ಕನ್ನಡಪ್ರಭ ವಾರ್ತೆ ಬಾದಾಮಿ

ಕಳ್ಳಭಟ್ಟಿ ಸರಾಯಿಯನ್ನು ಬೈಕ್‌ ಮೇಲೆ ಮಾರಾಟ ಮಾಡಲು ಯತ್ನಿಸಿದ ಆರೋಪಿಗೆ ಇಲ್ಲಿನ ನ್ಯಾಯಾಲಯ ಒಂದು ವರ್ಷ ಶಿಕ್ಷೆ ಮತ್ತು 10 ಸಾವಿರ ದಂಡ ಪ್ರಕಟಿಸಿದೆ.

ಗುಳೇದಗುಡ್ಡ ತಾಲೂಕಿನ ದೊಡ್ಡಹಾನಪೂರ ಗ್ರಾಮದ ವಿನೋದ ಪಾಂಡಪ್ಪ ರಾಠೋಡ ಶಿಕ್ಷೆಗೆ ಒಳಗಾದ ಆರೋಪಿ. 2020ರ ಏ.13ರಂದು ಮಧ್ಯಾಹ್ನ 12 ಗಂಟೆಗೆ ಬಾದಾಮಿ ಅಬಕಾರಿ ಪೊಲೀಸ್‌ ಠಾಣೆ ವ್ಯಾಪ್ತಿಯ ನಂದಿಕೇಶ್ವರ ರಸ್ತೆಯಲ್ಲಿ ಕಳ್ಳಭಟ್ಟಿ ಸರಾಯಿಯನ್ನು ತನ್ನ ಬೈಕ್‌ ಮೇಲೆ ಇಟ್ಟು ಸಾಗಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದರು. ಆಗ ಆರೋಪಿ ಪರಾರಿಯಾಗಿದ್ದ. ಆತ ಬಿಟ್ಟು ಹೋಗಿದ್ದ 4 ಲೀಟರ್‌ ಕಳ್ಳಭಟ್ಟಿ ಸರಾಯಿಯನ್ನು ಬಾದಾಮಿ ಪೊಲೀಸರು ವಶಕ್ಕೆ ಪಡೆದು ದೂರು ದಾಖಲಿಸಿದ್ದರು.

ಪ್ರಕರಣದಲ್ಲಿ ಅಂದಿನ ಅಬಕಾರಿ ಉಪನಿರೀಕ್ಷಕ ಪರಮಾನಂದ ಕೋಲುರ ತನಿಖೆ ಕೈಗೊಂಡಿದ್ದರು. ಹೆಚ್ಚುವರಿ ದಿವಾಣಿ ನ್ಯಾಯಾಲಯ ಗುಳೇದಗುಡ್ಡದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪಿ ವಿನೋದ ರಾಠೋಡ ಅಪರಾಧ ಎಸಗಿದ್ದು, ಸಾಬೀತಾಗಿದೆಯೆಂದು ನ್ಯಾಯಾಧೀಶ ಹರೀಶ ಜಾಧವ ಆರೋಪಿತನಿಗೆ ಕರ್ನಾಟಕ ಅಬಕಾರಿ ಕಾಯ್ದೆ ಕಲಂ 11.13, ಮತ್ತು 32(1) ರಡಿಯಲ್ಲಿ 1 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಸಹಾಯಕ ಸರ್ಕಾರಿ ಅಭಿಯೋಜಕ ನಯೀಮ ಅಬ್ಬಾಸ ಇದ್ದಲಗಿ ವಾದ ಮಂಡಿಸಿದ್ದರು.