ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಮಾರಸಿಂಗನಹಳ್ಳಿ-ಯರಗನಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಕಿರು ಸೇತುವೆ ನಿರ್ಮಾಣಕ್ಕೆ ಶೀಘ್ರದಲ್ಲೆ ಚಾಲನೆ ನೀಡಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಸೋಮವಾರ ಹೇಳಿದರು.

ತಾಲೂಕಿನ ಮಾರಸಿಂಗನಹಳ್ಳಿಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಅಂದಾಜು 5 ಕೋಟಿ ರು. ವೆಚ್ಚದಲ್ಲಿ ಶಿಂಷಾ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿ, ಚೆಕ್ ಡ್ಯಾಂ ನಿರ್ಮಾಣದಿಂದ ನದಿ ನೀರಿನ ಇಂಗುವಿಕೆ ಹೆಚ್ಚಾಗಿ ಸುತ್ತಮುತ್ತಲಿನ ಬೋರ್‌ವೆಲ್ ಮತ್ತು ತೆರೆದ ಬಾವಿಗಳಲ್ಲಿ ನೀರಿನ ಮಟ್ಟ ಸುಧಾರಿಸಲಿದೆ. ಇದರ ಜೊತೆಗೆ ಏತ ನೀರಾವರಿ ಯೋಜನೆ ನಿರ್ಮಾಣ ಮಾಡಿ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಮಾರಸಿಂಗನಹಳ್ಳಿ- ಯರಗನಹಳ್ಳಿ ಗ್ರಾಮದ ಜನರ ಮನವಿ ಮೇರೆಗೆ ಚೆಕ್ ಡ್ಯಾಂ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಇದರ ಜೊತೆಗೆ ಎರಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಕಿರು ಸೇತುವೆ ನಿರ್ಮಾಣಕ್ಕೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಷ್ಟು ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಕ್ಷೇತ್ರದಲ್ಲಿ ನೀರಾವರಿ ಸಮಸ್ಯೆಗಳು ಸಾಕಷ್ಟಿವೆ. ನಿಗಮಕ್ಕೆ 500 ಕೋಟಿ ರು. ಪ್ರಸ್ತಾವನೆ ಸಲ್ಲಿಸಲಾಗಿದೆ. ಹಂತ ಹಂತವಾಗಿ ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.


ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯಲಿವೆ. ದೊಡ್ಡ ಮನೆತನದವರು ಮತ್ತು ನಾಲ್ಕೈದು ಬಾರಿ ಶಾಸಕರಾದವರು ರಾಜಕೀಯ ಉದ್ದೇಶ ಹಾಗೂ ತಮ್ಮ ಸ್ಥಾನಗಳನ್ನು ಭದ್ರ ಮಾಡಿಕೊಳ್ಳಲು ಬರುತ್ತಾರೆ. ಈ ಹಿಂದೆ ನಿಮ್ಮ ಗ್ರಾಮಗಳಲ್ಲಿ ಅಭಿವೃದ್ಧಿ ಹೇಗಿತ್ತು. ನಾವು ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರು ಅವಲೋಕನ ಮಾಡಬೇಕಿದೆ ಎಂದರು.

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಚುನಾವಣೆ ಪೂರ್ವದಲ್ಲಿ ಕ್ಷೇತ್ರದ ಜನರಿಗೆ ಕೊಟ್ಟ ಮಾತಿನಂತೆ ಶಾಸಕ ಕೆ.ಎಂ.ಉದಯ್ ಅವರು ನಿಷ್ಟರಾಗಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಮೂರುವರೆ ವರ್ಷದಲ್ಲಿ 2 ಸಾವಿರ ಕೋಟಿಗೂ ಹೆಚ್ಚಿನ ಅನುದಾನ ತಂದು ಪ್ರತಿಯೊಂದು ಇಲಾಖೆಗೆ ಅನುದಾನ ಬಿಡುಗಡೆ ಮಾಡುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಮಾರಸಿಂಗನಹಳ್ಳಿ ರಾಮಚಂದ್ರ, ಡೇರಿ ಅಧ್ಯಕ್ಷ ಪುಟ್ಟಸ್ವಾಮಿ, ಬಿ.ವಿ. ಶಂಕರೇಗೌಡ, ನಿಲುವಾಗಿಲು ಗೋವಿಂದ, ನವೀನ್ ಮುಳ್ಳಳ್ಳಿ, ಕಿರಣ್ ಮುದುಗೆರೆ, ನಂಜೇಶ್, ಕೃಷ್ಣಪ್ಪ, ದೊಡ್ಡ ಗೂಳಿಗೌಡ, ಯೋಗೇಶ್ ಮತ್ತಿತರರಿದ್ದರು.