ಹೊಸಕೋಟೆ: ಮಾದಕದ್ರವ್ಯಗಳ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿ ಪ್ರಜೆಯೂ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದು ಚಿತ್ರನಟ ಕೋಮಲ್ ತಿಳಿಸಿದರು.

ನಗರದ ಚನ್ನಭೈರೇಗೌಡ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಆಯೋಜಿಸಿದ್ದ ಡ್ರಗ್ಸ್ ಜಾಗೃತಿ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾದಕದ್ರವ್ಯಗಳ ವ್ಯಸನ ವ್ಯಕ್ತಿಯ ಜೀವನ ಮಾತ್ರವಲ್ಲದೆ ಕುಟುಂಬಗಳನ್ನೂ ಹಾಳು ಮಾಡುತ್ತದೆ. ಯುವಕರು ಕ್ಷಣಿಕ ಸುಖಕ್ಕಾಗಿ ತಮ್ಮ ಭವಿಷ್ಯ ಹಾಗೂ ತಂದೆ-ತಾಯಿಯ ಕನಸುಗಳನ್ನು ನಾಶ ಮಾಡಿಕೊಳ್ಳಬಾರದು. ಮಾದಕದ್ರವ್ಯಗಳಿಂದ ದೂರವಿದ್ದು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ನಾನು ಮಾದಕ ದ್ರವ್ಯಗಳ ವಿರುದ್ದ ಸಮರ ಸಾರಿದ್ದು ಪೊಲೀಸ್ ಇಲಾಖೆ ಆಯೋಜಿಸುವ ಜಾಗೃತಿ ಕಾರ್ಯಕ್ರಮಗಳಿಗೆ ಸ್ವಯಂ ಪ್ರೇರಿತವಾಗಿ ಭಾಗವಹಿಸುತ್ತೇನೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಮಾತನಾಡಿ, ಮಾದಕ ದ್ರವ್ಯಗಳ ನಿರ್ಮಾಣ, ಸಾಗಾಟ ಮತ್ತು ಮಾರಾಟ ಇಡೀ ವಿಶ್ವಕ್ಕೆ ಸವಾಲಾಗಿ ಪರಿಣಮಿಸಿದೆ. ಯುವಕರು, ವಿದ್ಯಾರ್ಥಿಗಳು ಹಾಗೂ ದುಡಿಯುವ ವರ್ಗವನ್ನು ಗುರಿಯಾಗಿಸಿಕೊಂಡು ಮಾದಕ ದ್ರವ್ಯಗಳನ್ನು ಹರಡುವ ಪ್ರಯತ್ನಗಳು ನಡೆಯುತ್ತಿದೆ. ಇದರ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅಗತ್ಯ. ಸಮಾಜವನ್ನು ಮಾದಕ ದ್ರವ್ಯಗಳ ಮುಕ್ತವಾಗಿಸಲು ಜಾಗೃತಿ ಅಭಿಯಾನಗಳನ್ನು ನಿರಂತರ ಹಮ್ಮಿಕೊಳ್ಳಲಾಗುತ್ತಿದೆ. ಯಾವುದೇ ದೇಶದ ಅಭಿವೃದ್ಧಿ ಮಾನವ ಸಂಪನ್ಮೂಲ ಆರೋಗ್ಯದ ಮೇಲೆ ಅವಲಂಬಿತವಾಗಿದ್ದು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಯುವಕರು ಮತ್ತು ವಿದ್ಯಾರ್ಥಿಗಳು ಮಾದಕದ್ರವ್ಯಗಳಿಂದ ದೂರವಿರುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಮಾಧ್ಯಮಗಳು ಮಾದಕದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದ ಅಂಗವಾಗಿ ಮ್ಯಾರಥಾನ್ ಮೂಲಕ ಮಾದಕ ದ್ರವ್ಯಗಳ ವಿರುದ್ಧ ಜನರಲ್ಲಿ ಸಂದೇಶ ಹರಡುವ ಕಾರ್ಯ ನಡೆಯುತ್ತಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳು ಹಾಗೂ ವಾಟ್ಸಾಪ್ ಗುಂಪುಗಳಲ್ಲಿ ಜಾಗೃತಿ ಸಂದೇಶ ಹಂಚಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಗಾಂಜಾ ಹಾಗೂ ಎಂಡಿಎಂಎ ಸೇರಿದಂತೆ ಹಲ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ. 3.5 ಕೋಟಿ ಮೌಲ್ಯದ ಮಾದಕ ದ್ರವ್ಯಗಳನ್ನು ಜಪ್ತಿ ಮಾಡಿ ಅವುಗಳನ್ನು ನಾಶಪಡಿಸಿದ್ದು ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಎಸ್ಪಿ ಚಂದ್ರಕಾಂತ್ ತಿಳಿಸಿದರು.


ಈ ಸಂದರ್ಭದಲ್ಲಿ ಡಿವೈಎಸ್ಪಿ ಮಲ್ಲೇಶ್, ಇನ್ಸ್‌ಪೆಕ್ಟರ್‌ಗಳಾದ ಗೋವಿಂದ್, ವಸಂತ್ ಸೇರಿದಂತೆ ತಾಲೂಕಿನ ಎಲ್ಲಾ ಠಾಣೆಗಳ ಸಿಬ್ಬಂದಿ ವರ್ಗ ಹಾಜರಿದ್ದರು.

ಫೋಟೋ: 29ಹೆಚ್‌ಎಸ್‌ಕೆ 1ಮತ್ತು 2

ಹೊಸಕೋಟೆಯ ಚನ್ನಭೈರೇಗೌಡ ಜಿಲ್ಲಾ ಕ್ರೀಡಾಂಗಣದಲ್ಲಿ ಪೊಲೀಸ್‌ ಇಲಾಖೆ ಹಮ್ಮಿಕೊಂಡಿದ್ದ ಮಾದಕ ದ್ರವ್ಯಗಳ ಜಾಗೃತಿ ಸಪ್ತಾಹ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್ ಯುವಕರಿಗೆ ಜಾಗೃತಿ ಮೂಡಿಸಿದರು.