ಸಾರಾಂಶ
ಚಿಕ್ಕಮಗಳೂರು, ಕಾರ್ಮಿಕರು ಮತ್ತು ಮಾಲೀಕರ ನಡುವೆ ಪರಸ್ಪರ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಸಮನ್ವಯ ಸಮಿತಿ ರಚಿಸುವ ಮೂಲಕ ಇಬ್ಬರ ನಡುವೆ ಹೊಂದಾಣಿಕೆ ಗಟ್ಟಿಗೊಳಿಸಲು ಮುಂದಾಗುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಪ್ಲಾಂಟೇಷನ್ ಕಾರ್ಮಿಕರು ನೌಕರರ ಪ್ರತಿನಿಧಿಗಳ ಸಮಾವೇಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಾರ್ಮಿಕರು ಮತ್ತು ಮಾಲೀಕರ ನಡುವೆ ಪರಸ್ಪರ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಸಮನ್ವಯ ಸಮಿತಿ ರಚಿಸುವ ಮೂಲಕ ಇಬ್ಬರ ನಡುವೆ ಹೊಂದಾಣಿಕೆ ಗಟ್ಟಿಗೊಳಿಸಲು ಮುಂದಾಗುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.ನಗರದ ಜಿಲ್ಲಾ ಸ್ಕೌಟ್ಸ್ ಭವನದಲ್ಲಿ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಜಿಲ್ಲಾ ಘಟಕದಿಂದ ಭಾನುವಾರ ಏರ್ಪಡಿಸಿದ್ಧ ಪ್ಲಾಂಟೇಷನ್ ಕಾರ್ಮಿಕರು, ನೌಕರರ ಪ್ರತಿನಿಧಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ರಾಷ್ಟ್ರ ನಿರ್ಮಾಣದಲ್ಲಿ ಕಾರ್ಮಿಕರ ವರ್ಗ ಬಹುದೊಡ್ಡ ಪಾತ್ರ ವಹಿಸಿದ್ದು ಕಾರ್ಮಿಕರ ಹಿತಕ್ಕಾಗಿ ಕಾಂಗ್ರೆಸ್ ಹುಟ್ಟಿನಿಂದ ಶೋಷಿತರು, ಕಾರ್ಮಿಕರು ಹಾಗೂ ಹಿಂದುಳಿದವರ ಏಳಿಗೆಗೆ ಶ್ರಮಿಸಿದೆ. ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಾರ್ಮಿಕರಿಗೆ ವಿಶೇಷ ಪ್ರೋತ್ಸಾಹ ನೀಡಿ ಕಾಳಜಿ ವಹಿಸಿದೆ ಎಂದರು.ಕಾರ್ಮಿಕರ ನಿರಂತರ ಪರಿಶ್ರಮದಿಂದ ಮಾಲೀಕರು ಖುಷಿಯಿಂದ ಜೀವನ ಸಾಗಿಸಲು ಸಾಧ್ಯ. ಆ ನಿಟ್ಟಿನಲ್ಲಿ ಕಾರ್ಮಿಕರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡುವ ಭರವಸೆ ನೀಡಿದ ಅವರು, ವಿರೋಧ ಪಕ್ಷಗಳು ಕಾರ್ಮಿಕರ ನಡುವೆ ಜಾತಿ, ಧರ್ಮ ಹತ್ತಿಕ್ಕುವ ಕೆಲಸ ಕೈಬಿಟ್ಟು ನೈಜವಾಗಿ ಒದಗಿಸುವ ಸೌಲಭ್ಯದ ಕಡೆ ಹೆಚ್ಚು ಗಮನಹರಿಸಬೇಕು ಎಂದರು.