ಸಾರಾಂಶ
ನರಸಿಂಹರಾಜಪುರ, ತಾಲೂಕಿನಾದ್ಯಂತ ಮಳೆ ಬಿರುಸುಗೊಂಡಿದ್ದು ಕೆಲವು ಗ್ರಾಮಗಳಲ್ಲಿ ಮನೆಗಳ ಗೋಡೆ ಕುಸಿತ ಕಂಡಿದೆ. ಶುಕ್ರವಾರ ಸಂಜೆ ಕುದುರೆಗುಂಡಿ - ಬಿ. ಎಚ್.ಕೈಮರ ಮಧ್ಯೆ ಬರುವ ಚಿಟ್ಟಿಕೊಡಿಗೆಯ ಮುಖ್ಯ ರಸ್ತೆಯಲ್ಲಿ ಮರ ಉರುಳಿ ಬಿದ್ದು ಕೆಲವು ಸಮಯದವರೆಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಭೇಟಿ ನೀಡಿದ ಗ್ರಾಮ ಆಡಳಿತಾಧಿಕಾರಿ ಕುಮಾರಸ್ವಾಮಿ ಹಾಗೂ ಗ್ರಾಮಸ್ಥರು ಸೇರಿ ಮರ ತೆರವುಗೊಳಿಸಿದರು.
ಕನ್ನಡಪ್ರಭವಾರ್ತೆ, ನರಸಿಂಹರಾಜಪುರ
ತಾಲೂಕಿನಾದ್ಯಂತ ಮಳೆ ಬಿರುಸುಗೊಂಡಿದ್ದು ಕೆಲವು ಗ್ರಾಮಗಳಲ್ಲಿ ಮನೆಗಳ ಗೋಡೆ ಕುಸಿತ ಕಂಡಿದೆ.ಶುಕ್ರವಾರ ಸಂಜೆ ಕುದುರೆಗುಂಡಿ - ಬಿ. ಎಚ್.ಕೈಮರ ಮಧ್ಯೆ ಬರುವ ಚಿಟ್ಟಿಕೊಡಿಗೆಯ ಮುಖ್ಯ ರಸ್ತೆಯಲ್ಲಿ ಮರ ಉರುಳಿ ಬಿದ್ದು ಕೆಲವು ಸಮಯದವರೆಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಭೇಟಿ ನೀಡಿದ ಗ್ರಾಮ ಆಡಳಿತಾಧಿಕಾರಿ ಕುಮಾರಸ್ವಾಮಿ ಹಾಗೂ ಗ್ರಾಮಸ್ಥರು ಸೇರಿ ಮರ ತೆರವುಗೊಳಿಸಿದರು.
ನಂತರ ವಾಹನಗಳು ಮುಂದೆ ಸಾಗಿದವು. ಪಟ್ಟಣದ ರಾಜೀವ್ ನಗರದ ತಮ್ಮಯ್ಯ ಎಂಬುವರ ಮನೆ ಒಂದು ಭಾಗದ ಗೋಡೆ ಶುಕ್ರವಾರ ಕುಸಿದಿದೆ. ಯಾವುದೇ ಅನಾಹುತ ಆಗಿಲ್ಲ. ಪಟ್ಟಣದಿಂದ ರಾವೂರಿಗೆ ಹೋಗುವ ಮಾರ್ಗ ಮಧ್ಯೆ ಬೃಹತ್ ಮರ ಉರುಳಿ ಬಿದ್ದಿದೆ. ಇದರಿಂದ ಕೆಲವು ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ನಂತರ ಸಂಬಂಧ ಪಟ್ಟವರು ಮರ ತೆಗೆಸಿ ವಾಹನ ಓಡಾಡ ಸುಗಮಗೊಳಿಸಿದರು.ಕರ್ಕೇಶ್ವರ ಗ್ರಾಮದ ಕೈಮರದ ಕೃಷ್ಣ ಎಂಬುವರ ಮನೆ ಪಕ್ಕದ ಧರೆ ಕುಸಿದಿದ್ದು ಮನೆಯವರ ಆತಂಕ ಹೆಚ್ಚಾಗಿದೆ. ಮಡ ಬೂರು ಗ್ರಾಮದಿಂದ ಬಟ್ಟೆಕೊಡಿಗೆ ಹೋಗುವ ಸೇತುವೆಯ ಕೆಲವು ಭಾಗ ನೀರಿನಲ್ಲಿ ಮುಳುಗಿದೆ, ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ನಾಗಲಾಪುರ ಗ್ರಾಮದ ಶಾಲೆ ಸಮೀಪದ ರಸ್ತೆಯ ಮೇಲೆ ವಿದ್ಯುತ್ ಕಂಬ ಉರುಳಿ ಬಿದ್ದಿದೆ. ಕಾನೂರು ಸಮೀಪದ ಮುಖ್ಯ ರಸ್ತೆಯಲ್ಲೂ ವಿದ್ಯುತ್ ಕಂಬದ ಮೇಲೆ ಮರ ಉರುಳಿ ವಿದ್ಯುತ್ ಕಂಬ ತುಂಡಾಗಿದೆ.
ಶುಕ್ರವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಬಿಟ್ಟು ಮಳೆ ಸುರಿದಿದೆ. ವಿದ್ಯುತ್ ಕೆಲವು ಸಮಯ ಬಂದು ಹೋಗುತ್ತಿದೆ.