ಸಾರಾಂಶ
ಭೂಮಿ ಕೇಂದ್ರದ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಬಿಸಿಲು ಮಳೆಯನ್ನದೇ ತಮ್ಮ ಜಮೀನುಗಳನ್ನು ಕಷ್ಟಪಟ್ಟು ಅಳತೆ ಮಾಡಿ ರೈತರ ಭೂಮಿ ಸುತ್ತಮುತ್ತ ಓಡಾಡಿ ಸರ್ವೆ ಮಾಡಿ ನಿಮಗೆ ಜಮೀನು ದಾಖಲೆ ಪತ್ರಗಳನ್ನು ಅಚ್ಚುಕಟ್ಟಾಗಿ ಮಾಡಿ ಕೊಟ್ಟಿರುವುದರಿಂದ ಅಧಿಕಾರಿಗಳಿಗೆ ರೈತರ ಪರವಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಭಿನಂದನೆ ಸಲ್ಲಿಸಿದರು.
ಕನ್ನಡಪ್ರಭವಾರ್ತೆ ಮಧುಗಿರಿ
: ಭೂಮಿ ಕೇಂದ್ರದ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಬಿಸಿಲು ಮಳೆಯನ್ನದೇ ತಮ್ಮ ಜಮೀನುಗಳನ್ನು ಕಷ್ಟಪಟ್ಟು ಅಳತೆ ಮಾಡಿ ರೈತರ ಭೂಮಿ ಸುತ್ತಮುತ್ತ ಓಡಾಡಿ ಸರ್ವೆ ಮಾಡಿ ನಿಮಗೆ ಜಮೀನು ದಾಖಲೆ ಪತ್ರಗಳನ್ನು ಅಚ್ಚುಕಟ್ಟಾಗಿ ಮಾಡಿ ಕೊಟ್ಟಿರುವುದರಿಂದ ಅಧಿಕಾರಿಗಳಿಗೆ ರೈತರ ಪರವಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಭಿನಂದನೆ ಸಲ್ಲಿಸಿದರು.ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಕಾಳೇನಹಳ್ಳಿ ಮತ್ತು ಕಸಿನಾಯಕನಹಳ್ಳಿ ಗ್ರಾಮಗಳಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕಂದಾಯ ಇಲಾಖೆಯ ಸರಳೀಕೃತ ದರಕಾಸ್ತು ಪೋಡಿ ಅಂದೋಲನ ಮತ್ತು ಹೊಸ ದಾಖಲೆಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತರು ಸುಮಾರು ಕಳೆದ 30 ವರ್ಷಗಳಿಂದ ಭೂಮಿ ಬಗ್ಗೆ ಗಮನ ಹರಿಸಿಲ್ಲ, ಈಗ ಭೂಮಿಗೆ ಹೆಚ್ಚು ಬೆಲೆ ಬಂದಿದೆ. ಭೂಮಿಯನ್ನು ಯಾರು ಕೂಡ ಮಾರಾಟ ಮಾಡಬೇಡಿ. ಭೂಮಿಗೆ ಪ್ರಸ್ತುತ ಅಪಾರ ಬೆಲೆ ಬಂದಿದೆ. ಈಗಾಗಲೇ ಎಸ್ಸಿ ,ಎಸ್ಟಿ ಜನಾಂಗಕ್ಕೆ ಮಂಜೂರಾಗಿರುವ ಸರ್ಕಾರಿ ಜಮೀನುಗಳನ್ನು ಯಾರು ಸಹ ಮಾರಾಟ ಮಾಡಬಾರದು. ಒಂದು ವೇಳೆ ಮಾರಿದರೂ ಕೂಡ ವಾಪಸ್ ಬಿಡಿಸಿಕೊಡುವುದಾಗಿ ಸಚಿವರು ಭರವಸೆ ನೀಡಿದರು. ಇಲ್ಲಿ ಭೂಮಿ ಕೂಡ ಫಲವತ್ತಾಗಿದೆ. ಸರ್ಕಾರಿ ಆಸ್ತಿ ಸ್ಥಳೀಯರಿಗೆ ದಕ್ಕಬೇಕೆ ಹೊರತು ಬೇರೆಯವರಿಗೆ ಅಲ್ಲ. ಬಹಳಷ್ಟು ಜನ ನಗರ ಪ್ರದೇಶಗಳಿಂದ ಇಲ್ಲಿಗೆ ಬಂದು ಭೂಮಿ ಕೊಂಡುಕೊಳ್ಳಲು ಬರುತ್ತಾರೆ. ಯಾರು ಕೂಡ ಬೇರೆಯವರನ್ನು ಬಿಟ್ಟುಕೊಳ್ಳಬಾರದು. ಸ್ಥಳೀಯರು ಗ್ರಾಮದಲ್ಲಿ ದ್ವೇಷ, ಅಸೂಹೆ ಬಿಟ್ಟು ತಂತಮ್ಮ ಆಸ್ತಿ ಉಳಿಸಿಕೊಳ್ಳಿ ಎಂದರು.ಅಧಿಕಾರಿಗಳು ಜನಪರವಾಗಿ ಕೆಲಸ ಮಾಡಬೇಕು. ಜನಕ್ಕೆ ತೊಂದರೆ ಆಗದ ರೀತಿ ನೋಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಜಮೀನು ಮಂಜೂರಾಗಿರುವ ಎಲ್ಲರಿಗೂ ಸಾಗುವಳಿ ಪತ್ರ ಕೊಡಿಸುವ ಉದ್ದೇಶವಿದೆ ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಮೆಂಬರ್ ಎಂ.ಎಸ್.ಮಲ್ಲಿಕಾರ್ಜುನಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣರೆಡ್ಡಿ, ಗೋಪಾಲಯ್ಯ, ಎಸಿ ಗೋಟೂರು ಶಿವಪ್ಪ, ತಹಸೀಲ್ದಾರ್ ಶಿರಿನ್ ತಾಜ್, ಇಒ ಲಕ್ಷ್ಮಣ್, ಡಿವೈಎಸ್‌ಪಿ ಮಂಜುನಾಥ್ ಸೇರಿದಂತೆ ಅನೇಕರಿದ್ದರು.