ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಮತಕ್ಷೇತ್ರದಲ್ಲಿ ವರುಣನಅವಕೃಪೆಯಿಂದಾಗಿ ಸಮರ್ಪಕ ಮಳೆ ಪ್ರಮಾಣ ಅತ್ಯಂತ ಕಡಿಮೆಯಾಗಿರುವುದರಿಂದ ರೈತರಿಗೆ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇರುವ ಹಿನ್ನೆಲೆ ಆಲಮಟ್ಟಿ ಜಲಾಶಯದ ಮೂಲಕ ಕಾಲುವೆಗಳಿಗೆ ತಕ್ಕಮಟ್ಟಿಗೆ ನೀರು ಹರಿಸುವಂತೆ ಕೆಬಿಜೆಎನ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಶಾಸಕ ಸಿ.ಎಸ್. ನಾಡಗೌಡ ಹೇಳಿದರು.

ಪಟ್ಟಣದ ಹುಡ್ಕೋ ಬಡಾವಣೆಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಾಣಗೊಂಡಿರುವ ನೂತನ ವಿವಿಐಪಿ ಕಟ್ಟಡ ಕಾಮಗಾರಿಯನ್ನು ಬುಧವಾರ ಪರಿಶೀಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಈಗಾಗಲೇ ಕೆಬಿಜೆಎನ್‌ಎಲ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ರೈತರ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಮತಕ್ಷೇತ್ರದಲ್ಲಿ ಮುಂಗಾರು ಮಳೆ ಪ್ರಮಾಣ ಕುಂಠಿತಗೊಂಡಿರುವುದು ಸದ್ಯದ ಪರಿಸ್ಥಿತಿಗೆ ಕಾರಣವಾಗಿದೆ. ಈ ವಾರದಲ್ಲಿ ಉತ್ತಮ ಮಳೆಯಾಗುವ ಲಕ್ಷಣ ಕಂಡುಬರುತ್ತಿದೆ. ಆದಷ್ಟು ಬೇಗ ಉತ್ತಮ ಮಳೆ ಬರಲಿ ಎಂದು ಭಗವಂತನ್ನು ಪ್ರಾರ್ಥಿಸುತ್ತೇನೆ. ಜತೆಗೆ ಈಗಾಗಲೇ ಮಹಾರಾಷ್ಟ್ರ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಶಯಕ್ಕೆ₹1.20 ಲಕ್ಷ ಕ್ಯುಸೆಕ್‌ ಒಳಹರಿವು ಪ್ರವಾಣವಿದ್ದು, ಒಂದೆರಡು ದಿನಗಳಲ್ಲಿ ಜಲಾಶಯದ ನೀರಿನ ಒಳಹರಿವು ಹೆಚ್ಚಾಗುವ ಮುನ್ಸೂಚನೆ ಕಂಡು ಬರುತ್ತಿದೆ. ಕ್ರಮೇಣ ಜಲಾಶಯದ ಒಳಹರಿವು ಹೆಚ್ಚಾದ ತಕ್ಷಣ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕಂದು ಎಂದು ಕೆಬಿಜೆಎನ್‌ಎಲ್ ಮುಖ್ಯಾ ಕಾರ್ಯನಿರ್ವಾಹಕ ಅಧಿಕಾರಿ ಡಿ.ಬಸವರಾಜ ಅವರಿಗೆ ಸೂಚಿಸಲಾಗಿದೆ. ಅವರೂ ಕೂಡ ರೈತರಿಗೆ ತೊಂದರೆ ಆಗದಂತೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಉತ್ತಮ ಮಳೆ ಮುನ್ಸೂಚನೆ ಇದ್ದು, ಆ ಭಾಗದಲ್ಲಿ ಉತ್ತಮ ಮಳೆಯಾದರೆ ಹೆಚ್ಚುವರಿ ನೀರು ಹರಿಸಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ನೀರಿನ ಸಮರ್ಪಕ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ನೀರಿನ ಲಭ್ಯತೆಗೆ ಅನುಗುಣವಾಗಿ ಕಾಲುವೆಗಳಿಗೆ ನೀರು ಹರಿಸಿ ಬೆಳೆಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ರೈತರು ಆತಂಕಕ್ಕೆ ಒಳಗಾಗದೆ ಧೈರ್ಯದಿಂದ ಇರಬೇಕೆಂದು ಶಾಸಕ ಸಿ.ಎಸ್. ನಾಡಗೌಡ ಮನವಿ ಮಾಡಿದರು.


