ಉಡುಪಿ ಜಿಲ್ಲಾದ್ಯಂತ ಮುಂದುವರಿದ ಮಳೆ: ಇಂದೂ ರೆಡ್ ಅಲರ್ಟ್

| Published : Jul 26 2025, 01:30 AM IST

ಸಾರಾಂಶ

ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 87 ಮಿ.ಮೀ. ಮಳೆಯಾಗಿದೆ ಮತ್ತು ಸುಮಾರು 11 ಮನೆಗಳಿಗೆ ಹಾನಿಯಾಗಿದೆ. ಹವಾಮಾನ ಇಲಾಖೆ ಶನಿವಾರ ಕೂಡ ರೆಡ್ ಅಲರ್ಟ್ ಘೋಷಿಸಿದೆ.

ಕಾರ್ಕಳ/ಉಡುಪಿ: ಶುಕ್ರವಾರವೂ ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 87 ಮಿ.ಮೀ. ಮಳೆಯಾಗಿದೆ ಮತ್ತು ಸುಮಾರು 11 ಮನೆಗಳಿಗೆ ಹಾನಿಯಾಗಿದೆ. ಹವಾಮಾನ ಇಲಾಖೆ ಶನಿವಾರ ಕೂಡ ರೆಡ್ ಅಲರ್ಟ್ ಘೋಷಿಸಿದೆ.

ಬ್ರಹ್ಮಾವರ ತಾಲೂಕಿನಲ್ಲಿ ಉಪ್ಪೂರು ಗ್ರಾಮದ ಪ್ರಕಾಶ್ ಶೆಟ್ಟಿ ಅವರ ಮನೆ ಸಂಪೂರ್ಣ ಹಾನಿಗೊಂಡು 1,80,000 ರು. ಮತ್ತು ಗಿಳಿಯಾರು ಗ್ರಾಮದ ಸೀತಾರಾಮ ದೇವಾಡಿಗ ಅವರ ಮನೆ ಸಂಪೂರ್ಣ ಹಾನಿಗೊಂಡು 2,50,000 ರು. ನಷ್ಟ ಸಂಭವಿಸಿದೆ.ಇದೇ ತಾಲೂಕಿನಲ್ಲಿ ಇನ್ನೆರಡು ಮನೆಗಳ ಮೇಲೆ ಮರ ಬಿದ್ದು 90 ಸಾವಿರ ರು., ಕುಂದಾಪುರ ತಾಲೂಕಿನಲ್ಲಿ 5 ಮನೆಗಳಿಗೆ 1.15 ಲಕ್ಷ ರು., ಕಾರ್ಕಳ ತಾಲೂಕಿನಲ್ಲಿ ಒಂದು ಮನೆಗೆ 20,000 ರು. ಮತ್ತು ಕಾಪು ತಾಲೂಕಿನಲ್ಲಿ ಒಂದು ಮನೆಗೆ 75,000 ರು.ಗಳಷ್ಟು ಹಾನಿಯಾಗಿದೆ.ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಗುರುವಾರ, ಶುಕ್ರವಾರ ಭಾರಿ ಗಾಳಿಯೊಂದಿಗೆ ಮುಂಗಾರು ಮಳೆ ಮುಂದುವರಿದಿದ್ದು, ಹಲವು ಪ್ರದೇಶಗಳಲ್ಲಿ ಮನೆಗಳಿಗೆ ಹಾಗೂ ದನದ ಕೊಟ್ಟಿಗೆಗಳಿಗೆ ಹಾನಿ ಉಂಟಾಗಿದೆ. ಹಾನಿಯಾದ ಮನೆಗಳಲ್ಲಿನ ನಾಗರಿಕರು ತಾತ್ಕಾಲಿಕವಾಗಿ ಬೇರೆಡೆ ಆಶ್ರಯ ಪಡೆದಿದ್ದಾರೆ.ಕಲ್ಯಾ ಗ್ರಾಮದ ಪರಾಡಿ ಮನೆ ಎಂಬಲ್ಲಿ ಅಚ್ಯುತ ಆಚಾರ್ ಮನೆ ಮತ್ತು ದನದ ಕೊಟ್ಟಿಗೆ ಮೇಲೆ ಮರ ಬಿದ್ದು ಸುಮಾರು ರು. 30 ಸಾವಿರ ನಷ್ಟ ಅಂದಾಜಿಸಲಾಗಿದೆ.ನಲ್ಲೂರು ಗ್ರಾಮದ ಚಿರಾಗ್ ಹಿಂಬದಿ ದರ್ಕಾಸು ಮನೆ ಎಂಬಲ್ಲಿನ ನಿವಾಸಿ ರಾಜೀವಿ ಶೆಟ್ಟಿ ಮತ್ತು ಶಿವಣ್ಣ ಶೆಟ್ಟಿ ಮನೆಗೆ ಗಾಳಿ ಮಳೆಯಿಂದಾಗಿ ರು.10,000 ನಷ್ಟ ಸಂಭವಿಸಿದೆ.

ರೆಂಜಾಳ ಗ್ರಾಮದ ಮದ್ರಾಂಪಲ್ ಬಳಿ ಸುನೀತಾ ಆನಂದ ಪೂಜಾರಿ ಮನೆಗೂ ಗಾಳಿ ಮಳೆಯಿಂದ ಸುಮಾರು 10 ಸಾವಿರ ರು. ಹಾನಿ ಅಂದಾಜಿಸಲಾಗಿದೆ.