ನಾವು ನಮ್ಮ ಮನೆಯನ್ನು ಚೊಕ್ಕಟವಾಗಿ ಇಟ್ಟುಕೊಳ್ಳಲು ತೆಗೆದುಕೊಳ್ಳುವ ಕಾಳಜಿ ನಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನೂ ಅಷ್ಟೇ ಕಾಳಜಿಯಿಂದ ನೋಡಿಕೊಳ್ಳುವುದು ಪ್ರಜ್ಞಾವಂತಿಕೆಯ ಲಕ್ಷಣವಾಗಿದೆ.

ಗದಗ: ಗದಗ- ಬೆಟಗೇರಿ ಅವಳಿ ನಗರದ ಸ್ವಚ್ಛತೆ ಹಾಗೂ ಸುಂದರೀಕರಣಕ್ಕೆ ನಗರಸಭೆಯೊಂದಿಗೆ ಸರ್ವರೂ ಸಹಕರಿಸಬೇಕೆಂದು ನಗರಸಭೆಯ ಪೌರಾಯುಕ್ತ ರಾಜಾರಾಮ್ ಪವಾರ ಮನವಿ ಮಾಡಿದರು.

ಭಾನುವಾರ ಪಂಚಾಕ್ಷರಿ ನಗರದ ವಿವೇಕ ವೇದಿಕೆಯ ಪ್ರಥಮ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ನಗರ ಮತ್ತು ನಾಗರಿಕತೆ ಬೆಳೆದಂತೆ ಸಾರ್ವಜನಿಕರಿಗೆ ಮೂಲ ಸೌಲಭ್ಯಗಳನ್ನು ನೀಡುವಲ್ಲಿ ನಗರಸಭೆ ಆಡಳಿತ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದೆ. ಇದರೊಟ್ಟಿಗೆ ಪ್ರಜ್ಞಾವಂತ ನಾಗರಿಕರೂ ಅವಳಿ ನಗರದ ಸ್ವಚ್ಛತೆ ಹಾಗೂ ಸುಂದರವಾಗಿ ಕಾಣುವಲ್ಲಿ ನಗರಸಭೆಯೊಂದಿಗೆ ಸಹಕರಿಸಬೇಕು ಎಂದರು.ಮುಖ್ಯ ಅತಿಥಿ ನಿವೃತ್ತ ಪ್ರಾಚಾರ್ಯ ಅನೀಲ ವೈದ್ಯ ಮಾತನಾಡಿ, ನಾವು ನಮ್ಮ ಮನೆಯನ್ನು ಚೊಕ್ಕಟವಾಗಿ ಇಟ್ಟುಕೊಳ್ಳಲು ತೆಗೆದುಕೊಳ್ಳುವ ಕಾಳಜಿ ನಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನೂ ಅಷ್ಟೇ ಕಾಳಜಿಯಿಂದ ನೋಡಿಕೊಳ್ಳುವುದು ಪ್ರಜ್ಞಾವಂತಿಕೆಯ ಲಕ್ಷಣವಾಗಿದೆ. ಅಂತಹ ಕಾರ್ಯ ಅಣಿಗೊಂಡಿರುವ ವಿವೇಕ ವೇದಿಕೆಯ ಕಾರ್ಯ ಶ್ಲಾಘನೀಯ ಎಂದರು.ನಗರಸಭೆ ಸದಸ್ಯ ಅನೀಲ ಅಬ್ಬಿಗೇರಿ, ಸೋಮಪ್ಪ ರೊಟ್ಟಿ, ಅಧ್ಯಕ್ಷತೆ ವಹಿಸಿದ್ದ ವಿವೇಕ ವೇದಿಕೆಯ ಅಧ್ಯಕ್ಷ ಪಿ.ಎ. ಕುಲಕರ್ಣಿ ಮುಂತಾದವರು ಮಾತನಾಡಿದರು. ಸಮಾರಂಭದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು. ನಿವೃತ್ತ ಪಶು ವೈದ್ಯ ಡಾ. ಎಚ್.ಡಿ. ಹೊಸಮನಿ, ವಾಲಿಶೆಟ್ಟರ, ಶಿರೂರ ಅಶೋಕ ಉಪಸ್ಥಿತರಿದ್ದರು. ಸುಶೀಲಾ ಮತ್ತು ಕವಿತಾ ಶಿವನಗೌಡರ ಪ್ರಾರ್ಥಿಸಿದರು. ಕಾರ್ಯದರ್ಶಿ ಎಂ.ಡಿ. ವಡವಿ ಸ್ವಾಗತಿಸಿದರು. ವಿ.ಬಿ. ಗಡದರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎಂ. ಹುಬ್ಬಳ್ಳಿ ವರದಿ ವಾಚಿಸಿದರು. ಎಫ್.ಎಸ್. ಸಿಂಧಗಿ ಹಾಗೂ ಎಸ್.ಬಿ. ಸಜ್ಜನರ ಸಂಘಟನೆ ಕುರಿತು ಮಾತನಾಡಿದರು. ಯು.ಎಸ್. ನಿಪ್ಪಾಣಿಕರ ನಿರೂಪಿಸಿದರು. ಎಸ್.ಸಿ. ಪೊಲೀಸಪಾಟೀಲ ವಂದಿಸಿದರು. ಇಂದು ಬೆಳಗಾವಿಯಲ್ಲಿ ನೌಕರರ ಪ್ರತಿಭಟನೆ

