ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕರ್ನಾಟಕದಲ್ಲಿ ತಲಾ ಆದಾಯ ಹೆಚ್ಚುವುದಕ್ಕೆ ಗ್ಯಾರಂಟಿ ಯೋಜನೆ ಕಾರಣ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.ನಗರದಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ತಲಾ ಆದಾಯದಲ್ಲಿ ಕರ್ನಾಟಕ ನಂಬರ್ ವನ್ ಸ್ಥಾನದಲ್ಲಿದೆ. ಇದು ಕೇಂದ್ರ ಸರ್ಕಾರವೇ ನೀಡಿರುವ ವರದಿ. ಕರ್ನಾಟಕದಲ್ಲಿ ತಲಾ ಆದಾಯ ಹೆಚ್ಚುವುದಕ್ಕೆ ಗ್ಯಾರಂಟಿ ಯೋಜನೆ ಕಾರಣ ಎಂದು ತಿಳಿಸಿದರು.
ಇದುವರೆಗೆ ರಾಜ್ಯದಲ್ಲಿ 4.5 ಕೋಟಿ ಜನರ ಖಾತೆಗೆ ಒಂದು ಲಕ್ಷ ಕೋಟಿ ಹಾಕಿದ್ದೇವೆ. ಯಾವುದೇ ಕಚೇರಿಗೆ ಅಲೆಯದೆ, ಒಂದು ರುಪಾಯಿ ಕಮಿಷನ್ ಕೊಡದೆ ಒಬ್ಬರ ಮನೆ ಕಾಯದೆ ಜನರಿಗೆ ಹಣ ಹಾಕಿದ್ದೇವೆ. ಜನರು ಒಂದು ಲಕ್ಷ ಕೋಟಿ ರುಪಾಯಿ ಪಡೆದಿದ್ದಾರೆ. ಇದು ವಿಶ್ವದಲ್ಲೇ ಮಾದರಿಯಾಗಿದೆ ಎಂದರು.ಎಲ್ಲರನ್ನೂ ಒಳಗೊಂಡು ಅಭಿವೃದ್ಧಿ ಮಾಡುವುದು ಹೇಗೆ ಎಂದು ತೋರಿಸಿದ್ದೇವೆ. ದೇಶದ ಸಂಪತ್ತಿನಲ್ಲಿ ಬಡವರಿಗೆ ಭಾಗ ಇದೆ ಎಂದು ಜನರನ್ನು ಭಾಗಸ್ಥರನ್ನಾಗಿ ಮಾಡಿದ್ದೇವೆ. ಎಲ್ಲರನ್ನೂ ಒಳಗೊಂಡು ಬೆಳವಣಿಗೆ ಆಗುವುದು ಹೇಗೆ ಎಂದು ತೋರಿಸಿದ್ದೇವೆ. ಆಸ್ತಿಯೆಲ್ಲ ಬರೀ ಶ್ರೀಮಂತರಿಗೆ ಹೋಗುವುದಲ್ಲ. ದೇಶದ ಆದಾಯದಲ್ಲಿ ದುಡಿಯುವ ವರ್ಗಕ್ಕೂ ಒಂದು ಪಾಲು ಇದೆ. ಅದನ್ನು ಹೇಗೆ ಮಾಡುವುದು ಎಂದು ತೋರಿಸಿದ್ದೇವೆ. ಹೀಗಾಗಿ ಕರ್ನಾಟಕ ತಲಾ ಆದಾಯದಲ್ಲಿ ನಂಬರ್ ವನ್ ಆಗಿದೆ. ಬಿಜೆಪಿಯವರು ಟೀಕೆ ಮಾಡುತ್ತಾ ಇದ್ದರು, ಈಗ ಇವರ ಬಾಯಲ್ಲಿ ಉಸಿರಿಲ್ಲ ಎಂದು ವ್ಯಂಗ್ಯವಾಡಿದರು.
ಬಡವರಿಗೆ ಆದಾಯದ ಪಾಲು ಸಿಗುತ್ತದೆ ಎಂಬ ಅಸೂಯೆ ಬಿಜೆಪಿಯವರಿಗಿತ್ತು. ದೇಶದ ಸಂಪತ್ತಿನಲ್ಲಿ ಬಡವರಿಗೆ ಒಂದು ಪಾಲು ಸಿಗುತ್ತದೆ ಎನ್ನುವುದನ್ನು ಸಹಿಸಿರಲಿಲ್ಲ. ಹೀಗಾಗಿ ಇಷ್ಟು ದಿನ ಗ್ಯಾರಂಟಿಯನ್ನು ಟೀಕೆ ಮಾಡ್ತಾ ಇದ್ದರು. ಬಡವರಿಗೂ ಪಾಲು ಕೊಟ್ಟಿದ್ದರಿಂದ ಕರ್ನಾಟಕ ನಂಬರ್ ವನ್ ಆಗಿದೆ. ಬಿಜೆಪಿಯವರ ಪ್ರಕಾರ ದೇಶದ ಆದಾಯದ ಪಾಲು ಶ್ರೀಮಂತರಿಗೆ ಮಾತ್ರ ಹೋಗಬೇಕು. ದುಡಿಯುವ ವರ್ಗಕ್ಕೆ ಏನೂ ಹೋಗಬಾರದು. ಬಡವರಿಗೆ ಪಾಲು ಕೊಟ್ಟರೆ ಅವರಿಗೆ ಸಹಿಸಲು ಆಗದಷ್ಟು ಹೊಟ್ಟೆಉರಿ. ಅದಕ್ಕಾಗಿ ಏನೆಲ್ಲ ಟೀಕೆ ಮಾಡಿದ್ದರು ಎಂದು ಕೃಷ್ಣಬೈರೇಗೌಡ ತಿರುಗೇಟು ನೀಡಿದರು.ಈ ಸಂದರ್ಭ ಶಾಸಕರಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಇದ್ದರು.