ರೈತರ ಹಿತದೃಷ್ಟಿಯಿಂದ ಮಹತ್ವದ ನೀರಾವರಿ ಯೋಜನೆಗಳಿಗೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶೀಘ್ರದಲ್ಲೇ ತಾಲೂಕಿಗೆ ಆಗಮಿಸಿ, ನಾಗರಾಬೆಟ್ಟ ಏತ ನೀರಾವರಿ ಹಾಗೂ ಚಿಮ್ಮಲಗಿ ಏತ ನೀರಾವರಿ ಯೋಜನೆಗಳ ಅಂದಾಜು ₹500 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಈ ಯೋಜನೆಗಳ ಅನುಷ್ಠಾನದಿಂದ ತಾಲೂಕಿನ ಸಾವಿರಾರು ರೈತರಿಗೆ ನೀರಾವರಿ ಸೌಲಭ್ಯ ವಿಸ್ತರಿಸಿ, ಕೃಷಿ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ. ನೀರಿನ ಲಭ್ಯತೆ ಹೆಚ್ಚುವುದರಿಂದ ಬೆಳೆ ಉತ್ಪಾದನೆ ವೃದ್ಧಿಯಾಗಿ ರೈತರ ಆರ್ಥಿಕ ಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ ಎಂದವರು ಹೇಳಿದರು.

ಇದೇ ವೇಳೆ ಹುಡ್ಕೋ ಬಡಾವಣೆಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಾಣಗೊಂಡಿರುವ ವಿವಿಐಪಿ ಕಟ್ಟಡವನ್ನು ಲೋಕಾರ್ಪಣೆಗೊಳಿಸಲಾಗುವುದು. 2013ಕ್ಕೂ ಮುಂಚೆಯೇ ಈ ಕಟ್ಟಡಕ್ಕೆಅನುಮೋದನೆ ನೀಡಲಾಗಿತ್ತು. ಆದರೆ ಇಲ್ಲಿಯತನಕ ಅದು ಉದ್ಘಾಟನೆಗೊಂಡಿರಲಿಲ್ಲ. ಮೂಲ ಸೌಲಭ್ಯ ಒಳಗೊಂಡ ಇತರೆ ಕಾಮಗಾರಿ ಬೇಗ ಮುಕ್ತಾಯಗೊಳಿಸಿ ಲೋಕಾರ್ಪಣೆಗೆ ಸಿದ್ದತೆ ಕೈಗೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆ ಮುಖ್ಯ ಅಧಿಕ ಎಂಜಿನಿಯರ್‌ ಶಿವಾನಂದ ನಾಯಕ ಅವರಿಗೆ ದೂರವಾಣಿ ಕರೆ ಮಾಡಿ ಹಾಗೂ ಸ್ಥಳದಲ್ಲಿದ್ದ ಎಇಇ ಎ.ಬಿ. ರೆಡ್ಡಿಯವರಿಗೆ ಸೂಚಿಸಿದರು.

ಸರ್ಕಾರ ರೈತರ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ನೀರಾವರಿ ಯೋಜನೆಗಳನ್ನು ವೇಗವಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭೇಟಿ ಸಂದರ್ಭದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅಧಿಕೃತ ಚಾಲನೆ ದೊರೆಯಲಿದ್ದು, ಇದು ತಾಲೂಕಿನ ಅಭಿವೃದ್ಧಿಗೆ ಮಹತ್ವದ ಮೈಲಿಗಲ್ಲಾಗಲಿದೆ. ಮಳೆ ಕೊರತೆಗೆ ರೈತರು ಆತಂಕ ಪಡುವಅ ಗತ್ಯವಿಲ್ಲ

-ಸಿ.ಎಸ್. ನಾಡಗೌಡ ಶಾಸಕರು ದೇವರಹಿಪ್ಪರಗಿ