ಕನ್ನಡಪ್ರಭ ವಾರ್ತೆ ಹಲಗೂರು
ಮುತ್ತತ್ತಿಯಲ್ಲಿ ಭಕ್ತರು ಮತ್ತು ಪ್ರವಾಸಿಗರು ಸುರಕ್ಷಿತವಾಗಿ ಸ್ನಾನ ಮಾಡುವುದಕ್ಕೆ ಪ್ರತ್ಯೇಕ ಸ್ಥಳ ವ್ಯವಸ್ಥೆ ಮಾಡಲಾಗುವುದು. ಋಷಿಕೇಶ ಮತ್ತು ಹರಿದ್ವಾರದ ಮಾದರಿಯಲ್ಲಿ ಮುತ್ತತ್ತಿಯಲ್ಲೂ ಅನುಕೂಲ ಕಲ್ಪಿಸುವುದಾಗಿ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.ಇತ್ತೀಚೆಗೆ ಮುತ್ತತ್ತಿಯಲ್ಲಿ ನದಿಯಲ್ಲಿ ಸ್ನಾನ ಮಾಡಲು ಹೋಗಿ ಐವರು ಸಾವನ್ನಪ್ಪಿದ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಸಚಿವರು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನೀರಿನಲ್ಲಿ ಮುಳುಗಿ ಸಾವನ್ನಪ್ಪುವ ಪ್ರಕರಣಗಳು ಮುಂದೆ ಮರುಕಳಿಸಬಾರದು. ಭಕ್ತರು ಮತ್ತು ಪ್ರವಾಸಿಗರು ಅಪಾಯಕಾರಿ ಸ್ಥಳಗಳಲ್ಲಿ ಸ್ನಾನಕ್ಕೆ ತೆರಳದಂತೆ ತಡೆಯುವುದು ಅಗತ್ಯವಾಗಿದೆ. ಅದಕ್ಕಾಗಿ ಋಷಿಕೇಶ ಮತ್ತು ಹರಿದ್ವಾರದಲ್ಲಿ ನದಿಯಿಂದ ಪ್ರತ್ಯೇಕ ಕಾಲುವೆಗಳನ್ನು ನಿರ್ಮಿಸಿ ಪ್ರತ್ಯೇಕ ಸ್ಥಳದಲ್ಲಿ ಸ್ನಾನ ಮಾಡಲು ಅನುಕೂಲ ಮಾಡಿಕೊಟ್ಟಿದೆ. ಅದೇ ಮಾದರಿಯನ್ನು ಇಲ್ಲಿಯೂ ಜಾರಿಗೊಳಿಸಲಾಗುತ್ತಿದೆ. ಇದರಿಂದ ಭಕ್ತರು, ಪ್ರವಾಸಿಗರು ಅಲ್ಲಿಯೇ ಸ್ನಾನ ಮಾಡುವರು. ನದಿಗೆ ಇಳಿಯುವ ಅವಶ್ಯಕತೆಯೇ ಇರುವುದಿಲ್ಲ ಎಂದು ಹೇಳಿದರು.ನದಿಯಿಂದ ಎಲ್ಲಿಯವರೆಗೆ ಕಾಲುವೆ ನಿರ್ಮಿಸಲಾಗುವುದು, ಸ್ನಾನಕ್ಕೆ ಪ್ರತ್ಯೇಕ ಜಾಗ ಎಲ್ಲಿ ಗುರುತಿಸಲಾಗುತ್ತದೆ, ಅದಕ್ಕೆ ಆಗುವ ವೆಚ್ಚ ಎಷ್ಟು ಎಂಬ ಬಗ್ಗೆ ಶೀಘ್ರವೇ ಡಿಪಿಆರ್ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯೋಜನಾ ವರದಿ ಸಿದ್ಧಗೊಂಡ ಕೂಡಲೇ ಅನುಷ್ಠಾನಕ್ಕೆ ಅಗತ್ಯವಿರುವ ಹಣವನ್ನು ಬಿಡುಗಡೆಗೊಳಿಸಿ ಆದಷ್ಟು ಬೇಗ ಕಾಮಗಾರಿ ನಡೆಸಲಾಗುವುದು ಎಂದು ತಿಳಿಸಿದರು.
ನದಿ ತೀರ ಹಾಗೂ ದಾರಿಯ ಇತರೆ ಕಡೆ ಸ್ಥಳಗಳಲ್ಲಿ ೨೦ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು. ಅವುಗಳನ್ನು ಹಲಗೂರಿನಿಂದಲೇ ನಿಯಂತ್ರಣ ಮಾಡಲಾಗುತ್ತದೆ. ಜೊತೆಗೆ ೯ ಜನ ಮಾರ್ಷಲ್‌ಗಳನ್ನು ಕಾವಲಿಗೆ ನಿಯೋಜಿಸುವುದಲ್ಲದೆ, ಪೊಲೀಸ್ ಚೌಕಿಯನ್ನು ನಿರ್ಮಿಸಲಾಗುವುದು. ರಜಾ ದಿನಗಳಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ನ್ನು ಮೇಲ್ವಿಚಾರಣೆಗೆ ನಿಯೋಜಿಸಿ ವಿಶೇಷ ಪೊಲೀಸ್ ಭದ್ರತೆ ಒದಗಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಪ್ರವಾಸಿ ತಾಣದಲ್ಲಿ ಶೌಚಾಲಯ ವ್ಯವಸ್ಥೆ ಹದಗೆಟ್ಟಿದೆ. ಹೊಸದಾಗಿ ಪುರುಷ-ಮಹಿಳೆಯರ ಶೌಚಾಲಯಗಳನ್ನು ನಿರ್ಮಿಸಲಾಗುವುದು. ಎಚ್ಚರಿಕೆ ನೀಡುವ ಸೂಚನಾ ಫಲಕಗಳನ್ನು ಕ್ರಮಬದ್ಧವಾಗಿ ಅಳವಡಿಸಲು ನಿರ್ದೇಶನ ನೀಡಲಾಗಿದೆ. ಹೆಚ್ಚುವರಿ ಸೂಚನಾ ಫಲಕಗಳನ್ನು ಅಳವಡಿಸುವಂತೆ ತಿಳಿಸಿದ್ದೇನೆ. ನದಿ ತೀರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹಾಕದಂತೆ ಕ್ರಮ ವಹಿಸುವಂತೆ ತಿಳಿಸಿದರು.
