ಸಾರಾಂಶ
ಕಾನೂನು ಮುಂದಿಟ್ಟು ರಿಕ್ಷಾ ಚಾಲಕರಿಗೇಕೆ ತೊಂದರೆ ಕೊಡುತ್ತೀರಿ: ಸದಸ್ಯೆ ಶಶಿಕಲಾ ಆಕ್ರೋಶ
ಕನ್ನಡಪ್ರಭ ವಾರ್ತೆ ಪುತ್ತೂರುನಗರದ ೨೨ನೇ ವಾರ್ಡ್ ನ ಕೂರ್ನಡ್ಕ ವೃತ್ತದ ಬಳಿಯಲ್ಲಿ ರಿಕ್ಷಾ ಚಾಲಕರಿಗೆ ಬಿಸಿಲು ಮಳೆಯಿಂದ ರಕ್ಷಣೆ ಪಡೆಯುವುದಕ್ಕಾಗಿ ರಿಕ್ಷಾ ತಂಗುದಾಣ ನಿರ್ಮಿಸಬೇಕು ಎಂಬುದು ಕಳೆದ ೪೦ ವರ್ಷಗಳಿಂದ ಬೇಡಿಕೆಯಿದೆ. ಇದೀಗ ಸ್ಥಳೀಯ ದಾನಿಯೊಬ್ಬರ ಮೂಲಕ ರಿಕ್ಷಾ ನಿಲ್ದಾಣದ ಕಾಮಗಾರಿ ಆರಂಭಿಸಲಾಗಿದ್ದು, ಶೇ. ೮೦ ರಷ್ಟು ಕೆಲಸ ಮುಗಿದ ಬಳಿಕ ಪೌರಾಯುಕ್ತರು ಕಾಮಗಾರಿಗೆ ತಡೆ ನೀಡಿ ಅದೇಶಿಸಿದ್ದಾರೆ. ಬಡ ರಿಕ್ಷಾ ಚಾಲಕರಿಗೆ ಯಾಕೆ ತೊಂದರೆ ಕೊಡುತ್ತೀರಿ ಎಂದು ಸದಸ್ಯೆ ಶಶಿಕಲಾ ಅವರು ನಗರಸಭಾ ಸಾಮಾನ್ಯ ಸಭೆಯಲ್ಲಿ ಪ್ರಶ್ನೆ ಎತ್ತಿದ್ದಾರೆ.
ಪುತ್ತೂರು ನಗರಸಭಾ ಸಾಮಾನ್ಯ ಸಭೆಯು ಮಂಗಳವಾರ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಗರಸಭಾ ಸಭಾಂಗಣದಲ್ಲಿ ನಡೆದಿದ್ದು ಈ ವಿಷಯ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು.ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ಸದಸ್ಯೆ ಶಶಿಕಲಾ ತನ್ನ ವಾರ್ಡ್ ನಲ್ಲಿ ಈ ರಿಕ್ಷಾ ತಂಗುದಾಣ ನಿರ್ಮಾಣವಾಗುತ್ತಿದೆ. ಬಡ ರಿಕ್ಷಾ ಚಾಲಕರಿಗೆ ಮಳೆ ಬಿಸಿಲಿನಿಂದ ರಕ್ಷಣೆ ಮಾಡಲೆಂದು ನಡೆಸುತ್ತಿರುವ ಕಾಮಗಾರಿಗೆ ಉದ್ದೇಶ ಪೂರ್ವಕ ತಡೆ ಒಡ್ಡಲಾಗುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ವಿಪಕ್ಷ ಸದಸ್ಯ ಯೂಸುಫ್ ಡ್ರೀಮ್ ಅವರು ಇಲ್ಲಿ ರಿಕ್ಷಾ ತಂಗುದಾಣ ಮಾಡಲು ತಾನು ೨ ವರ್ಷಗಳ ಹಿಂದೆಯೇ ಪ್ರಯತ್ನ ನಡೆಸಿದ್ದೆ. ಆದರೆ ಇದಕ್ಕೆ ಸಾರ್ವಜನಿಕರ ಆಕ್ಷೇಪವಿದ್ದ ಕಾರಣ ಹಾಗೂ ಇಲ್ಲಿ ತಂಗುದಾಣ ನಿರ್ಮಿಸಿದರೆ ಕೆಮ್ಮಿಂಜೆ ದೇವಸ್ಥಾನದ ದ್ವಾರಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಅಲ್ಲಿ ನಿರ್ಮಿಸಲಾಗಿಲ್ಲ. ಅಲ್ಲದೆ ರಸ್ತೆ ಬದಿಯ ಚರಂಡಿಯಲ್ಲಿ ಈ ತಂಗುದಾಣ ಮಾಡಲು ಮುಂದಾಗಿದ್ದಾರೆ. ಇದೀಗ ಶಾಸಕರು ಅದರ ಪಕ್ಕದಲ್ಲಿರುವ ಅಂಗನವಾಡಿ ಸಮೀಪದಲ್ಲಿ ರಿಕ್ಷಾ ತಂಗುದಾಣ ನಿರ್ಮಾಣಕ್ಕಾಗಿ ೫ ಲಕ್ಷ ರು. ಅನುದಾನ ಮೀಸಲು ಇಟ್ಟಿದ್ದಾರೆ. ಇಲ್ಲಿ ರಿಕ್ಷಾ ತಂಗುದಾಣ ನಿರ್ಮಾಣವಾಗಲಿದೆ. