ದೈವಜ್ಞ ಬ್ರಾಹ್ಮಣ ಸಮುದಾಯದ ಸರ್ವಾಂಗೀಣ ಪ್ರಗತಿಗಾಗಿ ಸಮಾಜದವರು ಸಂಘಟಿತರಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದು ಹೊನ್ನಾವರ ತಾಲೂಕಿನ ಕರ್ಕಿಯ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿ ತಿಳಿಸಿದರು.

ಕಂಪ್ಲಿ: ದೈವಜ್ಞ ಬ್ರಾಹ್ಮಣ ಸಮುದಾಯದ ಸರ್ವಾಂಗೀಣ ಪ್ರಗತಿಗಾಗಿ ಸಮಾಜದವರು ಸಂಘಟಿತರಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದು ಹೊನ್ನಾವರ ತಾಲೂಕಿನ ಕರ್ಕಿಯ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿ ತಿಳಿಸಿದರು.

ಪಟ್ಟಣದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದಿಂದ ಭಾನುವಾರ ಆಯೋಜಿಸಲಾಗಿದ್ದ ಧರ್ಮ ಜಾಗೃತಿ ಸಭೆಯಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಮಾಜದ ಪ್ರತಿಯೊಬ್ಬ ಸದಸ್ಯರು ಮಠ ಮತ್ತು ಗುರುಗಳೊಂದಿಗೆ ನಿರಂತರ ಸಂಪರ್ಕ ಹೊಂದಿರಬೇಕು. ಕನಿಷ್ಠ ವರ್ಷಕ್ಕೆ ಒಮ್ಮೆಯಾದರೂ ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದುಕೊಳ್ಳುವ ಮೂಲಕ ಧಾರ್ಮಿಕ ಹಾಗೂ ಆತ್ಮೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿಕೊಳ್ಳಬೇಕು ಎಂದರು.ಸಮಾಜದ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಕೈಜೋಡಿಸಬೇಕಿದ್ದು, ವಿಶೇಷವಾಗಿ ಮಕ್ಕಳಲ್ಲಿ ಬಾಲ್ಯದಲ್ಲಿಯೇ ದೈವಜ್ಞ ಬ್ರಾಹ್ಮಣ ಸಮುದಾಯದ ಸಂಪ್ರದಾಯ, ಆಚಾರ-ವಿಚಾರ, ಧಾರ್ಮಿಕ ಪ್ರಜ್ಞೆ ಹಾಗೂ ಮಠದ ಪರಂಪರೆಯ ಕುರಿತು ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ಸಂಸ್ಕಾರಯುತ ಶಿಕ್ಷಣ ಮತ್ತು ಧಾರ್ಮಿಕ ಮೌಲ್ಯಗಳ ಮೂಲಕ ಮುಂದಿನ ಪೀಳಿಗೆಯನ್ನು ಸದೃಢಗೊಳಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಠದ ಉತ್ತರಾಧಿಕಾರಿ ಮಠಾಧೀಶರಾದ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜದ ಏಕತೆ ಹಾಗೂ ಸಂಸ್ಕೃತಿಯ ಸಂರಕ್ಷಣೆಗೆ ಇಂತಹ ಧರ್ಮ ಜಾಗೃತಿ ಸಭೆಗಳು ಸಹಕಾರಿಯಾಗಿವೆ ಎಂದರು.

ಸಭೆಯಲ್ಲಿ ಸಮಾಜದ ಪ್ರಮುಖರಾದ ಪುಷ್ಪಾ ಪಾಂಡುರಂಗ ಕಾಗಲಕರ ಸೇರಿದಂತೆ ದೈವಜ್ಞ ಬ್ರಾಹ್ಮಣ ಸಮಾಜದ ಹಿರಿಯರು, ಮಹಿಳೆಯರು ಹಾಗೂ ಯುವಕರು ಭಾಗವಹಿಸಿದ್ದರು.

ಇದಕ್ಕೂ ಮುನ್ನ, ಜೋಗಿ ಕಾಲುವೆಯಿಂದ ದೈವಜ್ಞ ಬ್ರಾಹ್ಮಣ ಸಮಾಜದ ವೇದಿಕೆ ತನಕ ಭಕ್ತಿಭಾವದಿಂದ ಪಾದಯಾತ್ರೆ ಮೆರವಣಿಗೆ ನಡೆಯಿತು. ಮೆರವಣಿಗೆಯ ವೇಳೆ ಪಾದುಕಾ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.