ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರನ್ನ ಪ್ರತಿಷ್ಠಾನದಡಿ ಫೆ.22ರಂದು ಬೆಳಗಲಿಯಲ್ಲಿ ಫೆ.23 ಮತ್ತು 24ರಂದು ಮುಧೋಳ ರನ್ನ ಕ್ರೀಡಾಂಗಣದಲ್ಲಿ ರನ್ನ ವೈಭವ-2025ರ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.ಶುಕ್ರವಾರ ಸಂಜೆ ರನ್ನ ಕ್ರೀಡಾಂಗಣದಲ್ಲಿ ಹಾಕಲಾಗಿರುವ ಭವ್ಯ ವೇದಿಕೆ ಮತ್ತು ಊಟದ ವ್ಯವಸ್ಥೆ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಫೆ.22ರಂದು ಬೆಳಗ್ಗೆ 10 ಗಂಟೆಗೆ ರನ್ನ ಬೆಳಗಲಿಯ ಶ್ರೀ ಬಂದಲಕ್ಷ್ಮೀ ದೇವಸ್ಥಾನದಿಂದ ಕವಿ ಚಕ್ರವರ್ತಿ ರನ್ನ ವೇದಿಕೆಯವರೆಗೆ 50ಕ್ಕೂ ಅಧಿಕ ಜಾನಪದ ಕಲಾ ತಂಡಗಳದೊಂದಿಗೆ ಹೊರಡುವ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಚಾಲನೆ ನೀಡುವರು.
22ರಂದು ಬೆಳಗ್ಗೆ 11 ಗಂಟೆಗೆ ಮುಧೋಳ ರನ್ನ ಭವನದಲ್ಲಿ ರನ್ನ ಕಾವ್ಯ ದರ್ಶನ ವಿಚಾರ ಸಂಕಿರಣವನ್ನು ಡಾ.ಶಿವಾನಂದ ಕುಬಸದ ಉದ್ಘಾಟಿಸುವರು. ಹಂಪಿ ಕನ್ನಡ ವಿ.ವಿ. ಪ್ರಸಾರಂಗ ನಿರ್ದೇಶಕ ಡಾ.ಮಾಧವ ಪೆರಾಜೆ ಅಧ್ಯಕ್ಷತೆ ವಹಿಸುವರು. ಹಂಪಿ ಕನ್ನಡ ವಿ.ವಿ ಹಿರಿಯ ಪ್ರಾಧ್ಯಾಪಕ ಡಾ.ವೀರೇಶ ಬಡಿಗೇರ ಆಶಯನುಡಿ ಹೇಳುವರು.ಗೋಷ್ಠಿ-1- ರನ್ನ ಕಾವ್ಯಧಾರೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ.ಮೈತ್ರಾಯಿಣಿ ಗದಿಗೆಪ್ಪಗೌಡರ ಅವರು ಮಹಾಕವಿ ರನ್ನನ ಕಾವ್ಯದಲ್ಲಿ ಸ್ತ್ರೀವಾದ ನಿಲುವು (ನೆಲೆ) ವಿಷಯದ ಕುರಿತು, ಸಾಹಿತಿ ಡಾ.ಮೈನುದ್ದಿನ್ ರೇವಡಿಗಾರ ಅವರು ಗದಾ ಯುದ್ಧದಲ್ಲಿ ರನ್ನನ ಸ್ವಗತ ವಿಷಯದ ಕುರಿತು ಮಾತನಾಡುವರು.