ಮೇಕೆದಾಟು ಅಣೆಕಟ್ಟು ನಿರ್ಮಾಣವಾದರೆ ಈ ಪ್ರದೇಶ ಮುಳುಗಡೆಯಾಗಲಿದೆ. ಅದಕ್ಕೆ ಇನ್ನೂ ಹೆಚ್ಚಿನ ಸಮಯ ಬೇಕಿದೆ. ಅಲ್ಲಿಯವರೆಗೆ ಸಂಭವಿಸಬಹುದಾದ ದುರಂತಗಳನ್ನು ತಪ್ಪಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ತಾತ್ಕಾಲಿಕವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಓ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಇತರರಿದ್ದರು.ಪಿ.ಎಂ.ನರೇಂದ್ರಸ್ವಾಮಿ ಸಲಹೆಯಂತೆ ಕ್ರಮಮುತ್ತತ್ತಿಯಲ್ಲಿ ನದಿಯಲ್ಲಿ ಮುಳುಗಿ ಸಾವನ್ನಪ್ಪುತ್ತಿರುವ ಪ್ರಕರಣಗಳನ್ನು ತಡೆಯುವುದಕ್ಕೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸಲಹೆಯಂತೆ ಕ್ರಮ ವಹಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಇತ್ತೀಚೆಗೆ ನದಿಯಲ್ಲಿ ಮುಳುಗಿ ಐವರು ಸಾವನ್ನಪ್ಪಿದ ಪ್ರಕರಣದ ಬಗ್ಗೆ ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಿ ವಿಷಯ ತಿಳಿಸಿದರು. ಋಷಿಕೇಶ ಮತ್ತು ಹರಿದ್ವಾರದಲ್ಲಿ ಭಕ್ತರು, ಪ್ರವಾಸಿಗರ ಸ್ನಾನಕ್ಕೆ ಪ್ರತ್ಯೇಕ ವ್ಯವಸ್ಥೆ ಇದೆ. ಅದೇ ವ್ಯವಸ್ಥೆಯನ್ನು ಇಲ್ಲಿಯೂ ಮಾಡಿದರೆ ಸಂಭವಿಸಬಹುದಾದ ಸಾವಿನ ಪ್ರಕರಣಗಳನ್ನು ತಡೆಯಬಹುದು ಎಂದು ಸಲಹೆ ನೀಡಿದರು. ನಾನೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವುದಾಗಿ ತಿಳಿಸಿದೆ. ಅಧಿಕಾರಿಗಳೂ ಅದನ್ನು ಒಪ್ಪಿದ್ದಾರೆ. ನರೇಂದ್ರಸ್ವಾಮಿ ಅವರ ಸಲಹೆಯಂತೆ ನದಿಯಿಂದ ಸ್ವಲ್ಪ ದೂರದಲ್ಲಿ ಪ್ರವಾಸಿಗರಿಗೆ ಸುರಕ್ಷತೆ ಖಾತ್ರಿಪಡಿಸುವ ಸ್ಥಳದಲ್ಲಿ ಸ್ನಾನ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.ತಮಿಳುನಾಡಿಗೆ ಬಿಡಲು ನಮ್ಮಲ್ಲಿ ನೀರಿಲ್ಲ: ರಾಮಲಿಂಗಾರೆಡ್ಡಿಕೃಷ್ಣರಾಜಸಾಗರ ಜಲಾಶಯದಿಂದ ಇದುವರೆಗೂ ನಾವು ತಮಿಳುನಾಡಿಗೆ ನೀರು ಹರಿಸಿಲ್ಲ. ನೆರೆ ರಾಜ್ಯಕ್ಕೆ ನೀರು ಹರಿಸಲು ಅಣೆಕಟ್ಟೆಯಲ್ಲಿ ನೀರೂ ಇಲ್ಲ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುವುದಾಗಿ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಕ್ಯಾತೆ ತೆಗೆಯುತ್ತಿರುವ ಪ್ರಶ್ನಿಸಿದಾಗ, ನಾಳೆ ನಡೆಯಲಿರುವ ಸಿಡಬ್ಲ್ಯುಆರ್‌ಸಿ ಸಭೆಯಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಲಾಗುವುದು. ಮಳೆ ಕೊರತೆಯ ಹಿನ್ನೆಲೆಯಲ್ಲಿ ಮೋಡ ಬಿತ್ತನೆಗೆ ನಿನ್ನೆ ಪ್ರಸ್ತಾವನೆ ಬಂದಿದ್ದು, ಅದರ ಬಗ್ಗೆ ಮುಂದೆ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.