ಸೂಡಿಯಲ್ಲಿ ಜನವರಿ 28ರಂದು ಗುರು ಮಹಾಂತ ಮಹಾಸ್ವಾಮಿಗಳ ಪುಣ್ಯಾರಾಧನೆ

| Published : Jan 28 2025, 12:45 AM IST

ಸೂಡಿಯಲ್ಲಿ ಜನವರಿ 28ರಂದು ಗುರು ಮಹಾಂತ ಮಹಾಸ್ವಾಮಿಗಳ ಪುಣ್ಯಾರಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಗಜೇಂದ್ರಗಡ ತಾಲೂಕಿನ ಸುಕ್ಷೇತ್ರ ಸೂಡಿಯಲ್ಲಿ ಜ. 28ರಂದು ಶಿವಯೋಗಿ, ಕಾಯಕ ಯೋಗಿಗಳಾದ ಜಗದ್ಗುರು ಗುರು ಮಹಾಂತ ಮಹಾಸ್ವಾಮಿಗಳ ೫೭ನೇ ಪುಣ್ಯಾರಾಧನೆ ನಡೆಯಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮ, ಮೆರವಣಿಗೆ, ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ.

ಗಜೇಂದ್ರಗಡ: ತಾಲೂಕಿನ ಸುಕ್ಷೇತ್ರ ಸೂಡಿಯಲ್ಲಿ ಜ. 28ರಂದು ಶಿವಯೋಗಿ, ಕಾಯಕ ಯೋಗಿಗಳಾದ ಜಗದ್ಗುರು ಗುರು ಮಹಾಂತ ಮಹಾಸ್ವಾಮಿಗಳ ೫೭ನೇ ಪುಣ್ಯಾರಾಧನೆ ನಡೆಯಲಿದೆ.

ಅಂದು ಬ್ರಾಹ್ಮೀ ಮುಹೂರ್ತದಲ್ಲಿ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ನಡೆಯಲಿದೆ. ಶ್ರೀಗಳ ಭಾವಚಿತ್ರ ಮೆರವಣಿಗೆ ಊರ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಮೆರವಣಿಗೆಯಲ್ಲಿ ಸೂಡಿ, ಸಂಕನೂರು, ದ್ಯಾಮುಣಸಿ, ಬೇವಿನಕಟ್ಟಿ, ರಾಜೂರ, ಹಿರೇಮ್ಯಾಗೇರಿ, ಮುಂತಾದ ಗ್ರಾಮಗಳಿಂದ ಆಗಮಿಸುವ ಡೊಳ್ಳುಕುಣಿತ, ಕರಡಿಮಜಲು, ವೀರಗಾಸೆ, ಭಜನೆ ಪದಗಳ ತಂಡ ಭಾಗವಹಿಸಲಿವೆ. ಪುಣ್ಯಾರಾಧನೆ ನಿಮಿತ್ತ ಎರಡು ದಿನಗಳ ಪರ್ಯಂತ ಪುರಾಣ ಶ್ರವಣ, ಶರಣ ಸಂದೇಶ, ವಿದ್ವಾಂಸರ ಉಪನ್ಯಾಸಗಳು, ಸಂಗೀತ ಗೋಷ್ಠಿಗಳು ನಡೆಯಲಿವೆ. ಅನ್ನ, ಜ್ಞಾನ, ದಾಸೋಹಗಳು ಇರಲಿವೆ. ಇದೇ ವೇಳೆ ೮ನೇ ವರ್ಷದ ಸಾಮೂಹಿಕ ವಿವಾಹಗಳು ನಡೆಯಲಿವೆ.

ಗುರು ಮಹಾಂತೇಶ ಶಿವಯೋಗಿಗಳು: ಮಹಾತ್ಮರಂ ನೆನೆವುದೇ ಘನಮುಕ್ತಿ ಪದದ ಶಿವಾಧವಾ ಎಂದು ಹೇಳುವಂತೆ ಮಹಾತ್ಮರನ್ನು ಸ್ಮರಿಸುವುದೇ ಮುಕ್ತಿಪದ.

