ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕಾವೇರಿ ನೀರಿನ ಸಮಸ್ಯೆ ವಿಚಾರವಾಗಿ ಕರೆದಿದ್ದ ಸರ್ವ ಪಕ್ಷದ ಸಭೆಯಲ್ಲಿ ಭಾಗವಹಿಸದಿರುವುದು ಮಂಡ್ಯ ಜಿಲ್ಲೆಯ ಜನತೆಗೆ ಮಾಡಿದ ಅಪಮಾನವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ ಆರೋಪಿಸಿದರು.ಪಟ್ಟಣದ ರೈತಸಮುದಾಯ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾವೇರಿ ನೀರಿನ ಸಮಸ್ಯೆ ಬಗೆಹರಿಸುವುದರ ಜೊತೆಗೆ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದೆಂದು ಮಂಡ್ಯ ಜಿಲ್ಲೆಯ ಜನತೆಗೆ ಭರವಸೆ ನೀಡಿದ್ದ ಕುಮಾರಸ್ವಾಮಿ ಸರ್ವಪಕ್ಷದ ಸಭೆಗೆ ಹಾಜರಾಗದೇ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದಾರೆ ಎಂದು ಟೀಕಿಸಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮತ್ತು ಮಾಜಿ ಶಾಸಕರು ಸಚಿವ ಚಲುವರಾಯಸ್ವಾಮಿ ವಿರುದ್ಧ ಸಲ್ಲದ ಆರೋಪಗಳನ್ನು ಮಾಡುತ್ತಾ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಕುಮಾರಸ್ವಾಮಿ ಮಂಡ್ಯ ಜಿಲ್ಲೆಗೆ ಬಂದರೇ ಮಳೆ ಬರುತ್ತದೆ ಎಂದು ಪುಟ್ಟರಾಜು ಹೇಳಿಕೆ ಖಂಡಿಸುತ್ತೇವೆ ಎಂದರು.ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯ್‌ಕುಮಾರ್ ಮಾತನಾಡಿ, ಐದು ವರ್ಷದ ನಂತರ ಕಾವೇರಿ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ ಎಂದು ನೊಂದು ಮಾತನಾಡುವ ಬದಲು ತಮ್ಮ ನಿಲುವನ್ನು ಸ್ವಷ್ಟಪಡಿಸಬೇಕೆಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಆಗ್ರಹಿಸಿದರು.
ಭಾವನ್ಮಾಕವಾಗಿ ಮಾತನಾಡಿ ಚುನಾವಣೆಯಲ್ಲಿ ಗೆಲುವು ಪಡೆದ ಕೇಂದ್ರ ಸಚಿವರು ಗೆದ್ದ ನಂತರ ರೈತರ ಸಮಸ್ಯೆ ಕಣ್ಣಿಗೆ ಕಾಣುತ್ತಿಲ್ಲ. ಉಕ್ಕುಮತ್ತು ಭಾರಿ ಕೈಗಾರಿಕಾ ಸಚಿವರಾಗಿ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ಕೈಗಾರಿಕೆಯನ್ನು ಸ್ಥಾಪಿಸಿ ಯುವಕರಿಗೆ ಉದ್ಯೋಗ ನೀಡುವಂತಾಗಲಿ. ಕಾವೇರಿ ನೀರಿನ ಸಮಸ್ಯೆ ಬಗೆಹರಿಸುವುದರ ಮೂಲಕ ತಮಗೆ ಸಿಕ್ಕಿರುವ ಅಧಿಕಾರವನ್ನು ಸಮರ್ಪಕವಾಗಿ ಬಳಸಬೇಕೆಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು ಮಾತನಾಡಿ, ಜಿಲ್ಲೆ ಪ್ರತಿನಿಧಿಯಾಗಿ ಮಂಡ್ಯ ಜಿಲ್ಲೆಯ ಕಾವೇರಿ ನೀರಿನ ಜ್ವಲಂತ ಸಮಸ್ಯೆಯನ್ನು ಕೇಂದ್ರ ಮಂತ್ರಿಗಳಾಗಿ ಕುಮಾರಸ್ವಾಮಿ ಬಗೆಹರಿಸಬೇಕು. ಕಾವೇರಿ ನೀರಿನ ಸಮಸ್ಯೆ ಬಗೆಹರಿಸದಿದ್ದರೇ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಜಿಪಂ ಮಾಜಿ ಸದಸ್ಯೆ ಸುಜಾತ ಕೆ.ಎಂ.ಪುಟ್ಟು, ಮುಖಂಡರಾದ ಕೆ.ಎಂ.ದೊಡ್ಡಿ ಪುಟ್ಟರಾಮು, ಸಿ,ಮಾಧು, ಚಿಕ್ಕಲಿಂಗಯ್ಯ, ಬಸವೇಶ್, ವಿಶ್ವಾಸ್, ದೇವರಾಜು, ಪುಟ್ಟಸ್ವಾಮಿ, ಮಹದೇವು, ಕೃಷ್ಣಮೂರ್ತಿ, ದ್ಯಾಪೇಗೌಡ, ವಿಶ್ವ (ದಿಲೀಪ್‌ಕುಮಾರ್), ಶಿವಮೂರ್ತಿ, ಶಾಂತರಾಜು ಸೇರಿದಂತೆ ಇತರರು ಇದ್ದರು.