ಕೋಲಾರ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸುವೆ: ಎ.ಟಿ. ಕೃಷ್ಣನ್

| Published : Mar 27 2024, 01:01 AM IST

ಕೋಲಾರ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸುವೆ: ಎ.ಟಿ. ಕೃಷ್ಣನ್
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ೪೫ ವರ್ಷಗಳಿಂದ ಜಿಲ್ಲೆಯಲ್ಲಿ ರಾಜಕೀಯ, ಕ್ರೀಡೆ, ಶಿಕ್ಷಣ, ಕ್ಷೀರ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳ ಅಭ್ಯೂದಯಕ್ಕಾಗಿ ಪ್ರತಿಭಟನೆ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವೆ, ನಾನು ಭ್ರಷ್ಟನಲ್ಲ, ಕೊಟ್ಟ ಮಾತಿನಂತೆ ನಡೆಯುವವನು, ನಾನು ಚುನಾವಣೆಯಲ್ಲಿ ಯಾವುದೇ ಆಮಿಷಕ್ಕೊಳಗಾಗಿ ಮತ ಖರೀದಿಸುವುದಿಲ್ಲ.

ಕನ್ನಡಪ್ರಭ ವಾರ್ತೆ ಕೋಲಾರ

ಕೋಲಾರ ಲೋಕಸಭಾ ಮೀಸಲು ಕ್ಷೇತ್ರ ಚುನಾವಣೆಗೆ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವೆ, ಚುನಾವಣೆಯಲ್ಲಿ ಗೆಲ್ಲಲಿ, ಸೋಲಲಿ, ಮುಂದಿನ ೫ ವರ್ಷಗಳ ಕಾಲ ನಿಮ್ಮ ಜೊತೆಯಲ್ಲಿದ್ದು, ೧೬ ಅಂಶಗಳನ್ನು ಜಾರಿಗೆ ತರುವಲ್ಲಿ ಹೋರಾಟ ನಡೆಸುತ್ತೇನೆ ಎಂದು ಸಾಮಾಜಿಕ ಹೋರಾಟಗಾರ ಎ.ಟಿ.ಕೃಷ್ಣನ್ ಭರವಸೆ ನೀಡಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ೧೬ ಅಂಶಗಳ ಪ್ರಣಾಳಿಕೆಯ ಕರ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಗ್ರಾಮಾಭಿವೃದ್ಧಿಯಿಂದ ದೇಶಾಭಿವೃದ್ಧಿ ಸಾಧ್ಯ ಎಂಬ ಸಿದ್ದಾಂತದಡಿ ಅಭಿವೃದ್ಧಿಗಾಗಿ ನನ್ನನ್ನು ಬೆಂಬಲಿಸಿ ಎಂದರು.

ಪ್ರತಿಗ್ರಾಮಕ್ಕೆ ಆಟದ ಬಯಲು, ಸಾಮೂಹಿಕ ಸ್ಮಶಾನ, ಕೋಲಾರದಲ್ಲಿ ಒಂದು ಅಂತಾರಾಷ್ಟ್ರೀಯ ಮಟ್ಟದ ಬ್ಯಾಸ್ಕೆಟ್ ಬಾಲ್ ಕ್ರೀಡಾಂಗಣ, ಮಹಿಳೆಯರಿಗೆ ಕೌಶಲ್ಯ ಹಾಗೂ ಕರಕುಶಲ ಉದ್ಯೋಗ ಸೃಷ್ಟಿ, ಶ್ರೀನಿವಾಸಪುರಕ್ಕೆ ೩೦ ಎಕರೆಯಲ್ಲಿ ರಾಷ್ಟ್ರಮಟ್ಟದ ಕ್ರಿಕೆಟ್ ತರಬೇತಿ ಕೇಂದ್ರ, ಚಿಂತಾಮಣಿ, ಚೇಳೂರು ತಾಲೂಕಿಗೆ ಕೈಗಾರಿಕಾ ಪ್ರಾಂಗಣ, ಶಿಡ್ಲಘಟ್ಟದಲ್ಲಿ ಅಂತಾರಾಷ್ಟ್ರೀಯ ಮಟ್ಟದ ರೇಷ್ಮೆ ವಿನಿಮಯ ಕೇಂದ್ರ ಸ್ಥಾಪಿಸಲಾಗುವುದು ಎಂದು ಹೇಳಿದರು.