ಗುರು ಮಹಾಂತೇಶ - ಈ ಷಡಕ್ಷರಗಳೇ ಈ ನಾಡಿನ ಜನತೆಗೆ ಷಡ್ವೈರಿಗಳ ಗೆಲ್ಲುವ ಮಹಾಮಂತ್ರ, ಭವಸಾಗರ ದಾಟುವ ತಂತ್ರ ಜೀವನೋಪಾಯದ ಯಂತ್ರ, ಮಹಾತ್ಮರು ಧರ್ಮ ಸೂರ್ಯರಂತೆ ಈ ನಾಡಿನಲ್ಲಿ ಉಜ್ವಲವಾಗಿ ಬೆಳಗಿ ಕಣ್ಮರೆಯಾದರು. ಅವರ ಭೌತಿಕ ಶರೀರ ನಮಗೆ ಕಾಣುವುದಿಲ್ಲವಾದರೂ ಅವರ ಚಿನ್ಮಯ ಶರೀರ ಕೋಟಿ-ಕೋಟಿ ಶಿಷ್ಯರ ಹೃದಯದಲ್ಲಿ ಸ್ಥಾಪನೆಯಾಗಿದೆ. ಜಗದ್ಗುರುಗಳನ್ನು ನಾವು ಯಾರಿಗೂ ಹೋಲಿಸಲಿಕ್ಕೆ ಸಾಧ್ಯವಿಲ್ಲ. ಆಕಾಶಕ್ಕೆ, ಆಕಾಶವೇ ಹೋಲಿಕೆ, ಸಮುದ್ರಕ್ಕೆ ಸಮುದ್ರವೇ ಹೋಲಿಕೆ ಹಾಗೆ ಲಿಂ. ಜಗದ್ಗುರು ಗುರು ಮಹಾಂತೇಶ ಶಿವಯೋಗಿಗಳಿಗೆ ಅವರೇ ಹೋಲಿಕೆ.

ಸಂಸ್ಥಾನ ಮೈಸೂರು ಮಠದ ೧೯ನೆಯವರಾದ ಲಿಂ. ಜಗದ್ಗುರು ಗುರು ಮಹಾಂತೇಶ ಮಹಾಸ್ವಾಮಿಗಳು ಸೂಡಿಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಅನೇಕ ಲೋಕ ಕಲ್ಯಾಣದ ಕಾರ್ಯಗಳನ್ನು ಮಾಡಿದರು. ವೈರಾಗ್ಯಮೂರ್ತಿಗಳಾದ ಶ್ರೀಗಳು ಪೂಜಾನುಷ್ಠಾನ ನಿರತರು ಸಾತ್ವಿಕ ಶ್ರೇಷ್ಠರು, ಮಹಾತಪಸ್ವಿಗಳು. ಎಲ್ಲ ಮೋಹ ಬಂಧನವನ್ನು ಹರಿದೊಗೆದು ಲೋಕವೇ ನನ್ನ ಮನೆ, ಜಗದ ಜನರೆಲ್ಲ ನನ್ನ ಬಂಧುಗಳು ಎಂದು ಭಾವಿಸಿದ್ದರು.

ಶ್ರೀಗಳ ತಪಶ್ಯಕ್ತಿ, ಲಿಂಗನಿಷ್ಠ ಗರಿಷ್ಠತೆಯಿಂದ ನಾನಾ ಭಾಗಗಳಲ್ಲಿ ಸಂಚರಿಸಿ, ಧರ್ಮ, ತತ್ವಬೋಧ ಮಾಡಿ ಜನರಲ್ಲಿ ದೈವೀ ಶ್ರದ್ಧೆ ಭಾವೈಕ್ಯತೆಯನ್ನು ತರಲು ಹಗಲಿರುಳು ಶ್ರಮಿಸಿದರು. ಧರ್ಮ ಅವರಿಗೆ ಕೇವಲ ಬೋಧನೆಯಾಗಿರಲಿಲ್ಲ! ಸ್ವತಃ ಸಾಧನೆ ಮಾಡಿದ್ದರು. ನಡೆದಾಡುವ ದೇವರಾಗಿದ್ದರು. ಧರ್ಮದ ಸಾಕಾರ ಮೂರ್ತಿಯಾಗಿದ್ದರು. ಶಂಕರಾಚಾರ್ಯರ ಉಕ್ತಿಯಂತೆ ಶಾಂತರೂ, ಮಹಾಂತರೂ ಆದ ಸಂತರು ವಸಂತದ ಹಾಗೆ ಲೋಕ ಹಿತಕ್ಕಾಗಿ ಸಂಚಾರ ಮಾಡುತ್ತಾರೆ. ಲಿಂ. ಜಗದ್ಗುರುಗಳು ತಪಸ್ಸು, ವೈರಾಗ್ಯ, ಧ್ಯಾನ, ತ್ಯಾಗ ಗುಣಗಳಿಂದ ಮಾನವ ಜನಾಂಗವನ್ನು ತಿದ್ದಿ ಸನ್ಮಾರ್ಗ-ಸತ್ಸಂಗದಲ್ಲಿ ಮುನ್ನಡೆಸಿದರು.

ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ, ಪ್ರಮಾಣದಲ್ಲಿ ನಿರ್ಭಯ, ಚಿತ್ತದಲ್ಲಿ ನಿರಪೇಕ್ಷ, ವಿಷಯದಲ್ಲಿ ಉದಾಸೀನತೆ, ಭಾವದಲ್ಲಿ ದಿಗಂಬರ, ಜ್ಞಾನದಲ್ಲಿ ಪರಮಾನಂದರಾದ ಮೈಸೂರು ಮಠದ ೨೦ನೇ ಪೀಠಾಧಿಪತಿ ವಿಜಯ ಮಹಾಂತ ಮಹಾ ಸ್ವಾಮಿಗಳು ಶ್ರೀ ಮಠದ ಗುರುತರ ಹೊಣೆ ಹೊತ್ತುಕೊಂಡು, ಅದರ ಘನತೆ - ಗೌರವ ಕೀರ್ತಿ ಹೆಚ್ಚಿಸಿದರು. ಅದು ಶ್ರೀಗಳವರ ಕರ್ತೃತ್ವ ಶಕ್ತಿಗೆ ನಿದರ್ಶನವೆನಿಸಿದೆ. ಈ ಪೀಠದ ಶ್ರೇಯೋಭಿವೃದ್ಧಿಗೆ, ಜನ ಕಲ್ಯಾಣಕ್ಕಾಗಿ. ಧರ್ಮ, ಶಿಕ್ಷಣ, ಸಾಹಿತ್ಯ, ಕಲೆ, ಸಾಂಸ್ಕೃತಿಕ ಏಳ್ಗೆಗಾಗಿ ಕಾರ್ಯಗಳು ಧರ್ಮಾರ್ಹವೆನಿಸಿವೆ.

ರಾಜ ಪೂಜಿತರಾದ ಶ್ರೀಗಳು ಭಕ್ತರ ಸೇವೆಯೇ ನಿಜವಾದ ಶಿವಪೂಜೆ ಎಂದು ಅರಿತು, ಲೋಕ ಸಂಚಾರ ಮಾಡುತ್ತಾ, ತಮ್ಮ ಅಪಾರವಾದ ಅಂತಃಕರಣ ತಪಃ ಪ್ರಭಾವದಿಂದ ಭಕ್ತರ ಮನದ ಕತ್ತಲೆಯನ್ನು ಕಳೆದು ಬೆಳಕು ಬೀರುತ್ತ ಸಾಗಿದ್ದಾರೆ. ಶ್ರೀ ಗುರುವಿನ ಪವಿತ್ರ ಮಾರ್ಗದಲ್ಲಿ ನಡೆದು ಮೈಸೂರು ಸಂಸ್ಥಾನ ಪೀಠದ ಕೀರ್ತಿಯನ್ನು ಮತ್ತಷ್ಟು ಉಜ್ವಲಗೊಳಿಸಿದ್ದಾರೆ. ತಮ್ಮ ದಿವ್ಯ ಶಕ್ತಿಯಿಂದ ದೀನ ದಲಿತರನ್ನು, ದುಃಖಿತರನ್ನು, ರೋಗ ಪೀಡಿತರನ್ನು ಉದ್ಧರಿಸುತ್ತಾ ಶ್ರೀಗಳು ತಮ್ಮ ಪ್ರತಿಭೆ, ಪಾಂಡಿತ್ಯ, ಕರ್ತೃತ್ವ ಶಕ್ತಿ, ಸಾಮಾಜಿಕ ಕಳಕಳಿ, ಧರ್ಮನಿಷ್ಠ ಸಾಂಸ್ಕೃತಿಕ ಶ್ರೀಮಂತಿಕೆಯನ್ನುಂಟು ಮಾಡುತ್ತಾ ಲೋಕ ಕಲ್ಯಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೃಪೆಗೆ ಪಾತ್ರರಾಗಿ: ಶ್ರೀಗಳು ಸೂಡಿ, ಗಜೇಂದ್ರಗಡ, ಹನುಮಸಾಗರ ಸುಕ್ಷೇತ್ರಗಳಲ್ಲಿ ಕನ್ನಡ ಕಾನ್ವೆಂಟ್, ಪ್ರೌಢಶಾಲೆ, ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಉಚಿತ ಪ್ರಸಾದ ನಿಲಯಗಳನ್ನು ಬೆಳೆಸಿ, ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕಾಗಿದ್ದಾರೆ. ಸೂಡಿಯ ಕ್ಷೇತ್ರದಲ್ಲಿ ಜರುಗುವ ಲಿಂ. ಶ್ರೀ ಗುರುವಿನ ಪುಣ್ಯಾರಾಧನೆಗೆ ಭಕ್ತರು ತಮ್ಮ ತನು, ಮನ, ಧನಗಳನ್ನು ಉದಾರವಾಗಿ ಅರ್ಪಿಸುವ ಮೂಲಕ, ಗುರು ಕೃಪೆಗೆ ಪಾತ್ರರಾಗಬೇಕು ಎಂದು ಬೆಳವಣಕಿ ಶೇಖರ ಎಸ್. ತೋಗುಣಶಿ ಹೇಳಿದರು.