ಸಾರಾಂಶ
ಬಿಎಂಟಿಸಿ ನೌಕರರು ಅಪಘಾತದಿಂದ ಮೃತಪಟ್ಟರೆ ಅವರ ಕುಟುಂಬದವರು ಆರ್ಥಿಕ ಸಮಸ್ಯೆ ಗುರಿಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿರುವ ಅಪಘಾತ ವಿಮಾ ಮೊತ್ತವನ್ನು 1 ಕೋಟಿ ರು.ನಿಂದ 1.25 ಕೋಟಿ ರು.ಗೆ ಹೆಚ್ಚಿಸಲು ಬ್ಯಾಂಕ್ ಆಫ್ ಬರೋಡಾದೊಂದಿಗೆ ಬಿಎಂಟಿಸಿ ಒಡಂಬಡಿಕೆ ಮಾಡಿಕೊಂಡಿದೆ.
ಬೆಂಗಳೂರು : ಬಿಎಂಟಿಸಿ ನೌಕರರು ಅಪಘಾತದಿಂದ ಮೃತಪಟ್ಟರೆ ಅವರ ಕುಟುಂಬದವರು ಆರ್ಥಿಕ ಸಮಸ್ಯೆ ಗುರಿಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿರುವ ಅಪಘಾತ ವಿಮಾ ಮೊತ್ತವನ್ನು 1 ಕೋಟಿ ರು.ನಿಂದ 1.25 ಕೋಟಿ ರು.ಗೆ ಹೆಚ್ಚಿಸಲು ಬ್ಯಾಂಕ್ ಆಫ್ ಬರೋಡಾದೊಂದಿಗೆ ಬಿಎಂಟಿಸಿ ಒಡಂಬಡಿಕೆ ಮಾಡಿಕೊಂಡಿದೆ.
ಶಾಂತಿನಗರದ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಮ್ಮುಖದಲ್ಲಿ ಬ್ಯಾಂಕ್ ಆಫ್ ಬರೋಡಾ ಮತ್ತು ಬಿಎಂಟಿಸಿ ಹಿರಿಯ ಅಧಿಕಾರಿಗಳು ಒಡಂಬಡಿಕೆಗೆ ಸಹಿ ಹಾಕಿದರು. ನೂತನ ಒಪ್ಪಂದದಂತೆ ನಿಗಮದ ನೌಕರರು ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಮೃತಪಟ್ಟರೆ ಅವರ ಕುಟುಂಬದವರಿಗೆ ಆರ್ಥಿಕ ಭದ್ರತೆ ಒದಗಿಸಲು 1 ಕೋಟಿ ರು. ವಿಮಾ ಪರಿಹಾರ ನೀಡಲಾಗುತ್ತಿದೆ. ಅದನ್ನು 1.25 ಕೋಟಿ ರು.ಗೆ ಹೆಚ್ಚಿಸುವ ಉದ್ದೇಶದೊಂದಿಗೆ ಮುಂದಿನ 5 ವರ್ಷಕ್ಕಾಗಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಕೆಎಸ್ಸಾರ್ಟಿಸಿ ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್, ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಇತರರಿದ್ದರು.
ಆ.5ರಿಂದ ಸಾರಿಗೆ ನೌಕರರ ಮುಷ್ಕರ: ಕಾರ್ಮಿಕ ಇಲಾಖೆ ಮಧ್ಯಸ್ಥಿಕೆಯಲ್ಲಿ ಜು.28ಕ್ಕೆ ರಾಜೀ ಸಂಧಾನ ಸಭೆ
ರಾಜ್ಯದ ಸಾರಿಗೆ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ 6 ತಿಂಗಳಾದರೂ ಯಾವುದೇ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಸಾರಿಗೆ ಇಲಾಖೆಯ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ ಹಾಗೂ ಎನ್‌ಡಬ್ಲ್ಯೂಕೆಆರ್‌ಟಿಸಿ ಸೇರಿ ಎಲ್ಲ ನಿಗಮಗಳ ನೌಕರರು ಆ.5ರಂದು ತಮ್ಮ ಸೇವೆ ಸ್ಥಗಿತಗೊಳಿಸಿ ಅನಿರ್ಧಿಷ್ಠಾವಧಿ ಪ್ರತಿಭಟನೆ ಮಾಡಲು ವೇದಿಕೆ ರೂಪಿಸಿಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆ ನೇತೃತ್ವದಲ್ಲಿ ಜು.28ರಂದು ರಾಜೀ ಸಂಧಾನ ಸಭೆಯೊಂದನ್ನ ನಡೆಸಲು ಮುಂದಾಗಿದೆ.
ಸಾರಿಗೆ ನೌಕರರು ಹಾಗೂ ರಾಜ್ಯ ಸರ್ಕಾರದ ನಡುವೆ ಕೈಗಾರಿಕಾ ಸಂಘರ್ಷವು ತೀವ್ರವಾಗಿ ಉಂಟಾಗಿದೆ. ಆಗಸ್ಟ್-5 ರಂದು ಬೆಳಗ್ಗೆ 6 ಗಂಟೆಯಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವ ಸಾರಿಗೆ ನೌಕರರು, ವೇತನ ಹೆಚ್ಚಳ ಮಾಡುವುದು ಸೇರಿ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಈ ನಿರ್ಧಾರದಿಂದ ರಾಜ್ಯದ ಜನಜೀವನದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ. ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಕಾರ್ಮಿಕ ಇಲಾಖೆ ಸಮಸ್ಯೆ ಇತ್ಯರ್ಥಕ್ಕೆ ಮಧ್ಯೆ ಪ್ರವೇಶಿಸಿದೆ.
ಸಾರಿಗೆ ನಿಗಮಗಳ ಆಡಳಿತ ಮಂಡಳಿ ಮತ್ತು ನೌಕರರ ಸಂಘಟನೆಗಳ ನಡುವೆ ಬಗೆಹರಿಕೆ ಸಭೆ ಜುಲೈ 28ರಂದು ನಿಗದಿಯಾಗಿದ್ದು, ಈ ಸಭೆಯಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ. ಈ ರಾಜಿ ಸಂಧಾನ ಸಭೆಗೆ ನೌಕರರ ಸಂಘಟನೆಗಳು ಮತ್ತು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಹಾಜರಾಗುವಂತೆ ಕಾರ್ಮಿಕ ಇಲಾಖೆ ಸೂಚನೆ ನೀಡಿದೆ. ರಾಜ್ಯ ಸಾರಿಗೆ ನೌಕರರ ವೇತನ ಹೆಚ್ಚಳ, ಕೆಲಸದ ಭದ್ರತೆ, ನಿವೃತ್ತಿ ಸೌಲಭ್ಯಗಳು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸುತ್ತಿರುವ ನೌಕರರು, ಸರ್ಕಾರದ ನಿರ್ಲಕ್ಷ್ಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಸಭೆ ವಿಫಲವಾದರೆ, ಆಗಸ್ಟ್-5 ರಿಂದ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.