳು ಐದಾರು ಎಕರೆ ವಿಸ್ತೀರ್ಣದಲ್ಲಿದ್ದು ಬೆಲೆಬಾಳುವ ಪಾರಂಪರಿಕ ಮರಗಳಾಗಿವೆ. ನಂದಿ, ಹೊನ್ನೆ, ಬಣಗಿ, ಮತ್ತಿ, ಹುಣಾಲು ಮುಂತಾದ ಜಾತಿಯವದ್ದಾಗಿದೆ. ಈ ಮರಗಳ ಕಡಿತಲೆ ವೇಳೆ ಸಾವಿರಾರು ಸಸ್ಯಗಳು ನಾಶಗೊಂಡಿವೆ ಎನ್ನಲಾಗಿದೆ.
ಅವ್ಯಾಹತವಾಗಿ ನಡೆಯುತ್ತಿರುವ ಕಾಡು ನಾಶ ಮತ್ತು ಅತಿಕ್ರಮಣದ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದರೂ ಪ್ರಭಾವಿ ವ್ಯಕ್ತಿಗಳ ಕೈವಾಡದಿಂದಾಗಿ ಅರಣ್ಯ ಇಲಾಖೆ ಬಾಯಿ ಮುಚ್ಚಿಸಿ ಪ್ರಕರಣವನ್ನು ತಿರುಚಲಾಗುತ್ತಿದೆ ಎಂಬ ಆರೋಪವೂ ಗ್ರಾಮಸ್ಥರಿಂದ ಕೇಳಿ ಬಂದಿದೆ.ತಾಲೂಕಿನ ಕಂತನಹಳ್ಳಿ ಗ್ರಾಮದ ಬಳಿ ನಡೆದಿದೆ ಎನ್ನಲಾದ ೧೫ ಎಕರೆ ಅತಿಕ್ರಮಣಕ್ಕೆ ಗ್ರಾಮದ ಪುಟ್ಟರಾಜು, ಕೃಷ್ಣಮೂರ್ತಿ, ಅನಿಲ್‌ಕುಮಾರ್ ಅವರ ವಿರುದ್ಧ ದೂರು ದಾಖಲಾಗಿದೆ. ಕಾಡು ಕಡಿಯಲು ಬಳಸಿದ ಮೆಷಿನ್ ಸೇರಿದಂತೆ ಇತರೆ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಜಾವೀದ್, ವಲಯ ಅರಣ್ಯಾಧಿಕಾರಿ, ಸೊರಬ.ಬ್ರಿಟಿಷ್ ಅಧಿಕಾರಿಗಳಿಂದ ಪ್ರಶಂಸೆ ಪಡೆದ ಸೊರಬ ತಾಲೂಕಿನ ೧೧೪ ಕಾನನಗಳಲ್ಲಿ ಪ್ರಸ್ತುತ ೧೪ ಕಾನನಗಳೂ ಪೂರ್ಣಪ್ರಮಾಣದಲ್ಲಿ ಉಳಿದಿಲ್ಲ. ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೊಸದಾಗಿ ಅರಣ್ಯ ಒತ್ತುವರಿ ಮಾಡಿ ಕಾಡು ನಾಶ ಮಾಡಬೇಡಿ ಎಂದು ಸೂಚಿಸುತ್ತಿದ್ದರೂ ಈಚೆಗೆ ಅವ್ಯಾಹತ ಕಾಡು ನಾಶವಾಗುತ್ತಿರುವುದು ಆತಂಕಕಾರಿ ಸಂಗತಿ.
ಶ್ರೀಪಾದ ಬಿಚ್ಚುಗತ್ತಿ, ಪರಿಸರ ಜಾಗೃತಿ ಟ್ರಸ್ಟ್ ಉಪಾಧ್ಯಕ್ಷ.