ಮಾಲೂರಿನಲ್ಲಿ ಖಾಸಗಿಯಾಗಿ ಮಾಜಿ ಸೈನಿಕರಿಂದ ಮತ್ತು ಮಾಜಿ ಪೊಲೀಸ್ ಅಧಿಕಾರಿಗಳಿಂದ ಮಿಲಿಟರಿ ಮತ್ತು ಪೊಲೀಸ್ ಇಲಾಖೆ ಸೇರ್ಪಡೆಗೆ ಪೂರಕವಾಗಿ ಯುವಕ ಮತ್ತು ಯುವತಿಯರಿಗೆ ತರಬೇತಿ ಕೇಂದ್ರ, ಬಂಗಾರಪೇಟೆಗೆ ಮೆಡಿಕಲ್ ಕಾಲೇಜು, ಕೆಜಿಎಫ್ ಗಣಿ ಕಾರ್ಮಿಕರಿಗೆ ವಸತಿ ನಿರ್ಮಾಣ, ಮುಳಬಾಗಿಲಿನಲ್ಲಿ ನಾಟಿ ಟೊಮೆಟೋ ಮಾರುಕಟ್ಟೆ ಸ್ಥಾಪನೆ, ಎಚ್.ಎನ್.ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ಯೋಜನೆಯ ೫ನೇ ಹಂತದ ಸಂಸ್ಕರಣ ಘಟಕ, ಅತಿಥಿ ಉಪನ್ಯಾಸಕರ ಸರ್ಕಾರಿ ನೇಮಕಕ್ಕೆ ಒತ್ತಾಯ ಹಾಗೂ ಕನಿಷ್ಠ ೨೫ ಸಾವಿರ ರು. ವೇತನ, ಸರ್ಕಾರಿ ಕಚೇರಿಗಳಲ್ಲಿ ಹೊರಗುತ್ತಿಗೆಯ ಆಧಾರದಲ್ಲಿ ಕೆಲಸ ಮಾಡುತ್ತಿರುವವರ ಕಾಯಮಾತಿಗೆ ಹಾಗೂ ಪ್ರತಿಭಾವಂತ ಕ್ರೀಡಾಪಟುಗಳನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪಟುಗಳನ್ನಾಗಿ ಪರಿವರ್ತಿಸುವ ತರಬೇತಿ ನೀಡಲಾಗುವುದು ಎಂಬ ಭರವಸೆಗಳ ಪ್ರಣಾಳಿಕೆಯನ್ನು ಅವರು ಬಿಡುಗಡೆಗೊಳಿಸಿದರು.

ಈಗಾಗಲೇ ಕೋಲಾರ ಮೀಸಲು ಕ್ಷೇತ್ರದಲ್ಲಿ ಎಡಗೈ ಮತ್ತು ಬಲಗೈ ಸಮುದಾಯದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೀರಿ, ಈ ಚುನಾವಣೆಯಲ್ಲಿ ಭೋವಿ ಸಮುದಾಯದವರಿಗೂ ಅವಕಾಶ ನೀಡುವ ಮೂಲಕ ಸಾಮಾಜಿಕ ನ್ಯಾಯ ನೀಡಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.

ಕಳೆದ ೪೫ ವರ್ಷಗಳಿಂದ ಜಿಲ್ಲೆಯಲ್ಲಿ ರಾಜಕೀಯ, ಕ್ರೀಡೆ, ಶಿಕ್ಷಣ, ಕ್ಷೀರ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳ ಅಭ್ಯೂದಯಕ್ಕಾಗಿ ಪ್ರತಿಭಟನೆ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವೆ, ನಾನು ಭ್ರಷ್ಟನಲ್ಲ, ಕೊಟ್ಟ ಮಾತಿನಂತೆ ನಡೆಯುವವನು, ನಾನು ಚುನಾವಣೆಯಲ್ಲಿ ಯಾವುದೇ ಆಮಿಷಕ್ಕೊಳಗಾಗಿ ಮತ ಖರೀದಿಸುವುದಿಲ್ಲ. ಪ್ರಾಮಾಣಿಕತೆಯ ತತ್ವ ಸಿದ್ದಾಂತಗಳ ಮೇರೆಗೆ ಮತ ಯಾಚಿಸುವೆ. ನನಗೆ ಪ್ರಚಾರಕ್ಕೆ ಸಾಮಾಜಿಕ ಜಾಲತಾಣವೇ ಆಸ್ತ್ರವಾಗಿದೆ ಎಂದರು.

ಈ ಹಿಂದೆ ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷ ಎರಡು ಪಕ್ಷಗಳಲ್ಲೂ ಗುರುತಿಸಿಕೊಂಡು ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ೧೦ ಮಂದಿ ಶಾಸಕರ ಆಯ್ಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದೆ, ಭೋವಿ ಸಮುದಾಯ ಸಂಘಟನೆ, ಹಾಲು ಉತ್ಪಾದಕ ಸಂಘಗಳು, ಕ್ರೀಡಾ ಸಂಘಟನೆಗಳು, ಕೂಲಿ ಕಾರ್ಮಿಕ ಸಂಘಟನೆಗಳು ಈ ಚುನಾವಣೆಯಲ್ಲಿ ನನಗೆ ಬೆಂಬಲಿಸುವ ನಿರೀಕ್ಷೆ ಹೊಂದಿದ್ದೇನೆ ಎಂದು ವಿವರಿಸಿದರು,

ಸುದ್ದಿ ಗೋಷ್ಠಿಯಲ್ಲಿಯಲ್ಲಿ ರೈತ ಮುಖಂಡ ನೀಲಕಂಠಪ್ಪ ಇದ್ದರು.