ಸಾರಾಂಶ
3 ಸಾವಿರ ಕ್ಯುಸೆಕ್ ನೀರನ್ನು ಪ್ರತಿದಿನ ಬಿಡಬೇಕು. ಸಂಬಂಧಿಸಿದ ಡಿಸ್ಟ್ರಿಬ್ಯೂಟಗಳಲ್ಲಿ ಈಗಾಗಲೇ ಆದೇಶಿಸಿದಂತೆ ಗೇಜ್‌ಗಳ ನಿಯಂತ್ರಣ ಮಾಡಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕು. ಯಾವುದೇ ರೀತಿಯಲ್ಲಿ ನೀರು ಅನಾವಶ್ಯಕವಾಗಿ ವ್ಯಯ ಆಗದಂತೆ ನೋಡಿಕೊಳ್ಳಬೇಕು.
ಕೊಪ್ಪಳ:
ಅನವಶ್ಯಕವಾಗಿ ತುಂಗಭದ್ರಾ ಎಡದಂಡೆ ಕಾಲುವೆ ನೀರು ವ್ಯಯ ಆಗದಂತೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎಂದು ಕಲಬುರಗಿ ವಿಭಾಗದ ಪ್ರಭಾರಿ ಪ್ರಾದೇಶಿಕ ಆಯುಕ್ತ ಎಂ. ಸುಂದರೇಶ ಬಾಬು ಹೇಳಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಟಿಎಲ್‌ಬಿಸಿ ನೀರು ನಿರ್ವಹಣೆ ಕುರಿತು ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತುಂಗಭದ್ರಾ ಎಡದಂಡೆ ನೀರು ನಿರ್ವಹಣೆ ಎಸ್ಇ, ಇಇ, ಸಂಬಂಧಪಟ್ಟ ತಾಲೂಕಿನ ತಹಸೀಲ್ದಾರ್‌ರು ಸೇರಿದಂತೆ ಇತರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೇನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದರು.
ಈಗಾಗಲೇ ನಿರ್ಧರಿಸಿದಂತೆ 3 ಸಾವಿರ ಕ್ಯುಸೆಕ್ ನೀರನ್ನು ಪ್ರತಿದಿನ ಬಿಡಬೇಕು. ಸಂಬಂಧಿಸಿದ ಡಿಸ್ಟ್ರಿಬ್ಯೂಟಗಳಲ್ಲಿ ಈಗಾಗಲೇ ಆದೇಶಿಸಿದಂತೆ ಗೇಜ್‌ಗಳ ನಿಯಂತ್ರಣ ಮಾಡಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕು. ಯಾವುದೇ ರೀತಿಯಲ್ಲಿ ನೀರು ಅನಾವಶ್ಯಕವಾಗಿ ವ್ಯಯ ಆಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಸಭೆಯಲ್ಲಿ ಕೊಪ್ಪಳ ಮತ್ತು ರಾಯಚೂರು ಜಿಲ್ಲಾಧಿಕಾರಿ, ಜಿಪಂ ಸಿಇಒ, ಎಸ್ಪಿ, ಎಡಿಸಿ, ಸಹಾಯಕ ಆಯುಕ್ತರು. ತುಂಗಭದ್ರಾ ಎಡದಂಡೆ ನಿರ್ವಹಣೆ ಎಸ್‌ಇ ಹಾಗೂ ಇಇ ಸಂಬಂಧಿಸಿದ ತಾಲೂಕಿನ ತಹಸೀಲ್ದಾರ್‌ರು. ಟಾಸ್ಕ್‌ಪೋರ್ಸ್ ಸಮಿತಿ ಸೇರಿದಂತೆ ಇತರೆ ಸಂಬಂಧಿಸಿದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಲುವೆಗೆ 3000 ಕ್ಯುಸೆಕ್ ನೀರು:ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಬೆಳೆಗಳಿಗೆ ಯಾವುದೇ ಸಮಸ್ಯೆಯಾಗದಂತೆ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ಏ. 9 ಅಥವಾ 10ರ ತನಕ ಕಾಲುವೆಗೆ 3000 ಕ್ಯುಸೆಕ್‌ನಂತೆ ನೀರು ಹರಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.ಸರ್ಕಾರದ ಮುಖ್ಯಕಾರ್ಯದರ್ಶಿ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ. ನಮ್ಮ ಸರ್ಕಾರ ರೈತರ ಪರವಾಗಿದ್ದು ಕುಡಿಯುವ ನೀರಿಗೂ ಯಾವುದೇ ಸಮಸ್ಯೆಯಾಗದಂತೆ ಕ್ರಮವಹಿಸಲಾಗುವುದು ಎಂದಿದ್ದಾರೆ.ಮಾ. 21ರಂದು ಬೆಂಗಳೂರಿನಲ್ಲಿ ನಡೆದ ಐಸಿಸಿ ಸಲಹಾ ಸಮಿತಿ ಸಭೆಯಲ್ಲಿ ತುಂಗಭದ್ರಾ ಎಡದಂಡೆ ಮುಖ್ಯಕಾಲುವೆ ಮೂಲಕ ಏ. 9 ಅಥವಾ 10ರ ವರೆಗೆ ಕುಡಿಯುವ ನೀರು ಒಳಗೊಂಡಂತೆ ಹಾಗೂ ನಿಂತ ಬೆಳೆಗಳ ಸಂರಕ್ಷಣೆಗಾಗಿ 3000 ಕ್ಯುಸೆಕ್‌ನಂತೆ ನೀರು ಹರಿಸಲು ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಫಸಲಿಗಾಗಿ ಕಾಯುತ್ತಿರುವ ಬೆಳೆದು ನಿಂತ ಬೆಳೆಗಳಿಗೆ ನೀರು ಒದಗಿಸಲಾಗುವುದು. ಕೊನೆಯ ಭಾಗದ ರೈತರಿಗೆ ನೀರು ತಲುಪುವಂತೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಸಚಿವರು ಸೂಚಿಸಿದ್ದಾರೆ.ಈ ವೇಳೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ನಿಷೇಧಾಜ್ಞೆ ಮೂಲಕ ನೀರು ಹರಿಸಲಾಗುವುದು. ರೈತರು ಮತ್ತು ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಸಚಿವರು ಇದೇ ವೇಳೆ ಭರವಸೆ ನೀಡಿದ್ದಾರೆ.