ಕೋವಿಡ್ ಸಮಯದಲ್ಲಿ ಕೋಟ್ಯಂತರ ಮಂದಿ ಕಾರ್ಮಿಕರು ಸೌಖ್ಯವಾಗಿ ಜೀವಿಸಲು ಅನ್ನಭಾಗ್ಯದಂಥ ಯೋಜನೆ ಮುಖ್ಯ ಕಾರಣ. ಟ್ರೇಡ್ ಯೂನಿಯನ್ ಘಟಕದಲ್ಲಿ ತಾವು ಕೂಡಾ ಕೆಲ ಕಾಲ ಕಾರ್ಯನಿರ್ವ ಹಿಸಿದ್ದೇನೆ. ಮಾಲೀಕರಾಗಿ ಜೊತೆಗೆ ತಳಮಟ್ಟದಿಂದ ಕಾರ್ಮಿಕರ ನೋವನ್ನು ಅರಿತಿದ್ದು ಮೂಲ ಸವಲತ್ತಿಗೂ ಸರ್ಕಾರದಿಂದ ಕೈಜೋಡಿಸುತ್ತಿದ್ದೇವೆ ಎಂದು ಹೇಳಿದರು.ಕಾರ್ಯಕರ್ತರು ಹಾಗೂ ಕಾರ್ಮಿಕರು ಕಾಂಗ್ರೆಸ್‌ನಲ್ಲಿ ಜೋಡೆತ್ತುಗಳಂತೆ. ಒಂದನ್ನೊಂದು ಬಿಟ್ಟು ಎಂದಿಗೂ ಸಾಗುವುದಿಲ್ಲ. ಪಕ್ಷದಲ್ಲಿ ತ್ಯಾಗದ ಮನೋಭಾವ ಹೊಂದಿರುವುದರಿಂದ ಕಾರ್ಮಿಕರಿಗೆ ಜನಪರ ಕಾರ್ಯಕ್ರಮ ರೂಪಿಸಿ ಅನುಷ್ಟಾನ ಗೊಳಿಸಲಾಗಿದೆ ಎಂದು ಹೇಳಿದರು.ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ, ತೋಟದ ಮಾಲೀಕರು ಹಾಗೂ ಕಾರ್ಮಿ ಕರು ಹೊಂದಾಣಿಕೆ ಇದ್ದಲ್ಲಿ ಮಾತ್ರ ಈರ್ವರ ಬದುಕು ಸುಗಮವಾಗಿ ಸಾಗಲು ಸಾಧ್ಯ. ಹೀಗಾಗಿ ಕಾರ್ಮಿಕರ ಕುಶಲೋಪಚಾರ ವಿಚಾರಿಸಿ ಸಂಕಷ್ಟಗಳಿಗೆ ಸ್ಪಂದಿಸುವ ಗುಣ ಬೆಳೆದಾಗ ಮಾಲೀಕರು ಹಾಗೂ ಕಾರ್ಮಿಕರು ಮುನ್ನೆಡೆಯಲು ಸಾಧ್ಯ ಎಂದರು.ಐಎನ್‌ಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಕಾರ್ಮಿಕರಿಗೆ ಕನಿಷ್ಟ ಕೂಲಿ ಪ್ರಕಟಿಸ ಬೇಕು. ವಲಸೆ ಹಾಗೂ ಸ್ಥಳೀಯ ಕಾರ್ಮಿಕರೊಂದಿಗೆ ಪರಸ್ಪರ ಬಾಂಧವ್ಯ ವೃದ್ಧಿಸಲು ಕ್ರಮ ವಹಿಸಬೇಕು. ಗ್ಯಾಜ್ಯೂಟಿಯನ್ನು ವರ್ಷಕ್ಕೆ ಕನಿಷ್ಠ 30 ದಿನಕ್ಕೆ ವಿಸ್ತರಿಸುವ ನೀತಿ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಐಎನ್‌ಟಿಯುಸಿ ರಾಜ್ಯಾಧ್ಯಕ್ಷ ಲಕ್ಷ್ಮೀವೆಂಕಟೇಶ್, ಜಿಲ್ಲಾಧ್ಯಕ್ಷ ರಾಮಚಂದ್ರ ಒಡೆಯರ್, ಕಾರ್ಯದರ್ಶಿ ಎ.ಪಿ.ಸೆಲ್ವಂ ಉಪಸ್ಥಿತರಿದ್ದರು. 26 ಕೆಸಿಕೆಎಂ 2ಚಿಕ್ಕಮಗಳೂರು ಜಿಲ್ಲಾ ಸ್ಕೌಟ್ಸ್ ಭವನದಲ್ಲಿ ಭಾನುವಾರ ಏರ್ಪಡಿಸಿದ್ಧ ಪ್ಲಾಂಟೇಷನ್ ಕಾರ್ಮಿಕರು ನೌಕರರ ಪ್ರತಿನಿಧಿಗಳ ಸಮಾವೇಶವನ್ನು ಸಚಿವ ಕೆ.ಜೆ. ಜಾರ್ಜ್‌ಉದ್ಘಾಟಿಸಿದರು. ಶಾಸಕ ಎಚ್.ಡಿ. ತಮ್ಮಯ್ಯ, ಲಕ್ಷ್ಮೀವೆಂಕಟೇಶ್, ಎಂ.ಸಿ. ಶಿವಾನಂದಸ್ವಾಮಿ, ರಾಮಚಂದ್ರ ಒಡೆಯರ್ ಇದ್ದರು.