ಗದಗ: ಅನುದಾನಿತ ಶಿಕ್ಷಣ ಸಂಸ್ಥೆಯ ನೌಕರರ ಸಂಸ್ಥೆಗಳ ಉಳಿವಿಗಾಗಿ ಸರ್ಕಾರ ನೀಡಿದ ಭರವಸೆಯನ್ನು ಈಡೇರಿಸಬೇಕು. ಹಳೆ ಪಿಂಚಣಿ ಶೀಘ್ರ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಡಿ. 17ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಕೈಗೊಳ್ಳಲಾಗುವುದು ಎಂದು ರಾಜ್ಯ ಉಪನ್ಯಾಸಕರ, ಪದವೀಧರ ಹಾಗೂ ಶಿಕ್ಷಕರ ಟ್ರಸ್ಟ್ ರಾಜ್ಯಾಧ್ಯಕ್ಷ ಪ್ರೊ. ಉಮೇಶ ಹಿರೇಮಠ ತಿಳಿಸಿದರು.ನಗರದಲ್ಲಿ ಬೆಳಗಾವಿ ಚಲೋ ಹೋರಾಟದ ಅಂತಿಮ ಸಿದ್ಧತೆಯ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬಹುವರ್ಷದ ಬೇಡಿಕೆಯಾಗಿ ಉಳಿದಿರುವ ಹಾಗೂ ಸಧ್ಯ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವ ಮುನ್ನ ಈ ಕುರಿತು ಆಶ್ವಾಸನೆಯನ್ನು ನೀಡಿತ್ತು. ನೌಕರರು ಮತ್ತು ಶಿಕ್ಷಣ ಸಂಸ್ಥೆಗಳು ಸರ್ಕಾರ ಈ ಭರವಸೆಯನ್ನು ಈಡೇರಿಸುವುದು ಎಂದು ಇಲ್ಲಿಯವರೆಗೂ ಚಾತಕ ಪಕ್ಷಿಯಂತೆ ಕಾಯುತ್ತ ಬಂದಿದೆ. ಆಗಾಗ ಮನವಿ ಸಲ್ಲಿಸುತ್ತ, ಹೋರಾಟ, ಪ್ರತಿಭಟನೆ ಮಾಡುತ್ತ ಬಂದಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಬೆಳಗಾಗಿಯಲ್ಲಿ ಡಿ. 17ರಂದು ರಾಜ್ಯ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ಕೈಗೊಳ್ಳಲು ಮುಂದಾಗಿದೆ ಎಂದರು.ಒಂದು ವೇಳೆ ಸರ್ಕಾರ ನಮ್ಮ ಬೇಡಿಕೆಯನ್ನು ಅಧಿವೇಶನದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು. ಅಲ್ಲದೆ ಪರಿಸ್ಥಿತಿಯನ್ನು ಅವಲೋಕಿಸಿ ರಾಜ್ಯಪಾಲರಿಗೆ ದಯಾಮರಣಕ್ಕಾಗಿ ಮನವಿ ಸಲ್ಲಿಸಿ ಹೋರಾಟದ ಸ್ವರೂಪವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ತಿಳಿಸಿದರು.ಕರ್ನಾಟಕ ರಾಜ್ಯ ಉಪನ್ಯಾಸಕರ, ಪದವೀಧದರ ಹಾಗೂ ಶಿಕ್ಷಕರ ಟ್ರಸ್ಟ್ ಗೌರವಾಧ್ಯಕ್ಷ ರವೀಂದ್ರನಾಥ ಬಿ. ದಂಡಿನ, ಎಂ.ಕೆ. ಲಮಾಣಿ, ಎ.ಎಸ್. ಪಾಟೀಲ ಸೇರಿದಂತೆ ಇತರರು ಇದ್ದರು.