ವಿಕೆಎಫ್ ಕ್ರಿಕೆಟರ್ಸ್ ತಂಡಕ್ಕೆ ಅಮ್ಮಣಂಡ ಕಪ್

| Published : Apr 30 2025, 12:37 AM IST

ವಿಕೆಎಫ್ ಕ್ರಿಕೆಟರ್ಸ್ ತಂಡಕ್ಕೆ ಅಮ್ಮಣಂಡ ಕಪ್
Share this Article
  • FB
  • TW
  • Linkdin
  • Email

ಸಾರಾಂಶ

ಐರಿ ಕುಟುಂಬಗಳ ನಡುವೆ ಆಯೋಜಿಸಲಾಗಿದ್ದ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಿಯಲ್ಲಿ ವಿಕೆಎಫ್‌ ಕ್ರಿಕೆಟರ್ಸ್‌ ತಂಡ ಅಮ್ಮಣಂಡ ಕಪ್‌ - 2025 ಮುಡಿಗೇರಿಸಿಕೊಂಡಿತು.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಐರಿ ಕುಟುಂಬಗಳ ನಡುವೆ ಆಯೋಜಿಸಲಾಗಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ವಿಕೆಎಫ್ ಕ್ರಿಕೆಟರ್ಸ್ ತಂಡ ಅಮ್ಮಣಂಡ ಕಪ್-2025ನ್ನು ಮುಡಿಗೇರಿಸಿಕೊಂಡಿತು.

ಇಲ್ಲಿಗೆ ಸಮೀಪದ ಮೂರ್ನಾಡಿನ ಬಾಚಿಟ್ಟಿರ ದಿ.ಲಾಲುಮುದ್ದಯ್ಯ ಕ್ರೀಡಾಂಗಣದಲ್ಲಿ ಹೊದ್ದೂರು ಅಮ್ಮಣಂಡ ಕುಟುಂಬದ ವತಿಯಿಂದ ಆಯೋಜಿಸಲಾಗಿದ್ದ ಮೂರು ದಿನಗಳ ಐರಿ ಕೌಟುಂಬಿಕ ಉತ್ಸವ- 2025 ದ ಅಂತಿಮ ಪಂದ್ಯದಲ್ಲಿ ವಿಕೆಎಫ್ ಕ್ರಿಕೆಟರ್ಸ್ ತಂಡ ಇಬ್ನಿವಳವಾಡಿಯ ಮಾಲೇರ ಸ್ಟ್ರೈಕರ್ಸ್ ತಂಡದ ವಿರುದ್ಧ ಗೆಲುವು ಸಾಧಿಸಿತು. ಮಾಲೇರ ಸ್ಟ್ರೈಕರ್ಸ್ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ಮೂರು ದಿನಗಳ ಕಾಲ ನಡೆದ ಐರಿ ಜನಾಂಗದವರ ಕ್ರಿಕೆಟ್ ಟೂರ್ನಿಯಲ್ಲಿ ವಿವಿಧ ಭಾಗಗಳ 10 ತಂಡಗಳು ಪಾಲ್ಗೊಂಡಿದ್ದವು. ಅಂತಿಮ ಪಂದ್ಯವನ್ನು ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿ ಮಾತನಾಡಿ ಜಿಲ್ಲೆಯಲ್ಲಿ ವಿವಿಧ ಜನಾಂಗಗಳು ಕ್ರೀಡಾಕೂಟವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಯಾವುದೇ ಜಾತಿ, ಧರ್ಮದ ಸಂಸ್ಕೃತಿ, ಸಾಹಿತ್ಯ, ಕ್ರೀಡೆ ಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.

ಕೊಡವ ಭಾಷಿಕ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಮಾತನಾಡಿ ಸಂಪ್ರದಾಯ, ಸಂಸ್ಕೃತಿಯ ಭಾಗವಾಗಿರುವ ಕ್ರಿಕೆಟ್ ಹಾಗೂ ಇತರೆ ಕ್ರೀಡೆಗಳನ್ನು ಜನಾಂಗದವರು ಕ್ರೀಡಾ ಹಬ್ಬವಾಗಿ ಆಚರಿಸುತ್ತಿದ್ದು ಜನಾಂಗದ ನಡುವಿನ ಒಗ್ಗಟ್ಟಿಗೆ ಕ್ರೀಡಾಕೂಟ ಸಹಕಾರಿ. ಜಿಲ್ಲೆಯ ಎಲ್ಲಾ ಕೊಡವ ಭಾಷಿಕರು ಒಂದೇ ವೇದಿಕೆಯಡಿ ಕ್ರೀಡಾಕೂಟವನ್ನು ಆಯೋಜಿಸುವಂತಾಗಬೇಕು ಎಂದರು.

