-ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ₹1 ಕೋಟಿ ಅನುದಾನದ ಕಾಮಗಾರಿಗೆ ಶಾಸಕ ಎಂ.ವೈ. ಪಾಟೀಲ ಅಡಿಗಲ್ಲು

-----

ಕನ್ನಡಪ್ರಭ ವಾರ್ತೆ ಅಫಜಲಪುರ

ಗೌರ (ಬಿ) ವಲಯದ ವ್ಯಾಪ್ತಿಯ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಬಹಳ ಕಡಿಮೆ ಇದ್ದು, ಈ ಭಾಗದಲ್ಲಿ ಬೋರಿ ಹಳ್ಳ ಹರಿಯುತ್ತಿದೆ. ಪ್ರತಿವರ್ಷ ಮಳೆಗಾಲದಲ್ಲಿ ಸಾಕಷ್ಟು ನೀರು ಬಂದು ಭೀಮಾ ನದಿ ಸೇರುತ್ತಿದೆ. ಅದಕ್ಕಾಗಿ ಆ ನೀರನ್ನು ಬಳಸಿಕೊಳ್ಳಲು ಈ ಭಾಗದಲ್ಲಿ ₹7.50 ಕೋಟಿ ವೆಚ್ಚದ ಅತ್ಯಾಧುನಿಕ ಬ್ಯಾರೇಜ್‌ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಎಂ.ವೈ. ಪಾಟೀಲ ಹೇಳಿದರು.

ಅವರು ತಾಲೂಕಿನ ಗೌರ (ಬಿ) ಗ್ರಾಮದಲ್ಲಿ 20024-25ನೇ ಸಾಲಿನ ಕೆಕೆಆರ್‌ಡಿಬಿ ಅನುದಾನದಡಿ ಎಸ್‌ಸಿಪಿ ಯೋಜಯಲ್ಲಿ ಗೌರ(ಬಿ) ಗ್ರಾಮದ ಮುಖ್ಯರಸ್ತೆಯಿಂದ ಸರ್ಕಾರಿ ಶಾಲೆಯವರೆಗೆ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ₹1 ಕೋಟಿ ಅನುದಾನದ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿ. ಈ ಭಾಗದಲ್ಲಿ ಬೋರಿಹಳ್ಳ ಹರಿಯುತ್ತಿದ್ದರೂ ಅನುಕೂಲವಾಗುತ್ತಿಲ್ಲ. ಎಲ್ಲಾ ನೀರು ಭೀಮಾ ನದಿ ಸೇರುತ್ತಿದೆ. ಹೀಗಾಗಿ ಈ ಭಾಗದಲ್ಲಿ ಕೃಷಿ ಮತ್ತು ಕುಡಿವ ನೀರಿಗೆ ತೊಂದರೆಯಾಗುತ್ತಿದೆ. ಅದಕ್ಕಾಗಿ ಈ ಭಾಗದಲ್ಲಿ ಬ್ಯಾರೇಜ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಇದ್ದು ಅದಕ್ಕೆ ಕುಡಿವ ನೀರಿನ ತೊಂದರೆ ಇದೆ ಎಂದು ಗ್ರಾಮಸ್ಥರು ಹೇಳಿದ್ದೀರಿ. ಶಾಲಾ ಆವರಣದಲ್ಲಿ ಕೊಳವೆಬಾವಿ ಕೊರೆಯಿಸಲಾಗುವುದು. ಸದ್ಯಕ್ಕೆ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ನಿವಾರಣೆಗಾಗಿ ಕೊಳವೆ ಬಾವಿಯಿಂದ ಗ್ರಾಮದವರಿಗೆ ಪೈಪ್‌ಲೈನ್ ಮಾಡಿಸಲು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ರಾಠೋಡ್‌ ಅವರಿಗೆ ತಿಳಿಸಿದ್ದೇನೆ ಎಂದು ಹೇಳಿದರು.


ಈ ವೇಳೆ ತಾಲೂಕು ಬ್ಲಾಕ್‌ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವಾನಂದ ಗಾಡಿ ಸಾಹುಕಾರ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಶಿವಶರಣ ನಾಟಿಕಾರ, ಮುಖಂಡರಾದ ಶ್ರೀಶೈಲ ಪಾಟೀಲ, ಬಸವರಾಜ ಕಾಚಾಪೂರ, ಶ್ರೀಶೈಲ ಪಾಟೀಲ, ನಾಗರಾಜ ದಿವಾಣಜಿ, ಪ್ರಕಾಶ ದೊಡ್ಮನಿ, ರಾಹುಲ್ ಸಿಂಗೆ, ಶಿವರಾಯ ವಠಾರ, ಮಹಾನಿಂಗ ಅಂಗಡಿ, ರವಿ ಸಿಂಗೆ, ಯಲ್ಲಪ್ಪ ಸಾಪಳಿ ಇತರರಿದ್ದರು.