ಕನ್ನಡ ವಿವಿಯಲ್ಲಿ ಇಂದು ಘಟಿಕೋತ್ಸವ ಸಂಭ್ರಮ

| Published : Apr 04 2025, 12:46 AM IST

ಸಾರಾಂಶ

ಹಂಪಿ ಕನ್ನಡ ವಿಶ್ವವಿದ್ಯಾಲಯದ ನವರಂಗ ಬಯಲು ರಂಗಮಂದಿರದಲ್ಲಿ ಏ. 4ರಂದು ಸಂಜೆ 6.30ಕ್ಕೆ ವಿವಿಯ 33ನೇ ನುಡಿಹಬ್ಬ-ಘಟಿಕೋತ್ಸವ ನಡೆಯಲಿದೆ.

ರಾಜ್ಯಪಾಲರಿಂದ ನಾಡೋಜ ಗೌರವ ಪದವಿ ಪ್ರದಾನ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಹಂಪಿ ಕನ್ನಡ ವಿಶ್ವವಿದ್ಯಾಲಯದ ನವರಂಗ ಬಯಲು ರಂಗಮಂದಿರದಲ್ಲಿ ಏ. 4ರಂದು ಸಂಜೆ 6.30ಕ್ಕೆ ವಿವಿಯ 33ನೇ ನುಡಿಹಬ್ಬ-ಘಟಿಕೋತ್ಸವ ನಡೆಯಲಿದೆ.

ಈ ಬಾರಿ ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಾಧೀಶ ಶಿವರಾಜ ವಿ. ಪಾಟೀಲ, ಸಾಹಿತಿ ಕುಂ.ವೀರಭದ್ರಪ್ಪ (ಕುಂ.ವೀ) ಮತ್ತು ಹಿಂದೂಸ್ತಾನಿ ಗಾಯಕ ಎಂ.ವೆಂಕಟೇಶ್‌ಕುಮಾರ್ ಅವರಿಗೆ ನಾಡೋಜ ಗೌರವ ಪದವಿ ಪ್ರದಾನ ಮಾಡಲಾಗುತ್ತಿದೆ.

ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ನಾಡೋಜ ಗೌರವ ಪದವಿ ಪ್ರದಾನ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಡಿ.ಲಿಟ್ ಹಾಗೂ ಪಿಎಚ್‌ಡಿ ಪ್ರದಾನ ಮಾಡಲಿದ್ದಾರೆ. ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ರಾಜಾಸಾಬ್ ಎ.ಎಚ್. ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಈ ಬಾರಿ 198 ಪಿಎಚ್‌ಡಿ ಮತ್ತು 7 ಡಿ.ಲಿಟ್‌ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ.

ಕನ್ನಡ ವಿವಿಯನ್ನು ನುಡಿಹಬ್ಬದ ನಿಮಿತ್ತ ಶೃಂಗರಿಸಲಾಗಿದೆ. ವಿವಿಯ ಸೂರ್ಯ-ಚಂದ್ರ ಬೀದಿ, ಕ್ರಿಯಾಶಕ್ತಿ ಕಟ್ಟಡ ಮತ್ತು ಅಕ್ಷರ ಗ್ರಂಥಾಲಯಗಳನ್ನು ಶೃಂಗರಿಸಲಾಗಿದೆ. ಕನ್ನಡ ವಿವಿಯಲ್ಲಿ ಸಂಭ್ರಮ ಮನೆ ಮಾಡಿದೆ. ಕನ್ನಡ ವಿವಿ ಈಗಾಗಲೇ 98 ಜನರಿಗೆ ನಾಡೋಜ ಗೌರವ ಪದವಿ ನೀಡಿದೆ. ಈಗ ಮತ್ತೆ ಮೂವರಿಗೆ ನಾಡೋಜ ಗೌರವ ಪದವಿ ಕೂಡ ನೀಡಿದೆ. ಈ ಬಾರಿ ಮೂವರು ಸಾಧಕರಿಗೆ ನಾಡೋಜ ಗೌರವ ಪದವಿ ನೀಡಲಾಗುತ್ತಿದೆ. ಹಾಗಾಗಿ ಕನ್ನಡ ವಿವಿ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ ಎಂಬ ಪ್ರಶಂಸೆ ಕೂಡ ವ್ಯಕ್ತವಾಗುತ್ತಿದೆ. ಕನ್ನಡ ವಿವಿ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿವಿ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ, ಕುಲಸಚಿವ ಡಾ. ವಿಜಯ್‌ ಪೂಣಚ ತಂಬಂಡ ಸೇರಿದಂತೆ ವಿವಿಧ ನಿಕಾಯಗಳ ಡೀನರು, ಸಿಂಡಿಕೇಟ್‌ ಸದಸ್ಯರು ಭಾಗವಹಿಸಲಿದ್ದಾರೆ. ದೇಸಿ ಮಾದರಿಯಲ್ಲಿ ನಡೆಯುವ ನುಡಿಹಬ್ಬ- ಘಟಿಕೋತ್ಸವ ಕನ್ನಡದ ಸಂಸ್ಕೃತಿಯನ್ನು ಉಣಬಡಿಸಲಿದೆ. ಈ ಘಟಿಕೋತ್ಸವವನ್ನು ಕಣ್ಣದುಂಬಿಕೊಳ್ಳಲು ರಾಜ್ಯ ಸೇರಿದಂತೆ ಹೊರ ರಾಜ್ಯದ ಕನ್ನಡಿಗರು ಕೂಡ ಆಗಮಿಸುತ್ತಾರೆ. ಇದರೊಂದಿಗೆ ಕನ್ನಡ ವಿವಿಯಲ್ಲಿ ಕನ್ನಡದ ಕಂಪು ಕಳೆಗಟ್ಟಲಿದೆ.

ಕನ್ನಡ ವಿವಿ ಸಂಶೋಧನೆಗೆ ಹೆಚ್ಚಿನ ಒತ್ತು ನೀಡುವುದರಿಂದ ಈ ವಿವಿಯಲ್ಲಿ ಸಂಶೋಧನೆ ಕೈಗೊಂಡು ಪಿಎಚ್‌ಡಿ ಪದವಿ ಪಡೆಯುವ ಸಂಶೋಧನಾ ವಿದ್ಯಾರ್ಥಿಗಳು ಕುಟುಂಬ ಸಮೇತ ಆಗಮಿಸುವ ಮೂಲಕ ವಿವಿಯ ಗರಿಮೆ ಹೆಚ್ಚಿಸುತ್ತಾರೆ ಎಂದು ವಿವಿಯ ಪ್ರಾಧ್ಯಾಪಕರೊಬ್ಬರು ತಿಳಿಸಿದರು.