ಗೋಷ್ಠಿ-2. ರನ್ನನ ಧರ್ಮ ಹಾಗೂ ಕಾವ್ಯಧರ್ಮ-ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸುವರು. ಮೋಡಿಲಿಪಿ ತಜ್ಞ ಡಾ. ಸಂಗಮೇಶ ಕಲ್ಯಾಣಿ ಆಶಯ ನುಡಿ ಹೇಳುವರು. ಪ್ರೊ.ಆರ್.ಜಿ. ಸನ್ನಿ ಅವರು ರನ್ನನ ಗದಾ ಯುದ್ಧದಲ್ಲಿ ಯುದ್ಧ ವಿರೋಧಿ ನೀತಿ ಕುರಿತು, ಡಾ.ಚಲಪತಿ ಆರ್., ರನ್ನನ ಗದಾಯುದ್ಧ ಸಂಗತಿ ಕುರಿತು ಮಾತನಾಡುವರು.22ರಂದು ಸಂಜೆ 4 ಗಂಟೆಗೆ ರನ್ನ ಬೆಳಗಲಿಯಲ್ಲಿ ವಿವಿಧ ಕಲಾವಿದರಿಂದ ಚೌಡಕಿ ಪದಗಳು, ಶಾಸ್ತ್ರೀಯ ಸಂಗೀತ, ಡೊಳ್ಳಿನ ಪದಗಳು, ಗೊಂದಳಿ ಪದ, ಸಮೂಹ ನೃತ್ಯ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಭಜನೆಗಳು, ಜೋಗತಿ ಮತ್ತು ದೀಪ ನೃತ್ಯ, ಲಂಬಾಣಿ ನೃತ್ಯ, ಭರತನಾಟ್ಯ, ಹಾಸ್ಯಸಂಜೆ, ಸಿದ್ಧಿ ಡಮಾಮಿ ನೃತ್ಯ, ಜಾನಪದ ಸಂಗೀತ ಕಾರ್ಯಕ್ರಮ ನಡೆಯಲಿವೆ.
22ರಂದು ಸಂಜೆ 6 ಗಂಟೆಗೆ ರನ್ನ ಬೆಳಗಲಿಯಲ್ಲಿ ಕಾನೂನು ಸಚಿವ ಎಚ್.ಕೆ. ಪಾಟೀಲ ಉತ್ಸವ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅಧ್ಯಕ್ಷತೆ ವಹಿಸುವರು. ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹಾದೇವಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ, ಜವಳಿ, ಸಕ್ಕರೆ ಸಚಿವ ಶಿವಾನಂದ ಪಾಟೀಲ, ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಶಾಸಕರಾದ ಯಶವಂತರಾಯಗೌಡ ಪಾಟೀಲ, ಲಕ್ಷ್ಮಣ ಸವದಿ ವಿಶೇಷ ಅಹ್ವಾನಿತರಾಗಿ ಭಾಗವಹಿಸಲಿದ್ದು, ಜಿಲ್ಲೆಯ ಶಾಸಕರು, ರನ್ನ ಪ್ರತಿಷ್ಠಾನ ಸದಸ್ಯರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿರುವರು.22ರಂದು ರಾತ್ರಿ 9 ಗಂಟೆಗೆ ಖ್ಯಾತ ಗಾಯಕ ಗುರುಕಿರಣ ಹಾಗೂ ತಂಡದವರಿಂದ ಚಿತ್ರ ಸಂಗೀತ ಸುಧೆ ಕಾರ್ಯಕ್ರಮ ನಡೆಯಲಿವೆ
ಈ ಎಲ್ಲ ಕಾರ್ಯಕ್ರಮಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕಾರ್ಯಕ್ರಮ ಸಂಪೂರ್ಣ ಯಶಸ್ವಿಗೊಳಿಸುವಂತೆ ಸಚಿವ ಆರ್.ಬಿ. ತಿಮ್ಮಾಪೂರ ವಿನಂತಿಸಿದ್ದಾರೆ.ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಜಿಪಂ ಸಿಇಒ ಶಶಿಧರ ಕುರೇರ, ಗೋವಿಂದಪ್ಪ ಗುಜ್ಜನ್ನವರ, ಉದಯಕುಮಾರ ಸಾರವಾಡ, ಮಹಾಂತೇಶ ಮಾಚಕನೂರ, ಅಪ್ಪಣ್ಣ ರೂಗಿ, ಹನುಮಂತ ತಿಮ್ಮಾಪೂರ, ಸಂಗಪ್ಪ ಇಮ್ಮನ್ನವರ, ಸದೂಗೌಡ ಪಾಟೀಲ, ಮುದಕಣ್ಣ ಅಂಬಿಗೇರ, ವೀರೇಶ ಕಲಾದಗಿ, ಮಹಾಲಿಂಗಪ್ಪ ಚಿನಿವಾಲ, ಎಸ್.ವೈ. ಬಸರಿಗಿಡದ, ಮಹೇಶ ಪರೀಟ, ಸಿ.ಎಲ್. ರೂಗಿ ಸೇರಿದಂತೆ ಇತರರು ಇದ್ದರು.