ಸಾರಾಂಶ
ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರ ಕೊಯನಾಡು ಸಮೀಪದ ದೇವರಕೊಲ್ಲಿಯ ಗಾರೆಮುರಿ ಎಸ್ಟೇಟ್ ಸಮೀಪದಲ್ಲಿ ಕಾರು-ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೊಡಗು ಜಿಲ್ಲೆಯ ನಾಲ್ವರು ಯುವಕರು ಮೃತಪಟ್ಟಿದ್ದಾರೆ.
ಮಡಿಕೇರಿ : ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರ ಕೊಯನಾಡು ಸಮೀಪದ ದೇವರಕೊಲ್ಲಿಯ ಗಾರೆಮುರಿ ಎಸ್ಟೇಟ್ ಸಮೀಪದಲ್ಲಿ ಕಾರು-ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೊಡಗು ಜಿಲ್ಲೆಯ ನಾಲ್ವರು ಯುವಕರು ಮೃತಪಟ್ಟಿದ್ದಾರೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪ ಪಾಟೀಲ ನಗರ ನಿವಾಸಿಗಳಾದ ನಿಹಾದ್, ರಿಸ್ವಾನ್, ಮೂಲತಃ ಗೋಣಿಕೊಪ್ಪದ 2ನೇ ವಿಭಾಗದ ಪ್ರಸ್ತುತ ಹುಣಸೂರಿನಲ್ಲಿ ನೆಲೆಸಿರುವ ರಾಕಿಬ್ ಹಾಗೂ ರೀಶು ಮೃತ ದುರ್ದೈವಿಗಳು.
ಮಧ್ಯಾಹ್ನ 12.50 ಸುಮಾರಿನಲ್ಲಿ ಮಡಿಕೇರಿಯಿಂದ ಸುಳ್ಯದ ಮೂಲಕ ಉಳ್ಳಾಲ ಕಡೆಗೆ ಪ್ರಯಾಣಿಸುತ್ತಿದ್ದ ಕಾರು ಹಾಗೂ ಸುಳ್ಯ ಭಾಗದಿಂದ ಮೈಸೂರು ಕಡೆಗೆ ಬರುತ್ತಿದ್ದ ಲಾರಿಯ ನಡುವೆ ಡಿಕ್ಕಿ ಸಂಭವಿಸಿದೆ. ಕಾರಿನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಯುವಕನನ್ನು ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಕೊಂಡೊಯ್ದ ಸಂದರ್ಭ ಸಾವನ್ನಪ್ಪಿದ್ದಾನೆ.
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಆಗಮಿಸಿದ ಆಂಬುಲೆನ್ಸ್ ಚಾಲಕರು ಹಾಗೂ ಸಾರ್ವಜನಿಕರು ಕಾರಿನಲ್ಲಿದ್ದ ಯುವಕರ ಮೃತದೇಹಗಳನ್ನು ಹೊರ ತೆಗೆಯಲು ಹರಸಾಹಸ ಪಡುವಂತಾಯಿತು.
ಸಂಪಾಜೆಯ ಆಂಬುಲೆನ್ಸ್ ಚಾಲಕರ ಸಂಘದ ಶರತ್ ಕೀಲಾರು, ತಾಜುದ್ದೀನ್ ಸೇರಿದಂತೆ ಯುವಕರ ತಂಡ ನಾಲ್ಕು ಆಂಬ್ಯುಲೆನ್ಸ್‌ನಲ್ಲಿ ಅವರುಗಳನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಿದರಾದರೂ ಅಷ್ಟೊತ್ತಿಗಾಗಲೇ ನಾಲ್ವರೂ ಮೃತಪಟ್ಟಿದ್ದರು.
ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಿ, ಗೋಣಿಕೊಪ್ಪದ ಅವರ ಮನೆಗಳಿಗೆ ಮೃತದೇಹಗಳನ್ನು ರವಾನೆ ಮಾಡಲಾಯಿತು.