ರಾಗಿ,ಜೋಳಕ್ಕಾಗಿ ಸರ್ಕಾರದ ಗಮನ ಸೆಳೆಯಲಾಗುವುದು

| Published : Apr 30 2025, 12:37 AM IST

ರಾಗಿ,ಜೋಳಕ್ಕಾಗಿ ಸರ್ಕಾರದ ಗಮನ ಸೆಳೆಯಲಾಗುವುದು
Share this Article
  • FB
  • TW
  • Linkdin
  • Email

ಸಾರಾಂಶ

ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿಯ ಬದಲಾಗಿ ಗ್ರಾಹಕರಿಗೆ ರಾಗಿ ಮತ್ತು ಜೋಳ ವಿತರಣೆಗೆ ಸರ್ಕಾರದ ಚಿಂತನೆ ನಡೆದಿದೆ

ಹಗರಿಬೊಮ್ಮನಹಳ್ಳಿ: ಅನ್ನಭಾಗ್ಯ ಯೋಜನೆಯಡಿ ತಾಲೂಕಿನಲ್ಲಿ ಮಾಸಿಕ ೧೫,೩೬೬ ಕ್ವಿಂಟಲ್ ಅಕ್ಕಿ ವಿತರಣೆಯಾಗಿದೆ. ರಾಗಿ ಮತ್ತು ಜೋಳಕ್ಕೆ ಬೇಡಿಕೆ ಇದ್ದು, ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಗುರುಬಸವರಾಜ ಸೊನ್ನದ್ ತಿಳಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಸಮಿತಿಯ ತಾಲೂಕು ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿಯ ಬದಲಾಗಿ ಗ್ರಾಹಕರಿಗೆ ರಾಗಿ ಮತ್ತು ಜೋಳ ವಿತರಣೆಗೆ ಸರ್ಕಾರದ ಚಿಂತನೆ ನಡೆದಿದೆ. ತಾಲೂಕಿನ ತಂಬ್ರಹಳ್ಳಿ ಮತ್ತು ಹಂಚಿನಾಳ ಗ್ರಾಮಗಳಿಗೆ ಬಸ್ ಸಂಚಾರಕ್ಕೆ ಸಮಿತಿ ಸದಸ್ಯ ಗೌರವಜ್ಜನವರ ಗಿರೀಶ್ ಒತ್ತಾಯಿಸಿದರು.

ಸಾರಿಗೆ ಘಟಕದ ವ್ಯವಸ್ಥಾಪಕ ನೀಲಪ್ಪ ಪ್ರತಿಕ್ರಿಯಿಸಿ ಈಗಾಗಲೇ ತಾಲೂಕಿನ ಬನ್ನಿಕಲ್ಲು ಮತ್ತು ಬಸರಕೋಡು ತಾಂಡಾಗಳಿಗೆ ಬಸ್ ಸಂಚಾರ ಆರಂಭಿಸಲಾಗಿದೆ. ಆದರೆ, ಉಳಿದ ಗ್ರಾಮಗಳ ಮಾರ್ಗದಲ್ಲಿ ವಿದ್ಯುತ್ ತಂತಿಗಳು ಬಸ್‌ಗಳಿಗೆ ತಾಕುವಂತಿವೆ ಎಂದಾಗ ಕೂಡಲೆ ಲೈನ್ ಕ್ಲಿಯರ್‌ಗೆ ಅಗತ್ಯ ಕ್ರಮ ಕೈಗೆತ್ತಿಕೊಳ್ಳುವಂತೆ ಜೆಸ್ಕಾಂ ಅಧಿಕಾರಿಗೆ ತಾಪಂ ಇಒ ಡಾ. ಜಿ.ಪರಮೇಶ್ವರ ಆದೇಶಿಸಿದರು.

ತಂಬ್ರಹಳ್ಳಿ ಮಾರ್ಗದಲ್ಲಿ ಚಲಿಸುವ ಬಸ್‌ಗಳಿಗೆ ತಂಬ್ರಹಳ್ಳಿ ಹೆಸರಿನ ನಾಮಫಲಕ ಕಡ್ಡಾಯವಾಗಿ ಹಾಕಿ ಎಂದು ಗಿರೀಶ್ ಒತ್ತಾಯಿಸಿದರು.

ತಾಲೂಕಿನ ತಂಬ್ರಹಳ್ಳಿ, ಬಾಚಿಗೊಂಡನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ೫೦ಕ್ಕೂ ಹೆಚ್ಚು ಜನರಿಗೆ ಭಾಗ್ಯಲಕ್ಷ್ಮಿ ಮೊತ್ತ ತಲುಪಿಲ್ಲ ಎಂದು ಸದಸ್ಯ ಗೌರಜ್ಜನವರ ಗಿರೀಶ್ ತಿಳಿಸಿದಾಗ ಸದಸ್ಯರಾದ ರಾಘವೇಂದ್ರ, ವೆಂಕಟೇಶ್ ನಾಯ್ಕ ಧ್ವನಿಗೂಡಿಸಿದರು. ಸಾರಿಗೆ ಘಟಕಕ್ಕೆ ಇನ್ನೂ ೧೫ ಬಸ್‌ಗಳು ೨೧ನಿರ್ವಾಹಕರು ಮತ್ತು ೧೦ ಚಾಲಕರ ಅಗತ್ಯವಿದೆ ಎಂದು ಘಟಕದ ವ್ಯವಸ್ಥಾಪಕ ಸಭೆಗೆ ತಿಳಿಸಿದರು.

ಈ ಕುರಿತು ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯುವುದಾಗಿ ಅಧ್ಯಕ್ಷ ತಿಳಿಸಿದರು. ಗ್ರಾಪಂ ಮಟ್ಟದ ಸಭೆಗೆ ಹಾಜರಾಗಲು ಸಿಬ್ಬಂದಿ ಕೊರತೆ ಇದೆ ಎಂದು ಆಹಾರ ನಿರೀಕ್ಷಕ ವೀರೇಶ್ ಸಭೆಗೆ ತಿಳಿಸಿದರು.

ಸಿಬ್ಬಂದಿ ಪೂರೈಕೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಡಿಡಿ ಅವರ ಗಮನ ಸೆಳೆಯಲಾಗುವುದು ಎಂದು ಇಒ ಪ್ರತಿಕ್ರಿಸಿದರು. ಸಿಡಿಪಿಒ ಇಲಾಖೆಯ ನಾಗರತ್ನ ಬಾವಿಕಟ್ಟಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯ ಹೆಗ್ಡಾಳ್ ಪರಶುರಾಮ, ತಾಲೂಕು ಸಮಿತಿಯ ಸರ್ದಾರ್ ರಾಮಪ್ಪ, ಉಪ್ಪಾರ ಕಾರ್ತಿಕ, ಬಲ್ಲಾಹುಣ್ಸಿ ಹನುಮಂತಪ್ಪ, ಸಂತೋಷ, ಕದರಮ್ಮನವರ ನಾಗಮ್ಮ, ಸುಧಾ ಉಮೇಶ್‌ಗೌಡ, ಮೇಟಿ ಮಂಜುನಾಥ ಇತರರಿದ್ದರು. ತಾಪಂ ಟಿಪಿಒ ನಾಗರಾಜ ನಾಯ್ಕ, ಕೆ.ಲಕ್ಷ್ಮೀ ನಿರ್ವಹಿಸಿದರು.