ಆಸೆ ಆಮಿಷಕ್ಕೆ ಒಳಗಾಗದೆ ನೈತಿಕ ಮತದಾನ ಮಾಡಿ: ದಿನೇಶ್

| Published : Mar 27 2024, 01:01 AM IST

ಸಾರಾಂಶ

ದೇಶದಾದ್ಯಂತ 96 ಕೋಟಿ ಮತದಾರರಿದ್ದು, 10 ಲಕ್ಷ ಮತಗಟ್ಟೆಗಳಲ್ಲಿ 57 ಲಕ್ಷ ಇವಿಎಂಗಳನ್ನು ಮತದಾನಕ್ಕಾಗಿ ಬಳಸಗುತ್ತಿದ್ದೆ. ಈ ಚುನಾವಣೆಯನ್ನು ಯಶಸ್ವಿಯಾಗಿ ಮುಗಿಸಲು ಚುನಾವಣಾ ಆಯೋಗವು ವ್ಯಾಪಾಕವಾಗಿ ಪ್ರಚಾರ ಮಾಡುತ್ತಿದೆ. ಹಾಗಿದ್ದಾಗ ಕಡ್ಡಾಯವಾಗಿ ಮತದಾನ ಮಾಡುವುದು ಪ್ರತಿಯೊಬ್ಬ ಮತದಾರನ ಕರ್ತವ್ಯ. ಹೀಗಾಗಿ ಎಲ್ಲರೂ ಮತದಾನ ಮಾಡಿ ಹಾಗೂ ಬೇರೆಯವರಿಗೂ ಮಾತ ಹಾಕುವಂತೆ ಪ್ರೇರೇಪಿಸಿ ಚುನಾವಣೆಯನ್ನು ಗೆಲ್ಲಿಸಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ವಿಶ್ವದಲ್ಲಿಯೇ ಅತೀ ದೊಡ್ಡ ಚುನಾವಣೆಯೆಂದರೆ ಅದು ನಮ್ಮ ಲೋಕಸಭಾ ಚುನಾವಣೆ. ಇಂತಹ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರನು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನೈತಿಕ ಮತದಾನ ಮಾಡಲು ಮುಂದಾಗಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ದಿನೇಶ್ ಹೇಳಿದರು.

ನಗರದ ಕೂರ್ಗಳ್ಳಿಯಲ್ಲಿರುವ ಶಾಹಿ ಎಕ್ಸ್ ಪೊರ್ಟ್ ಪ್ರೈ.ಲಿ. ಸಂಸ್ಥೆಯ ಘಟಕ 37 ಮತ್ತು ಘಟಕ 42 ರಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮಂಗಳವಾರ ನಡೆದ ಮತದಾರರ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನವು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯನಿಗೂ ಮತಚಲಾಯಿಸುವ ಹಕ್ಕನ್ನು ನೀಡಿದೆ. ಅದನ್ನು ಸರಿಯಾದ ಸಮಯದಲ್ಲಿ ಬಳಸಿಕೊಂಡು ಉತ್ತಮ ಪ್ರಜಾಪ್ರಭುತ್ವವನ್ನು ನಿರ್ಮಿಸಬೇಕು ಎಂದರು.

ದೇಶದಾದ್ಯಂತ 96 ಕೋಟಿ ಮತದಾರರಿದ್ದು, 10 ಲಕ್ಷ ಮತಗಟ್ಟೆಗಳಲ್ಲಿ 57 ಲಕ್ಷ ಇವಿಎಂಗಳನ್ನು ಮತದಾನಕ್ಕಾಗಿ ಬಳಸಗುತ್ತಿದ್ದೆ. ಈ ಚುನಾವಣೆಯನ್ನು ಯಶಸ್ವಿಯಾಗಿ ಮುಗಿಸಲು ಚುನಾವಣಾ ಆಯೋಗವು ವ್ಯಾಪಾಕವಾಗಿ ಪ್ರಚಾರ ಮಾಡುತ್ತಿದೆ. ಹಾಗಿದ್ದಾಗ ಕಡ್ಡಾಯವಾಗಿ ಮತದಾನ ಮಾಡುವುದು ಪ್ರತಿಯೊಬ್ಬ ಮತದಾರನ ಕರ್ತವ್ಯ. ಹೀಗಾಗಿ ಎಲ್ಲರೂ ಮತದಾನ ಮಾಡಿ ಹಾಗೂ ಬೇರೆಯವರಿಗೂ ಮಾತ ಹಾಕುವಂತೆ ಪ್ರೇರೇಪಿಸಿ ಚುನಾವಣೆಯನ್ನು ಗೆಲ್ಲಿಸಬೇಕು ಎಂದು ಅವರು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ.70 ರಷ್ಟು ಮತದಾನವಾಗಿದ್ದು, ಈ ಚುನಾವಣೆಯಲ್ಲಿ ಅದಕ್ಕಿಂತ ಹೆಚ್ಚು ಮತದಾನ ಆಗುವ ನೀರಿಕ್ಷೆ ಇದೆ. ಮತದಾರರು ಚುನಾವಣೆಯ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರು ವೋಟರ್ ಹೆಲ್ಪಿಂಗ್ ಆಪ್ ಅನ್ನು ಡೌನ್‌ಲೋಡ್ ಮಾಡಿ ಅದರಿಂದ ಎಲ್ಲಾ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದರು.

ಮತದಾರರಿಗೆ ಯಾವುದೇ ರೀತಿಯ ದೂರು ಹಾಗೂ ದುಷ್ಕೃತ್ಯಗಳು ಕಂಡು ಬಂದಲ್ಲಿ ಸಿ- ವಿಜಿಲ್ ಆಪ್ ಮೂಲಕ ಸಲ್ಲಿಸಬಹುದು. 85 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ಶೇ.40 ರಷ್ಟು ಅಂಗವಿಕಲತೆ ಹೊಂದಿರುವ ವಿಶೇಷಚೇತನ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶವಿದ್ದು, ಅದನ್ನು ಬಳಸಿಕೊಂಡು ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಅವರು ತಿಳಿಸಿದರು.

ಶಾಹಿ ಎಕ್ಸ್ ಪೋರ್ಟ್ 37ರ ಘಟಕ ಮುಖ್ಯಸ್ಥ ಜೆ.ಸಿ. ಗುರುಮೂರ್ತಿ, ಘಟಕ 42ರ ಮುಖ್ಯಸ್ಥ ಸಂತೋಷ್ ಕುಮಾರ್, ವ್ಯವಸ್ಥಾಪಕ ನಿರ್ದೇಶಕರಾದ ಶುಭ ದೇವರಾಜೇ ಅರಸ್, ಕಾರ್ಮಿಕ ಕಲ್ಯಾಣಾಧಿಕಾರಿ ಚೈತ್ರಾ ಮೊದಲಾದವರು ಇದ್ದರು.