ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಭಾರತೀಯ ಪರಂಪರೆಯಲ್ಲಿ ಜಾತ್ರೆಗಳಿಗೆ ಮಹತ್ವವಿದೆ. ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಜಾತ್ರೆಗಳು ಪೂರಕವಾಗಿವೆ ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಪ.ಪೂ ಶ್ರೀ ಬಸವಲಿಂಗ ಮಹಾಸ್ವಾಮೀಜಿ ಪ್ರತಿಪಾದಿಸಿದರು.ತಾಲೂಕಿನ ಮಣೂರ ಗ್ರಾಮದ ಹತ್ತಿರ ಶ್ರೀ ವೆಂಕಟೇಶ್ವರ ದೇವಸ್ಥಾನದ ಪ್ರಥಮ ಜಾತ್ರಾ ಮಹೋತ್ಸವ ಸಮಾರಂಭ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಿದ್ಯೆ ನಮ್ಮ ಬದುಕಿಗೆ ದಾರಿ ತೋರಿಸಿದರೆ, ಸಂಸ್ಕೃತಿ ನಮ್ಮ ಬಾಳು ಹಸನಾಗಿಸುತ್ತದೆ. ವಿದ್ಯೆಯ ಜೊತೆಗೆ ಸಂಸ್ಕೃತಿ ಮೈಗೂಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ. ಇಂತಹ ಸಂಸ್ಥೆಗಳಲ್ಲಿ ವಿದ್ಯೆಯ ಜೊತೆಗೆ ಸಂಸ್ಕೃತಿ ನೀಡುತ್ತಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯ ಖಂಡಿತ ಉಜ್ವಲವಾಗಿರುತ್ತದೆ. ಇವರು ಉತ್ತಮ ಪ್ರಜೆಗಳಾಗಿ ಹೊರಹೊಮ್ಮುತ್ತಾರೆ. ಎಲ್ಲ ದಾನದಲ್ಲಿ ವಿದ್ಯೆದಾನ ಅಮೂಲ್ಯವಾದದು ಎಂದರು.ಶಿಕ್ಷಕರು ವಿದ್ಯಾರ್ಥಿಗಳು ಆದರ್ಶರಾಗಬೇಕು. ಹಲವಾರು ಸಂಸ್ಥೆಗಳನ್ನು ಹುಟ್ಟುಹಾಕಿರುವ ಬಿ.ಎಲ್. ಅಂಗಡಿ ಅವರು ದೇವಸ್ಥಾನ ಕಟ್ಟಿಸುವ ಮೂಲಕ ಸಂಸ್ಥೆಗಳಲ್ಲಿ ವಿದ್ಯೆಯ ಜೊತೆಗೆ ಸಂಸ್ಕಾರ ನೀಡುತ್ತಿರುವುದು ಭಾರತೀಯ ಸಂಸ್ಕೃತಿಯಾಗಿದೆ. ಜಾತ್ರೆಗಳಿಗೆ ಯಾವುದೇ ಜಾತಿ, ಧರ್ಮದ ಲೇಪವಿರುವುದಿಲ್ಲ. ಎಲ್ಲ ಧರ್ಮಿಯರು ಜಾತ್ರೆಯಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ ಎಂದು ಹೇಳಿದರು.ಯುವ ಮುಖಂಡ ಮಲ್ಲನಗೌಡ ಬಿರಾದಾರ (ಕೆಸರಟ್ಟಿ) ಮಾತನಾಡಿ, ಹಲವಾರು ಸಂಸ್ಥೆಗಳನ್ನು ಹುಟ್ಟುಹಾಕಿ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವ ಮೂಲಕ ಈ ಭಾಗದಲ್ಲಿ ತಿರುಪತಿಯ ವೆಂಕಟರಮಣ ದೇವಸ್ಥಾನ ನಿರ್ಮಿಸಿರುವ ಸಂಸ್ಥೆಯ ಅಧ್ಯಕ್ಷರು ಭಾರತದ ಭವ್ಯ ಪರಂಪರೆ ಉಳಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಬೀದರ ಚಿದಂಬರ ಆಶ್ರಮದ ಸಿದ್ಧಾರೂಢ ಮಠದ ಪ.ಪೂ ಶ್ರೀ ಡಾ. ಶಿವಕುಮಾರ ಮಹಾಸ್ವಾಮೀಜಿ ಮಾತನಾಡಿ, ಪಶು, ಪಕ್ಷಿ, ಮನುಜರು ಮನೆ ನಿರ್ಮಾಣ ಮಾಡುತ್ತಾರೆ. ಆದರೆ, ದೇವಸ್ಥಾನ ನಿರ್ಮಾಣ ಮಾಡುವರು ಹೃದಯವಂತರು. ಬಿ.ಎಲ್.ಅಂಗಡಿಯವರು ಮನುಷ್ಯರಾಗಿ ಶಾಲಾ ಕಾಲೇಜು ನಿರ್ಮಾಣ ಮಾಡುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿ ಪಾಲಕರ ಹಾಗೂ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.ಸ್ಥಳೀಯ ಮಣೂರ ಗ್ರಾಮದ ಹಿರೇಮಠದ ಷ.ಬ್ರ ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ಶ್ರೀ ವೆಂಕಟೇಶ್ವರ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ಬಿ.ಎಲ್.ಅಂಗಡಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಂಗ ಸಂಸ್ಥೆಗಳಲ್ಲಿ ಕ್ರೀಡೆ ಹಾಗೂ ಶೈಕ್ಷಣಿಕವಾಗಿ ಹೆಸರು ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಧನ ನೀಡಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ವಿಜಯಪುರ ಜ್ಞಾನ ಯೋಗಾಶ್ರಮದ ಸಂಗಮೇಶ್ವರ ಶ್ರೀ ಹಿಟ್ನಳ್ಳಿ ಪಿಕೆಪಿಎಸ್ ಮಾಜಿ ಅಧ್ಯಕ್ಷ ಆರ್.ಆರ್.ಅಂಗಡಿ, ಮುಖಂಡರು ಶ್ರೀಮಂತ ತಳವಾರ, ರುದ್ರಗೌಡ ಬಿರಾದಾರ, ಸುರೇಶ, ಬಸವಂತ, ರಾಚಪ್ಪ ಕಮತಗಿ, ಅಂಬಣ್ಣ ಆನೆಗುಂದಿ, ಗೌಡಪ್ಪ ಕನ್ನೋಳಿ, ಕಾಂತು ಚವ್ಹಾಣ, ರತನಸಿಂಗ ರಾಠೋಡ, ಪಿ.ಕೆ.ನಾಯಕ ಸೇರಿ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.ಪ್ರಾಸ್ತಾವಿಕವಾಗಿ ಯಾಳವಾರ ಹಿರೇಮಠದ ಬಸಯ್ಯ ಶ್ರೀಗಳು ಮಾತನಾಡಿದರು. ಕಾರ್ಯಕ್ರಮದ ನಿರೂಪಣೆ ಬಿ.ಎಂ.ಉನ್ನಿಬಾಗಿ.ಡಿ.ಜಿ.ಜಾಡರ ಸ್ವಾಗತಿಸಿ, ವಂದಿಸಿದರು.