ಕ್ರಿಕೆಟ್ ಟೂರ್ನಿಯ ನಡುವೆ ಐರಿ ಜನಾಂಗದವರಿಗಾಗಿ ಹಗ್ಗಜಗ್ಗಾಟ, ಓಟದ ಸ್ಪರ್ಧೆ ಸೇರಿದಂತೆ ವಿವಿಧ ಕ್ರೀಡಾಸ್ಪರ್ಧೆಗಳು ಜರುಗಿದವು. ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಐವತ್ತೋಕ್ಲಿನ ಬಬ್ಬೀರ ಕುಟುಂಬದವರು ಪ್ರಥಮ ಸ್ಥಾನ ಪಡೆದರೆ ಅರಮೇರಿಯ ಐರಿ ಸಮಾಜ ದ್ವಿತೀಯ ಸ್ಥಾನ ಪಡೆಯಿತು. ಹಿರಿಯರ ಓಟದ ಸ್ಪರ್ಧೆಯಲ್ಲಿ ಐವತ್ತೋಕ್ಲಿನ ಬಬ್ಬೀರ ಸಾಬುದೇವಯ್ಯ ಪ್ರಥಮ ಸ್ಥಾನವನ್ನು ಹಾಗೂ ಬೇಟೋಳಿಯ ಐನಂಗಡ ಮುತ್ತಣ್ಣ ದ್ವಿತೀಯ ಸ್ಥಾನವನ್ನು ಗಳಿಸಿದರು. ಕಿರಿಯ ಮಕ್ಕಳ ಕಾಳು ಹೆಕ್ಕುವ ಸ್ಪರ್ಧೆಯಲ್ಲಿ ಅನ್ನಂಭೀರ ಲೀಕ್ಷಾ ಪ್ರಥಮ ಸ್ಥಾನವನ್ನು ಕಳ್ಳಿಕಂಡ ಶೀತಲ್ ದ್ವಿತೀಯ ಸ್ಥಾನವನ್ನು ಗಳಿಸಿದರು.

ಸಮಾರೋಪ ಸಮಾರಂಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕ ಪಡೆದ ಐರಿ ಜನಾಂಗದ ಸಾಧಕ ಮಕ್ಕಳನ್ನು ಸನ್ಮಾನಿಸಲಾಯಿತು. ಕಾಮೆಯಂಡ ಪಿ ಲಾಂಛನ, ದುಗ್ಗಂಡ ಸಿ.ಪಾರ್ವತಿ, ಮೂಕೈರಿರ ಟಿ. ಕೃಷಿ , ಐರಿರ ಡಿ ಅನನ್ಯ ಅಕ್ಕಮ ಇವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು. 12 ಮಂದಿ ನಿವೃತ್ತ ಶಿಕ್ಷಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಮೇಲತ್ತಂಡ ರಮೇಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಡವ ಬಾಷಿಕ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಡಾ. ಮೇ ಚಿರ ಸುಭಾಷ್ ನಾಣಯ್ಯ, ಕುಟುಂಬದ ಹಿರಿಯರಾದ ಅಮ್ಮಣಂಡ ಸುಬ್ಬಯ್ಯ, ಎಫ್ ಎಂ ಸಿ ಕಾಲೇಜಿನ ಉಪನ್ಯಾಸಕಿ ಅಣ್ಣಾಳಪಂಡ ಧರ್ಮಶೀಲ ಅಜಿತ್, ಚಿಕ್ಕಮಗಳೂರಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಾಲೇರ ಚರಣ್, ವಿರಾಜಪೇಟೆ ಉಪತಹಸೀಲ್ದಾರ್ ಅಂಜಪಂಡ ಪ್ರಕಾಶ್, ದಕ್ಷಿಣ ಪಶ್ಚಿಮರೈಲ್ವೆಯ ಮೈಸೂರು ಹಿರಿಯ ವಿಭಾಗೀಯ ಎಂಜಿನಿಯರ್ ಅಪ್ಪಚಂಡ ಸುರೇಶ್ ಅಪ್ಪಣ್ಣ, ಅಂತರಾಷ್ಟ್ರೀಯ ಚಿತ್ರ ಕಲಾವಿದ ರೂಪೇಶ್ ನಾಣಯ್ಯ, ವಕೀಲ ಅಣ್ಣಾಳಪಂಡ ಧನುಗಣೇಶ್, ನಿವೃತ್ತ ಸೈನಿಕ ಬಬ್ಬೀರ ಎ.ತಿಮ್ಮಯ್ಯ , ಹೊಸ್ಕೇರಿಯ ಕರಕುಶಲಕರ್ಮಿ ಐನಂಗಡ ಉದಯಕುಮಾರ್, ಗ್ರಾಮೀಣ ಬ್ಯಾಂಕ್ ನಿವೃತ್ತ ನೌಕರ ಅಮ್ಮಣಂಡಡ ಯು.ಪೂಣಚ್ಚ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.