ಕಬ್ಬನ್‌ ಉದ್ಯಾನದಲ್ಲಿ “ಸಿರಿಧಾನ್ಯ ನಡಿಗೆ”

| Published : Dec 18 2023, 02:00 AM IST

ಸಾರಾಂಶ

ಸಾವಯವ ಮತ್ತು ಸಿರಿಧಾನ್ಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿವಿಧ ಪ್ರಚಾರಾಂದೋಲನ ಹಿನ್ನೆಲೆಯಲ್ಲಿ ಡಿ. 17ರಂದು ನಗರದಲ್ಲಿ “ಸಿರಿಧಾನ್ಯ ನಡಿಗೆ” ಹಮ್ಮಿಕೊಳ್ಳಲಾಗಿತ್ತು.

ಜ. 5ರಿಂದ ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳಕನ್ನಡಪ್ರಭ ವಾರ್ತೆ ಬೆಂಗಳೂರು

ಸಾವಯವ ಮತ್ತು ಸಿರಿಧಾನ್ಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿವಿಧ ಪ್ರಚಾರಾಂದೋಲನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಕೃಷಿ ಇಲಾಖೆ, ಜನವರಿ 5, 6 ಮತ್ತು 7ರಂದು ಅರಮನೆ ಮೈದಾನ ತ್ರಿಪುರ ವಾಸಿನಿಯಲ್ಲಿ “ಸಿರಿಧಾನ್ಯ, ಸಾವಯವ, ಅಂತಾರಾಷ್ಟ್ರೀಯ ವಾಣಿಜ್ಯ ಮೇಳ – 2024 ಏರ್ಪಡಿಸಿದೆ. ಈ ಹಿನ್ನೆಲೆಯಲ್ಲಿ ಡಿ. 17ರಂದು ನಗರದಲ್ಲಿ “ಸಿರಿಧಾನ್ಯ ನಡಿಗೆ” ಹಮ್ಮಿಕೊಳ್ಳಲಾಗಿತ್ತು.

ಕಬ್ಬನ್‌ ಉದ್ಯಾನವನದಲ್ಲಿ ಕೃಷಿ ಇಲಾಖೆ ಆಯುಕ್ತರಾದ ವೈ.ಎಸ್.‌ ಪಾಟೀಲ್‌, ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್‌, ಚಿತ್ರನಟಿ ಸಪ್ತಮಿಗೌಡ “ನಮ್ಮ ನಡಿಗೆ ಸಿರಿಧಾನ್ಯ ಕಡೆಗೆ” ವಾಕಥಾನ್‌ಗೆ ಚಾಲನೆ ನೀಡಿದರು. “ಸಿರಿಧಾನ್ಯ ಮತ್ತು ಸಾವಯವ: ಪರಂಪರೆಯ ಕೃಷಿ – ಭವಿಷ್ಯದ ಪೋಷಣೆ” ಎಂಬ ಘೋಷವಾಕ್ಯದಡಿ ಏರ್ಪಡಿಸಿದ್ದ ನಡಿಗೆಯಲ್ಲಿ ಉತ್ಸಾಹಿ ಯುವ ಸಮೂಹ ಸೇರಿದಂತೆ ಎಲ್ಲಾ ವಯೋಮಾನದವರು ಪಾಲ್ಗೊಂಡು ಹೆಜ್ಜೆ ಹಾಕಿದರು.

ಕೃಷಿ ಇಲಾಖೆ ಆಯುಕ್ತರಾದ ವೈ.ಎಸ್.‌ ಪಾಟೀಲ್‌ ಮಾತನಾಡಿ, ಜನವರಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಪೂರ್ವಭಾವಿಯಾಗಿ ಆರು ಪ್ರಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮುಖ್ಯ ಪ್ರಚಾರ ಅಭಿಯಾನಗಳನ್ನು ಮೆಟ್ರೋ ನಗರಗಳಲ್ಲಿ ಆಯೋಜಿಸಲಾಗುತ್ತಿದೆ. ರೈತರ ಆರ್ಥಿಕ ಸ್ಥಿತಿಗತಿಯನ್ನು ಅಭಿವೃದ್ಧಿಪಡಿಸುವ ಜೊತೆಗೆ ಆರೋಗ್ಯ ಸುಧಾರಣೆಗೆ ಆದ್ಯತೆ ನೀಡಲಾಗುತ್ತಿದೆ. ರಾಸಾಯನಿಕ ಮುಕ್ತ ಆಹಾರ ಪದ್ಧತಿಯನ್ನು ಉತ್ತೇಜಿಸುವುದು ವಾಕಥಾನ್ ಉದ್ದೇಶವಾಗಿದೆ ಎಂದರು.

ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್‌ ಮಾತನಾಡಿ, ಸಿರಿಧಾನ್ಯಗಳಿಂದ ವಿವಿಧ ಉಪ ಉತ್ಪನ್ನಗಳನ್ನು ತಯಾರಿಸುವ ಜೊತೆಗೆ ಆರೋಗ್ಯ ರಕ್ಷಣೆಗೆ ಯಾವ ಉತ್ಪನ್ನ ಸೂಕ್ತ ಎಂಬ ಕುರಿತು ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲಾಗುತ್ತಿದೆ. ದಿನದಿಂದ ದಿನಕ್ಕೆ ಸಿರಿಧಾನ್ಯಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಹೆಚ್ಚಾಗುತ್ತಿದ್ದು, ಈ ಅರಿವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಇಲಾಖೆ ಪ್ರಚಾರ ಅಭಿಯಾನವನ್ನು ತೀವ್ರಗೊಳಿಸಿದೆ ಎಂದು ಹೇಳಿದರು.

ಚಿತ್ರಶೀರ್ಷಿಕೆ: ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ, ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಹಿನ್ನೆಲೆಯಲ್ಲಿ ನಗರದ ಕಬ್ಬನ್‌ ಉದ್ಯಾನವನದಲ್ಲಿ “ಸಿರಿಧಾನ್ಯ ನಡಿಗೆ” ಹಮ್ಮಿಕೊಳ್ಳಲಾಗಿತ್ತು. ಕೃಷಿ ಇಲಾಖೆ ಆಯುಕ್ತರಾದ ವೈ.ಎಸ್.‌ ಪಾಟೀಲ್‌, ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್‌, ಚಿತ್ರನಟಿ ಸಪ್ತಮಿಗೌಡ “ನಮ್ಮ ನಡಿಗೆ ಸಿರಿಧಾನ್ಯ ಕಡೆಗೆ” ವಾಕಥಾನ್‌ಗೆ ಚಾಲನೆ ನೀಡಿದರು. ಉತ್ಸಾಹಿ ಯುವ ಸಮೂಹ ಸೇರಿದಂತೆ ಎಲ್ಲಾ ವಯೋಮಾನದವರು ಪಾಲ್ಗೊಂಡು ಹೆಜ್ಜೆ ಹಾಕಿದರು.