ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮುಧೋಳ ತಾಲೂಕಿನ ಜಾಲಿಬೇರಿ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ರೈಲ್ವೆ ಸೇತುವೆ ನಿರ್ಮಾಣ ಕುರಿತು ಸಂಸದ ಪಿ.ಸಿ.ಗದ್ದಿಗೌಡ ಅವರ ಅಧ್ಯಕ್ಷತೆಯಲ್ಲಿ ರೈಲ್ವೆ ಅಧಿಕಾರಿಗಳು ಹಾಗೂ ರೈತರೊಂದಿಗೆ ಸಭೆ ಜರುಗಿತು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಜರುಗಿದ ಸಭೆಯಲ್ಲಿ ಬಾಗಲಕೋಟೆ ಕುಡಚಿ ರೈಲು ಮಾರ್ಗ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದ್ದು, ಜಾಲಿಬೇರಿ ಭಾಗದಲ್ಲಿ ಘಟಪ್ರಭಾ ನದಿಗೆ ರೈಲು ಸೇತುವೆ ನಿರ್ಮಾಣ ಮಾಡುವ ಅಗತ್ಯವಿದೆ. ವೈಜ್ಞಾನಿಕವಾಗಿ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು. ಅದೇ ಸಮಯದಲ್ಲಿ ರೈತರ ಹಿತಾಶಕ್ತಿಗೆ ಯಾವುದೇ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಜಿಲ್ಲೆಯಲ್ಲಿ ಘಟಪ್ರಭಾ ನದಿಯಿಂದ ಉಂಟಾಗುವ ಪ್ರವಾಹವನ್ನು ಆಧರಿಸಿ ಸೇತುವೆ ನಿರ್ಮಾಣ ಕುರಿತು ಯೋಜನೆ ಸಿದ್ದಪಡಿಸಬೇಕು. ಪ್ರವಾಹ ಬಂದಾಗ ರೈತರ ಜಮೀನುಗಳಿಗೆ ನೀರು ಹೋಗದ ರೀತಿಯಲ್ಲಿ ವೈಜ್ಞಾನಿಕವಾಗಿ ಸೇತುವ ನಿರ್ಮಿಸುವ ನಿಟ್ಟಿನಲ್ಲಿ ಕೆಬಿಜೆಎನ್ಎಲ್, ರೈಲ್ವೆ ಅಧಿಕಾರಿಗಳು ಹಾಗೂ ರೈತರೊಂದಿಗೆ ಜಂಟಿ ಸ್ಥಳ ಪರಿಶೀಲಿಸಿ, ನೀರಿನ ಹರಿವು ನೋಡಿಕೊಂಡು ಯೋಜನೆ ರೂಪಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಭಾರತೀಯ ರೈಲ್ವೆ ಇಲಾಖೆಯ ಡೆಪ್ಯೂಟಿ ಸಿಇ ಶಿವುಕುಮಾರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜು ನಾಯಕ, ಆಡಳಿತಾಧಿಕಾರಿ ಉಮೇಶ ನಾಯಕ, ಎಡಿಎಲ್ಆರ್ ಮಹೇಶ ಪತ್ತಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.


ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಂಡರೆ ರೈಲು ಸಂಚಾರಕ್ಕೆ ಅನುಕೂಲವಾಗುವದರ ಜತೆಗೆ ಜಿಲ್ಲೆಯ ಮೂಲಸೌಕರ್ಯ ಅಭಿವೃದ್ಧಿಗೂ ಹೊಸ ಉತ್ತೇಜನ ದೊರೆಯಲಿದೆ. ಆದ್ದರಿಂದ ಕಾಮಗಾರಿಯ ಪ್ರತಿಯೊಂದು ಹಂತವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ರೈತರ ಹಿತಾಸಕ್ತಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವಿಶೇಷ ಕಾಳಜಿ ವಹಿಸಬೇಕು. ರೈತರು ಸಲ್ಲಿಸಿರುವ ನ್ಯಾಯಸಮ್ಮತ ಬೇಡಿಕೆಗಳನ್ನು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು.

-ಪಿ.ಸಿ.ಗದ್ದಿಗೌಡರ, ಸಂಸದ