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದರು. ಈ ಬಗ್ಗೆ ಆಡಳಿತ ಪಕ್ಷದ ಸದಸ್ಯರಾದ ಬಾಮಿ ಅಶೋಕ್ ಶೆಣೈ, ಕೆ. ಜೀವಂಧರ್ ಜೈನ್, ಉಪಾಧ್ಯಕ್ಷ ಬಾಲಚಂದ್ರ ಕೆ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ, ವಿಪಕ್ಷ ಸದಸ್ಯ ರಿಯಾಝ್ ಪರ್ಲಡ್ಕ ಮತ್ತಿತರರು ಚರ್ಚೆ ನಡೆಸಿದರು.
ಈ ಬಗ್ಗೆ ಸ್ಪಷ್ಟನೆ ನೀಡಿದ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ನಿಲ್ದಾಣ ನಿರ್ಮಾಣಕ್ಕೆ ನಗರಸಭೆಯ ಅಡ್ಡಿಯಿಲ್ಲ. ಆದರೆ ಸ್ಥಳೀಯರಿಂದ ಆಕ್ಷೇಪ ಬಂದ ಹಿನ್ನಲೆಯಲ್ಲಿ ತಡೆ ಆದೇಶ ಮಾಡಲಾಗಿದೆ ಎಂದು ತಿಳಿಸಿದರು.ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಮುಂದುವರಿಸಿ ಎಂದ ಭಾಮಿ ಅಶೋಕ್ ಶೆಣೈ ಅವರು ಇದನ್ನು ಇಲ್ಲಗೇ ಮುಗಿಸೋಣ ಎಂದು ಸಲಹೆ ನೀಡಿದರು. ಬಳಿಕ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಪೌರಾಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾಸಿ ಚರ್ಚೆಯನ್ನು ಅಂತಿಮಗೊಳಿಸಲಾಯಿತು. ನೆಲ್ಲಿಕಟ್ಟೆಯನ್ನು ಮಳೆಗಾಲದಲ್ಲಿ ಮುಳುಗದಂತೆ ರಕ್ಷಣೆ ಮಾಡಬೇಕಾದರೆ ಇಲ್ಲಿನ ಒಳಚರಂಡಿ ವ್ಯವಸ್ಥೆ ಸಮರ್ಪಕಗೊಳಿಸಬೇಕು. ಇದಕ್ಕೆ ಅನುದಾನ ನೀಡುವಂತೆ ಸದಸ್ಯ ರಮೇಶ್ ರೈ ಆಗ್ರಹಿಸಿದರು. ಮಳೆಗಾಲದ ಮೊದಲು ರಸ್ತೆಗಳಿಗೆ ತೇಪೆ ಹಾಕುವ ಕಾರ್ಯ ನಡೆಸಲಾಗುತ್ತಿದೆ. ಆದರೆ ಇದು ಕಳಪೆಯಾಗುತ್ತಿದೆ. ಹಾಕಿದ ತೇಪೆ ಎದ್ದುಹೋಗುತ್ತಿದೆ. ಹೊಂಡಗಳಿಗೆ ಸಾರ್ವಜನಿಕರು ಕಲ್ಲುಮಣ್ಣು ಹಾಕಿರುತ್ತಾರೆ. ಈ ತೇಪೆ ಹಾಕುವ ಗುತ್ತಿಗೆದಾರರು ಇದನ್ನು ಹಾಗೆಯೇ ಬಿಡುತ್ತಿದ್ದಾರೆ ಎಂದು ಗೌರಿ ಬನ್ನೂರು ಹೇಳಿದರು. ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಉಪಸ್ಥಿತರಿದ್ದರು. ಪೌರಾಯುಕ್ತ ಮಧು ಎಸ್ ಮನೋಹರ್ ಕಲಾಪ ನಿರ್ವಹಿಸಿದರು.