ಜೀವನದ ಶ್ರೇಯಸ್ಸಿನ ದಾರಿ ತೋರಿದ ರೇಣುಕಾಚಾರ್ಯರು

| Published : Mar 27 2024, 01:01 AM IST

ಸಾರಾಂಶ

ಪೌರ್ಣಿಮೆಯಂತಹ ಕಾರ್ಯಕ್ರಮಗಳು ಮುಂದಿನ ತಲೆಮಾರಿಗೆ ನಾವು ಬಿಟ್ಟು ಹೋಗುವ ಆಸ್ತಿ ಎಂದರೆ ತಪ್ಪಾಗಲಾರದು

ಲಕ್ಷ್ಮೇಶ್ವರ: ಕಾಯಕ ಮತ್ತು ದಾಸೋಹದ ಮೂಲಕ ಜೀವನದ ಶ್ರೇಯಸ್ಸಿಗೆ ದಾರಿ ತೋರಿದ ಮೂಲ ಪುರುಷರು ಜಗದ್ಗುರು ರೇಣುಕಾಚಾರ್ಯರು. ಅಂಗ- ಅವಗುಣಗಳನ್ನು ದೂರ ಮಾಡಿ, ಲಿಂಗಾಂಗ ಸಾಮರಸ್ಯ ಉಂಟು ಮಾಡಿ, ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ದಯಾ, ಕ್ಷಮಾ, ದಾನ, ಪೂಜಾ, ಜಪ, ಧ್ಯಾನ ಎಂಬ ಧರ್ಮದ ದಶಸೂತ್ರ ಬೋಧಿಸಿ ಜೀವನದ ಉನ್ನತಿಗೆ ಬೆಳಕು ತೋರಿದವರು. ಸತ್ಯ ಮತ್ತು ಶಾಂತಿಯ ತಳಹದಿಯ ಮೇಲೆ ಸುಸಂಸ್ಕೃತ ಸಮಾಜ ನಿರ್ಮಿಸಲು ನಿರಂತರ ಶ್ರಮಿಸಿದ ಶಿವಾದ್ವೆತ ಜ್ಞಾನ ಸಂಪತ್ತನ್ನು ಕರುಣಿಸಿದ ಕಾರುಣ್ಯ ಶಕ್ತಿಯೇ ಪರಮ ಜಗದ್ಗುರುಗಳು ಎಂದು ಎಸ್ ಟಿಪಿಎಂಬಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಪ್ರಭುಗೌಡ ಯಕ್ಕಿಕೊಪ್ಪ ಅಭಿಪ್ರಾಯ ಪಟ್ಟರು.

ಅವರು ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿಯು ಪ್ರತಿ ಹುಣ್ಣಿಮೆಯಂದು ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಹಮ್ಮಿಕೊಳ್ಳುವ ಪುಲಿಗೆರೆ ಪೌರ್ಣಿಮೆ ಕಾರ್ಯಕ್ರಮ ಸರಣಿಯ 28ನೇ ಸಂಚಿಕೆಯಲ್ಲಿ ಜಗದ್ಗುರು ರೇಣುಕಾಚಾರ್ಯ ಮಹಿಮೆ ವಿಷಯದ ಕುರಿತು ಉಪನ್ಯಾಸ ನೀಡುತ್ತಿದ್ದರು.

ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ, ಸಾಹಿತಿ ಎಚ್‌.ಜಿ.ದುರಗಣ್ಣವರ ಬರೆದ ಹೋರಾಟಮಯ ಜೀವನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ವಿಶ್ರಾಂತ ಮುಖ್ಯೋಪಾಧ್ಯಾಯಿನಿ ಲಲಿತಾ ಕೆರಿಮನಿ, ಪ್ರತಿಯೊಬ್ಬರ ಬದುಕಿಗೂ ಒಂದು ಅರ್ಥವಿದೆ. ಗುರಿಯಿದೆ. ಅದನ್ನು ಸಾಧಿಸುವಲ್ಲಿ ಪ್ರತಿಯೊಂದು ಹಂತದಲ್ಲಿಯೂ ಹೋರಾಟ ಮಾಡುವುದು ಮಾನವನ ಸಹಜ ಲಕ್ಷಣ. ಅಂತಹ ಹೋರಾಟ ಜೀವನವನ್ನು ವಿಶ್ರಾಂತ ಶಿಕ್ಷಕ ದುರ್ಗಣ್ಣವರ ಮನಮುಟ್ಟುವ ಹಾಗೆ ದಾಖಲಿಸಿದ್ದಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲಕ್ಷ್ಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ, ಸೋಮೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯು ಹಮ್ಮಿಕೊಂಡ ಈ ಕಾರ್ಯಕ್ರಮ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವಂತಿದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉಪ ನೋಂದಣಾಧಿಕಾರಿ ಎಸ್.ಕೆ.ಜಲರೆಡ್ಡಿ ಪುಲಿಗೆರೆ ಪೌರ್ಣಿಮೆಯಂತಹ ಕಾರ್ಯಕ್ರಮಗಳು ಮುಂದಿನ ತಲೆಮಾರಿಗೆ ನಾವು ಬಿಟ್ಟು ಹೋಗುವ ಆಸ್ತಿ ಎಂದರೆ ತಪ್ಪಾಗಲಾರದು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಅಧ್ಯಕ್ಷೀಯ ಮಾತನಾಡಿದರು. ಸಾಹಿತಿ ಎಚ್‌.ಜಿ. ದುರಗಣ್ಣವರ ತಮ್ಮ ಪುಸ್ತಕದ ಕುರಿತು ಅನುಭವ ಹಂಚಿಕೊಂಡರು. ವಿಶ್ರಾಂತ ಶಿಕ್ಷಕ ವಿ.ಎಂ. ಹೂಗಾರ ಪ್ರಾರ್ಥಿಸಿದರು. ಟ್ರಸ್ಟ್ ಕಮಿಟಿಯ ಸಂಚಾಲಕ ಜಿ.ಎಸ್. ಗುಡಗೇರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಈಶ್ವರ ಮೆಡ್ಲೇರಿ ವಂದಿಸಿದರು. ಸ್ನೇಹ ಹೊಟ್ಟಿ ನಿರೂಪಿಸಿದರು.

ಸಭೆಯಲ್ಲಿ ದೇವಣ್ಣ ಬಳಿಗಾರ, ನೀಲಪ್ಪ ಕರ್ಜಕ್ಕಣ್ಣನವರ, ಸುರೇಶ ರಾಚನಾಯ್ಕರ, ವಿರುಪಾಕ್ಷಪ್ಪ ಆದಿ, ಪಿ.ಬಿ. ಖರಾಟೆ, ಎನ್.ಆರ್. ಸಾತಪೂತೆ, ಮಾಲಾ ದಂದರಗಿ, ಸುಮಾ ಚೊಟಗಲ್, ಎಸ್.ವ್ಹಿ.ಕನೋಜ, ಎಲ್.ಆರ್. ಮಲ್ಲಸಮುದ್ರ, ಎಸ್.ಎ. ಸಾತಣ್ಣನವರ, ಎಂ.ಎನ್. ಭರಮಗೌಡ್ರ, ನಾಗರಾಜ ಕಳಸಾಪೂರ, ಸೋಮಶೇಖರ ಕೆರಿಮನಿ, ಎಂ.ಎಸ್. ಹಿರೇಮಠ ಉಪಸ್ಥಿತರಿದ್ದರು.