ಕನ್ನಡಪ್ರಭ ವಾರ್ತೆ ನಾಗಮಂಗಲ

ಪಟ್ಟಣ ವ್ಯಾಪ್ತಿಯಲ್ಲಿ ಎಸ್‌ಐಆರ್ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ಮತದಾರರ ಮನೆಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಶನಿವಾರ ದಿಢೀರ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಮತದಾರರಿಂದ ಮಾಹಿತಿ ಪಡೆದರು. ಈ ವೇಳೆ ಎಸ್‌ಐಆರ್ ನೋಂದಣಿಯಲ್ಲಿ ಕೆಲ ತಾಂತ್ರಿಕ ದೋಷ ಮಾಡಿದ್ದ ಬಿಎಲ್‌ಒ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಪಟ್ಟಣದ ಟಿ.ಬಿ.ಬಡಾವಣೆಯ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ರಸ್ತೆಯಲ್ಲಿ ಪುರಸಭೆ ಅಧಿಕಾರಿಗಳು ಮತ್ತು ಬಿಎಲ್‌ಒ ಶನಿವಾರ ಎಸ್‌ಐಆರ್ ನೋಂದಣಿ ಕಾರ್ಯ ನಡೆಸುತ್ತಿದ್ದರು. ಇದರ ಮಾಹಿತಿ ಪಡೆದ ಜಿಲ್ಲಾಧಿಕಾರಿ ಡಾ.ಕುಮಾರ ಅವರು ದಿಢೀರ್ ಭೇಟಿ ಕೊಟ್ಟು ಮತದಾರರಿಂದ ಎಸ್‌ಐಆರ್ ಸಂಬಂಧಿತ ಮಾಹಿತಿ ಪಡೆದುಕೊಂಡರು. ಈ ವೇಳೆ ಮತದಾರರು ಭರ್ತಿ ಮಾಡಿದ್ದ ಎಸ್‌ಐಆರ್ ಫಾರಂ ಹಾಗೂ ಮ್ಯಾಪಿಂಗ್ ಆಗಿರುವುದನ್ನು ಪರಿಶೀಲನೆ ನಡೆಸಿದರು.

ಮ್ಯಾಪಿಂಗ್ ವೇಳೆ ಕೆಲವು ತಾಂತ್ರಿಕ ಲೋಪದೋಷಗಳು ಕಂಡುಬಂದ ಹಿನ್ನೆಲೆ ಸಂಬಂಧಿಸಿದ ಬಿಎಲ್‌ಒ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಮ್ಯಾಪಿಂಗ್‌ನಲ್ಲಿ ತಪ್ಪು ಮಾಹಿತಿ ನಮೂದಿಸಿದ್ದರಿಂದ ಬಿಎಲ್‌ಒ ವಿರುದ್ಧ ಗರಂ ಆದ ಡೀಸಿ, ಬಿಎಲ್‌ಒ ಬಳಿ ಕೆಲವು ಮಾಹಿತಿ ಕೇಳಿದಾಗ ಸರಿಯಾದ ಮಾಹಿತಿ ನೀಡಲು ಬಿಎಲ್‌ಒ ತಡಬಡಾಯಿಸಿದರು. ಇದರಿಂದ ಮತ್ತಷ್ಟು ಕೋಪಗೊಂಡ ಜಿಲ್ಲಾಧಿಕಾರಿಗಳು ಈ ಬಿಎಲ್‌ಒ ಅನ್ನು ತೆಗೆದು ಬೇರೆ ಬಿಎಲ್‌ಒ ನಿಯೋಜಿಸುವಂತೆ ಸ್ಥಳದಲ್ಲಿದ್ದ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು.

ಈ ಮತಗಟ್ಟೆಯಲ್ಲಿ ಕೇವಲ ಶೇ.53ರಷ್ಟು ಎಸ್‌ಐಆರ್ ನೊಂದಣಿ ಪ್ರಕ್ರಿಯೆಯಾಗಿದೆ. ತಾಲೂಕಿನಲ್ಲಿಯೇ ಅತೀ ಕಡಿಮೆ ಪ್ರಗತಿ ಸಾಧಿಸಿರುವ ಮತಗಟ್ಟೆ ಇದಾಗಿದೆ. ಇಂತವುಗಳನ್ನು ಪರಿಶೀಲಿಸಿ ಪ್ರಗತಿ ಸಾಧಿಸಲು ಕ್ರಮವಹಿಸಿ, ಅನುಭವಿ ಬಿಎಲ್‌ಒಗಳನ್ನು ನಿಯೋಜಿಸಿ ಆದಷ್ಟು ಬೇಗ ಎಸ್‌ಐಆರ್ ನೊಂದಣಿ ಪ್ರಕ್ರಿಯೆ ಮುಗಿಸಬೇಕು ಎಂದು ತಹಸೀಲ್ದಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ತಾಕೀತು ಮಾಡಿದರು.

ಈ ವೇಳೆ ತಹಸೀಲ್ದಾರ್ ಅಶೋಕ್, ತಾ.ಪಂ.ಇಒ ಬಿ.ಎಸ್.ಸತೀಶ್, ಪುರಸಭೆ ಮುಖ್ಯಾಧಿಕಾರಿ ವೀಣಾ, ರಾಜಸ್ವ ನಿರೀಕ್ಷಕ ಗೋವಿಂದರಾಜು ಇದ್ದರು.