ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಸಮಾಜದಲ್ಲಿ ಗುರುವಿನ ಪಾತ್ರ ಅತ್ಯಂತ ಶ್ರೇಷ್ಠವಾಗಿದೆ. ಸಂತರು, ಶಿವಯೋಗಿಗಳು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಿತ್ಯ ಜೀವನ ಸಾಗಿಸಿದರೆ ಬದುಕು ಸುಂದರವಾಗುತ್ತದೆ. ಸಾಧಕರ ಜೀವನ ಕ್ರಮ ಇಂದಿಗೂ ಪ್ರಸ್ತುತ ಎಂದು ವಿಜಯಪುರ-ಹುಬ್ಬಳ್ಳಿಯ ಶಾಂತಾಶ್ರಮದ ಅಭಿನವ ಸಿದ್ಧಾರೂಢ ಸ್ವಾಮೀಜಿ ಹೇಳಿದರು.ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಹಾನಗಲ್ ಕುಮಾರ ಮಹಾಸ್ವಾಮೀಜಿ ಅವರ 157ನೇ ಜಯಂತಿ ಮಹೋತ್ಸವ, ಕಾಯಕಯೋಗಿ ನಾಗನೂರ ರುದ್ರಾಕ್ಷಿಮಠದ ಡಾ.ಶಿವಬಸವ ಸ್ವಾಮೀಜಿ 30ನೇ ಪುಣ್ಯ ಸ್ಮರಣೋತ್ಸವ ಹಾಗೂ ಮಾಜಿ ಸಚಿವ ಶಿವಾನಂದ ಕೌಜಲಗಿ ಅವರು ರಚಿಸಿದ ತ್ರಿಕಾಲ ಪೂಜಾನಿಷ್ಠ ಶತಾಯುಷಿ ಡಾ.ಶಿವಬಸವ ಸ್ವಾಮೀಜಿ ನಾಗನೂರ ಕುರಿತು ಗ್ರಂಥ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಿವಯೋಗಿಗಳು ಸಹಬಾಳ್ವೆ, ಸಮಾನತೆಯಿಂದ ದಿವ್ಯ ಶಕ್ತಿಯಾಗಿದ್ದಾರೆ. ಹಾನಗಲ್ ಕುಮಾರ ಸ್ವಾಮೀಜಿ, ಮುರುಘೇಂದ್ರ ಶಿವಯೋಗಿಗಳು, ಮುರಗೋಡ ಮಹಾಂತ ಶಿವಯೋಗಿಗಳು, ಗುರು ಸಿದ್ಧಾರೂಢರು ಸಮಾಜದ ಬದಲಾವಣೆ, ನಾಡು-ನುಡಿಗಾಗಿ ಅವಿರತ ಶ್ರಮಿಸಿದ್ದು, ಆ ಮಹಾತ್ಮರು ಸದಾ ಸ್ಮರಣೆಯಲ್ಲಿರಬೇಕು. ಯುವಕರು ಅಧ್ಯಾತ್ಮದ ದಾರಿಯಲ್ಲಿ ಸಾಗಿದಾಗ ಮಾತ್ರ ದೇಶ ಸುಭದ್ರವಾಗಲು ಸಾಧ್ಯವೆಂದರು.ಸಾನ್ನಿಧ್ಯ ವಹಿಸಿದ್ದ ಶಾಖಾ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಮಾತನಾಡಿ, ಸುಮಾರು ವರ್ಷಗಳಿಂದ ಬೈಲಹೊಂಗಲ ನಾಡಿನಲ್ಲಿ ಮಾಜಿ ಸಚಿವ ಶಿವಾನಂದ ಕೌಜಲಗಿ ಅವರು ಶಿವಯೋಗ ಮಂದಿರ ನಿರ್ಮಾಣದ ಕರ್ತೃ ಲಿಂ.ಹಾನಗಲ್ ಕುಮಾರೇಶ್ವರರ ಜಯಂತಿ ಕಾರ್ಯಕ್ರಮ ಏರ್ಪಡಿಸಿ ಈ ಭಾಗದ ಜನರನ್ನು ಸುಜ್ಞಾನರನ್ನಾಗಿಸಿ ಆ ಮೂಲಕ ಮುಖ್ಯ ವಾಹಿಣಿಗೆ ತರುವಲ್ಲಿ ಪ್ರಯತ್ನದ ಕಾರ್ಯ ಮೆಚ್ಚುವಂತದ್ದು ಎಂದರು.
ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶಕ ಮಹಾಂತೇಶ ಶಾಸ್ತ್ರಿ ಆರಾದ್ರಿಮಠ, ಶೇಗುಣಿಸಿಯ ವಿರಕ್ತಮಠದ ಡಾ.ಮಹಾಂತಪ್ರಭು ಸ್ವಾಮೀಜಿ, ವಿಶ್ವನಾಥ ಹಿರೇಮಠ, ಸುಶೀಲಮ್ಮ ಕೌಜಲಗಿ, ಕದಳಿ ವೇದಿಕೆ ಜಿಲ್ಲಾಧ್ಯೆಕ್ಷೆ ಪ್ರೇಮಾ ಅಂಗಡಿ, ಬಸವರಾಜ ಕೌಜಲಗಿ, ಗಿರಿಜಾ ಕೌಜಲಗಿ, ಸುರೇಖಾ ಕೌಜಲಗಿ, ಆಧಿರಾಜ ಕೌಜಲಗಿ, ಇನ್ನರವ್ಹಿಲ್ ಮಾಜಿ ಅಧ್ಯಕ್ಷೆ ಉಷಾ ಬೆಲ್ಲದ, ಡಾ.ಮಹಾಂತೇಶ ಕಳ್ಳಿಬಡ್ಡಿ, ಉಮೇಶ ಬೋಳೆತ್ತಿನ, ಶಿವು ಹಂಪನ್ನವರ, ಕೆಎಲ್‌ಇ ಉಪಾಧ್ಯಕ್ಷ ಬಸವರಾಜ ತಟವಾಟಿ, ಡಾ.ಬಸವರಾಜ ಮಹಾಂತಶೆಟ್ಟಿ, ಬಿ.ಆರ್. ಅಲಸಂಧಿ, ವಕೀಲ ಜಿ.ಬಿ. ಶೀಗಿಹಳ್ಳಿ, ಯುವ ಧುರೀಣ ಬಸವರಾಜ ಕೌಜಲಗಿ ಇತರರು ಇದ್ದರು. ಹಲವಾರು ಗಣ್ಯರು, ಹಾನಗಲ್ ಕುಮಾರೇಶ್ವರರ ಅಪಾರ ಭಕ್ತರು ಪಾಲ್ಗೊಂಡಿದ್ದರು.ಡಾ.ಮಹಾಂತಪ್ರಭು ಸ್ವಾಮೀಜಿ ಅವರಿಂದ ಬಾಲಲೀಲಾ ಮಹಾಂತ ಶಿವಯೋಗಿಗಳ ಕುರಿತು ಪ್ರವಚನ ಜರುಗಿತು. ರೋಟರಿ ಮಾಜಿ ಅಧ್ಯಕ್ಷ ಮಹೇಶ ಬೆಲ್ಲದ ಸ್ವಾಗತಿಸಿದರು. ಶರಣೆ ಶೋಭಾ ಛಬ್ಬಿ ನಿರೂಪಿಸಿ, ವಂದಿಸಿದರು.