ಸಾರಾಂಶ
ದೊಡ್ಡಬಳ್ಳಾಪುರ: ಸಾಂವಿಧಾನಿಕ ಆಶಯಗಳನ್ನು ಗೌರವಿಸುವ ಮೂಲಕ ದೇಶದ ಏಕತೆ ಹಾಗೂ ಸಮಗ್ರತೆಯನ್ನು ರಕ್ಷಿಸುವ ಹೊಣೆಗಾರಿಕೆ ಎಲ್ಲ ನಾಗರಿಕರ ಮೇಲಿದೆ ಎಂದು ಉಪವಿಭಾಗಾಧಿಕಾರಿ ದುರ್ಗಾಶ್ರೀ ಹೇಳಿದರು.
ಇಲ್ಲಿನ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ದೊಡ್ಡಬಳ್ಳಾಪುರ ಉಪವಿಭಾಗ ಹಾಗೂ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಜಾಗತಿಕ ಮಟ್ಟದಲ್ಲಿ ಭಾರತ ತನ್ನ ಹೆಗ್ಗುರುತು ಪಡೆಯುವಲ್ಲಿ ಮಹತ್ವದ ದಾಪುಗಾಲು ಇಟ್ಟಿದೆ. ಯಾವುದೇ ರಾಷ್ಟ್ರಕ್ಕೆ 75 ವರ್ಷ ಎನ್ನುವುದು ಒಂದು ಸುದೀರ್ಘ ಪಯಣ. ಸಂವಿಧಾನ ಜಾರಿಯಾದ ಮೇಲೆ 75 ವರ್ಷಗಳು ಗಣರಾಜ್ಯದ ಸರ್ವತೋಮುಖ ಪ್ರಗತಿಯಿಂದ ಗುರುತಿಸಲ್ಪಟ್ಟಿದೆ. ದೇಶದ ಆರ್ಥಿಕತೆ, ಜಾಗತಿಕ ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತಿದ್ದು, ಭಾರತ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನಾಯಕತ್ವದ ಸ್ಥಾನ ಪಡೆಯುತ್ತಿರುವುದು ಹೆಗ್ಗಳಿಕೆ ವಿಷಯ ಎಂದರು.
ಶಾಸಕ ಧೀರಜ್ ಮುನಿರಾಜ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ದೇಶದ ಆರ್ಥಿಕತೆಯ ಬೆಳವಣಿಗೆ ದರ ನಿರಂತರವಾಗಿ ಹೆಚ್ಚಾಗುತ್ತಿದೆ. ಇದರಿಂದ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಯಾಗುತ್ತಿದೆ. ದಿಟ್ಟ ಮತ್ತು ದೂರದೃಷ್ಟಿಯ ಆರ್ಥಿಕ ಸುಧಾರಣೆಗಳು ಮುಂಬರುವ ವರ್ಷಗಳಲ್ಲಿ ಪ್ರಗತಿಯ ವೇಗವನ್ನು ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಗಲಿದೆ. ದೇಶದ ಸಮಗ್ರತೆ ರಕ್ಷಿಸಲು ಸಂವಿಧಾನ ಮಾರ್ಗದರ್ಶಿ ಎಂದು ಹೇಳಿದರು.ಆಕರ್ಷಕ ಪರೇಡ್, ಸನ್ಮಾನ:
ಇದೇ ವೇಳೆ ವಿವಿಧ ಶಾಲಾ ಕಾಲೇಜುಗಳು, ಭಾರತ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್, ಪೊಲೀಸ್ ದಳಗಳು, ಬ್ಯಾಂಡ್ ವೃಂದದಿಂದ ಆಕರ್ಷಕ ಪರೇಡ್ ನಡೆಯಿತು. ಉಪವಿಭಾಗಾಧಿಕಾರಿ ಹಾಗೂ ಶಾಸಕರು ಪೆರೇಡ್‌ನ ಗೌರವ ರಕ್ಷೆ ಸ್ವೀಕರಿಸಿದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳು ಮತ್ತು ಗಣ್ಯರನ್ನು ಸನ್ಮಾನಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಗರಸಭೆ ಅಧ್ಯಕ್ಷ ಸುಮಿತ್ರ, ಉಪಾಧ್ಯಕ್ಷ ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾರ್, ತಹಶೀಲ್ದಾರ್ ವಿಭಾವಿದ್ಯಾ ರಾಥೋಡ್, ಪೌರಾಯುಕ್ತ ಕಾರ್ತಿಕೇಶ್ವರ್, ತಾಪಂ ಇಒ ಮುನಿರಾಜು, ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಿದ್ದರು.
(ಫೋಟೋ ಕ್ಯಾಪ್ಷನ್)ದೊಡ್ಡಬಳ್ಳಾಪುರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕ್ರೀಡಾ ಸಾಧಕ ಮಕ್ಕಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರನ್ನು ಸನ್ಮಾನಿಸಲಾಯಿತು.