ನಗರದ ಬಹುತೇಕ ಕಡೆಗಳಲ್ಲಿ ಫುಟ್ಪಾತ್‌ಗಳಿಲ್ಲದ ಕಾರಣ ಪಾದಾಚಾರಿಗಳು ನಡೆದಾಡಲು ತೀರಾ ಸಮಸ್ಯೆ ಉಂಟಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ ನಗರದ ಬಹುತೇಕ ಕಡೆಗಳಲ್ಲಿ ಫುಟ್ಪಾತ್ ಗಳಿಲ್ಲದ ಕಾರಣ ಪಾದಾಚಾರಿಗಳು ನಡೆದಾಡಲು ತೀರಾ ಸಮಸ್ಯೆ ಉಂಟಾಗಿದ್ದು, ಹಲವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ನಗರದ ಚೌಕಿ, ಕಾಲೇಜು ರಸ್ತೆ, ಎಸ್ ಬಿಐ ರಸ್ತೆ, ಮಾರುಕಟ್ಟೆ ರಸ್ತೆ ಸೇರಿದಂತೆ ಹಲವು ಕಡೆಯ ರಸ್ತೆಗಳಲ್ಲಿ ಇತ್ತೀಚೆಗೆ ಅತಿ ಹೆಚ್ಚಿನ ವಾಹನಗಳು ಸಂಚರಿಸುತ್ತಿರುವ ಪರಿಣಾಮ ನಡೆದಾಡಲು ಆಗದಂತಹ ಪರಿಸ್ಥಿತಿ ಉಂಟಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೃದ್ಧರಿಗೆ ರಸ್ತೆ ಬದಿಯಲ್ಲಿ ನಡೆದಾಡಲು ಪ್ರಯಾಸಪಡುವಂತಾಗಿದೆ.

ಮಡಿಕೇರಿಗೆ ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಇದರಿಂದ ವಾಹನ ದಟ್ಟಣೆಯೂ ಉಂಟಾಗುತ್ತದೆ. ಈ ಸಂದರ್ಭ ರಸ್ತೆಯ ಬದಿಯಲ್ಲಿ ಓಡಾಡಲು ಅನಾನೂಕುಲ ಉಂಟಾಗುತ್ತಿದ್ದು, ರಸ್ತೆಯಲ್ಲಿ ನಡೆದಾಡಲು ಹೆಚ್ಚಿನ ಸಮಯ ತೆಗೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಅಲ್ಲದೆ ವಾಹನಗಳು ಯಾವಾಗ ತಮಗೆ ಡಿಕ್ಕಿಪಡಿಸುತ್ತದೆ ಎಂಬ ಭಯದಲ್ಲಿ ನಡೆದಾಡುವಂತ ವಾತಾವರಣ ಸೃಷ್ಟಿಯಾಗಿದೆ.

ಅದಲ್ಲದೆ ನಗರದ ಕೆಲವು ರಸ್ತೆಗಳಲ್ಲಿ ಅಮೃತ್ ಯೋಜನೆಯಡಿಯ ಕಾಮಗಾರಿಗಾಗಿ ರಸ್ತೆ ಬದಿ ಗುಂಡಿ ತೆಗೆದು ಅದನ್ನು ಹಾಗೆಯೇ ಬಿಟ್ಟಿದ್ದು, ನಡು ರಸ್ತೆಯಲ್ಲಿ ಪಾದಾಚಾರಿಗಳು ನಡೆದಾಡುವಂತ ಪರಿಸ್ಥಿತಿ ಉಂಟಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ.

ನಗರದಲ್ಲಿ ಉಂಟಾಗಿರುವ ಈ ಸಮಸ್ಯೆಯನ್ನು ಮಡಿಕೇರಿ ನಗರಸಭೆ ಗಂಭೀರವಾಗಿ ತೆಗೆದುಕೊಂಡು ಆದಷ್ಟು ಬೇಗ ನಗರದ ಪ್ರಮುಖ ಕಡೆಗಳಲ್ಲಿ ಪಾದಾಚಾರಿಗಳು ನಡೆದಾಡಲು ಫುಟ್ಪಾತ್ ವ್ಯವಸ್ಥೆ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು ಮಾತನಾಡಿ, ಮಡಿಕೇರಿ ನಗರ ಕನಿಷ್ಟ ಮೂಲಭೂತ ಸೌಲಭ್ಯಗಳಿಂದ ಬಳಲುತ್ತಿದೆ. ನಗರದಲ್ಲಿ ಸಂಚರಿಸಲು ಯೋಗ್ಯ ಫುಟ್‌ಪಾತ್‌ಗಳಿಲ್ಲ, ಇರುವ ಫುಟ್ ಪಾತ್‌ಗಳು ಒತ್ತುವರಿಯಾಗಿದೆ. ಶಾಲಾ ಮಕ್ಕಳು ತೆರಳುವ ಜೂನಿಯರ್ ಕಾಲೇಜು ರಸ್ತೆ ಅತ್ಯಂತ ಕಿರಿದಾಗಿದ್ದು, ಇಲ್ಲಿ ಫುಟ್ ಪಾತ್ ಸಹಿತವಾದ ರಸ್ತೆ ನಿರ್ಮಾಣವಾಗಬೇಕು ಎಂದು ಸಲಹೆ ನೀಡಿದ್ದಾರೆ.

ರೋಟರಿ ಸಂಸ್ಥೆಯ ಅಜಿತ್ ನಾಣಯ್ಯ ಮಾತನಾಡಿ ನಗರದಲ್ಲಿ ರಸ್ತೆ ಬದಿ ವ್ಯಾಪಾರಕ್ಕೆ ಕಡಿವಾಣ ಹಾಕಿ ವ್ಯಾಪಾರಸ್ಥರಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಬೇಕೆಂದು ಸಲಹೆ ನೀಡಿದರು. ಇದರಿಂದ ಪಾದಾಚಾರಿಗಳಿಗೆ ರಸ್ತೆ ಬದಿ ವ್ಯಾಪಾರಿಗಳಿಂದ ಆಗುತ್ತಿರುವ ಸಮಸ್ಯೆಗೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಹೇಳಿದರು.

ಮಡಿಕೇರಿ ನಗರದ ಬಹುತೇಕ ರಸ್ತೆಗಳು ಕಿರಿದಾಗಿದೆ. ಆದ್ದರಿಂದ ಫುಟ್ಪಾತ್ ವ್ಯವಸ್ಥೆಗಳಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಫುಟ್ಪಾತ್ ಗಳನ್ನು ನಿರ್ಮಿಸಿ ಪಾದಾಚಾರಿಗಳಿಗೆ ಅನೂಕೂಲ ಮಾಡಿಕೊಡಲಾಗುವುದು ಎಂದು ಮಡಿಕೇರಿ ನಗರಸಭೆಯ ಉಪಾಧ್ಯಕ್ಷ ಮಹೇಶ್ ಜೈನಿ ಹೇಳುತ್ತಾರೆ.