ಸಾರಾಂಶ
ಕಲಘಟಗಿ: ಧರ್ಮ ಅನ್ನುವುದು ಎಲ್ಲರಿಗೂ ಸರಿಸಮಾನವಾಗಿರುತ್ತದೆ. ಆ ಧರ್ಮದ ಹಾದಿಯಲ್ಲಿ ಎಲ್ಲರೂ ಸಾಗಬೇಕಿದೆ ಎಂದು ಮುಕ್ಕಲ್ಲ ವ ಅಸ್ತಕಟ್ಟಿ ಶಿವಯೋಗ ಆಶ್ರಮದ ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು ನುಡಿದರು.
ತಾಲೂಕಿನ ಮುಕ್ಕಲ್ ವ ಅಸ್ತಕಟ್ಟಿ ಶಿವಯೋಗ ಆಶ್ರಮದಲ್ಲಿ ಮಂಗಳವಾರ ನಡೆದ ಲಿಂಗೈಕ್ಯ ಶ್ರೀ ಚೆನ್ನವೀರ ಮಹಾಸ್ವಾಮಿಗಳ 22ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಮನುಷ್ಯನಲ್ಲಿ ಸಹಕಾರ ಮನೋಭಾವನೆ ಎಂಬುದು ಮುಖ್ಯವಾಗಿ ಬರಬೇಕಾಗಿದೆ. ಎಲ್ಲರ ಜೊತೆಗೂಡಿ ಬದುಕಿನ ಬಂಡಿ ಎಳೆಯುವಂತಹ ಕಾರ್ಯ ಮಾಡಬೇಕು. ಬದುಕಿನಲ್ಲಿ ಟೀಕೆ ನಿಂದನೆಗಳು ಬರುವುದು ಸಹಜ. ಮರ-ಗಿಡಗಳು ತನಗಾಗಿ ಬದುಕದೇ ಎಲ್ಲರಿಗಾಗಿ ಹೇಗೆ ಬದುಕು ಸಾಗಿಸುತ್ತವೆಯೋ ಹಾಗೆ ಆಸೆ ಆಮಿಷಗಳನ್ನು ದೂರ ಮಾಡಿ ಬಾಳುವ ಕಾರ್ಯ ಎಲ್ಲರೂ ಮಾಬೇಕಿದೆ. ನಿಸ್ವಾರ್ಥ ಭಾವನೆ ಎಂಬುದು ಮನುಷ್ಯನಲ್ಲಿರುವ ಕಲ್ಮಷವನ್ನು ತೊಳೆದು ಹಾಕುತ್ತದೆ. ಸ್ವಾರ್ಥ ಭಾವನೆ ಎಂಬುದು ಅವರನ್ನೇ ಸುಟ್ಟು ಹಾಕುತ್ತದೆ. ಅಂತಹ ಸ್ವಾರ್ಥ ಭಾವನೆ ಬಿಟ್ಟು ಧರ್ಮದ ಹಾದಿಯಲ್ಲಿ ಎಲ್ಲರೂ ಸಾಗಬೇಕಿದೆ. ಮುಂದಿನ ದಿನಗಳಲ್ಲಿ ಶ್ರೀಮಠದ ಆವರಣದಲ್ಲಿ ನೂರಾರು ಶ್ರೀಗಳ ಸಮ್ಮುಖದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.ಸಿದ್ಧಾರೂಢ ಮಠದ ನಿರ್ಗುಣಾನಂದ ಸ್ವಾಮಿಗಳು ಮಾತನಾಡಿ, ಮನುಷ್ಯನಲ್ಲಿರುವ ಸ್ವಾರ್ಥ ಭಾವನೆ ಬಿಟ್ಟು ಅನೇಕ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮ ಮಾಡಿ ಭಕ್ತರ ಮೂಢನಂಬಿಕೆಗಳನ್ನು ಹೋಗಲಾಡಿಸಬೇಕು. ಜಾತಿ-ಮತ, ಪಂಥವೆನ್ನದೇ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಮನೋಭಾವ ಹೊಂದಿದ ಪೂಜ್ಯರು ಎಲ್ಲ ಭಕ್ತರನ್ನು ಪ್ರೀತಿಯಿಂದ ಕಾಣುತ್ತಾರೆ. ಈ ಭಾಗದಲ್ಲಿ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದಂತಹ ಅನನ್ಯವಾದ ಸೇವೆ ಸಲ್ಲಿಸುತ್ತ ಬಂದಿರುವುದು ಶ್ಲಾಘನೀಯವಾಗಿದೆ. ಅಂತಹ ಪೂಜ್ಯರನ್ನು ಪಡೆದ ಈ ಭಾಗದ ಭಕ್ತ ಸಮೂಹ ಧನ್ಯ ಎಂದರು.ಕಂಪ್ಲಿಯ ಶ್ರೀ ಅಭಿನವ ಪ್ರಭು ಮಹಾಸ್ವಾಮಿಗಳು ಮಾತನಾಡಿ, ಸಮಾಜ ನಮಗೇನು ಕೊಟ್ಟಿದೆ ಅನ್ನೋದಕ್ಕಿಂತ ಸಮಾಜಕ್ಕೆ ಮತ್ತು ಧರ್ಮಕ್ಕೆ ನಾವು ಏನು ಕೊಡುಗೆ ಕೊಟ್ಟಿದ್ದೇವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಮನುಷ್ಯ ಪರೋಪಕಾರಿಯಾಗಿ ಬದುಕಬೇಕು. ಸಹಕಾರ ಮತ್ತು ಸಹಬಾಳ್ವೆಯಿಂದ ಇದ್ದರೆ ಮನುಷ್ಯನ ಮನಸ್ಸು ನಂದನವಾಗಿರುತ್ತದೆ. ಹಾಗೆ ಎಲ್ಲರೂ ಮನಸ್ಸನ್ನು ನಂದನವನವನ್ನಾಗಿ ಮಾಡಿಕೊಳ್ಳಬೇಕು. ಎಲ್ಲ ಕಾರ್ಯಗಳಲ್ಲಿಯೂ ಇಂದು ಸ್ವಾರ್ಥವೆಂಬುದು ತಾಂಡವವಾಡುತ್ತಿದೆ. ಆದರೆ, ಧರ್ಮದ ಕಾರ್ಯದಲ್ಲಿ ಯಾರೂ ಸ್ವಾರ್ಥವನ್ನು ಬಯಸದೇ ಕೆಲಸ ಮಾಡಬೇಕು. ಧಾರ್ಮಿಕ ಕಾರ್ಯಗಳ ಜೊತೆಗೆ ಧರ್ಮ ಕಾರ್ಯದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿದೆ ಎಂದರು.
ತಾವರಗೇರಿ ಸಿದ್ದಾರೂಢ ಮಠದ ದಯಾನಂದ ಸ್ವಾಮಿಗಳು ಮಾತನಾಡಿದರು. ಸಂಜೆ 4:30ಕ್ಕೆ ಚೆನ್ನವೀರ ಮಹಾಸ್ವಾಮಿಗಳ ರಥೋತ್ಸವ ಜರುಗಿತು. ಹಲವಾರು ಕಲಾವಿದರಿಂದ ಮನರಂಜನೆ ಕಾರ್ಯಕ್ರಮಗಳು ಜರುಗಿದವು. ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಪ್ರೌಢಶಾಲೆ ಅಧ್ಯಕ್ಷ ಲಿಂಗರೆಡ್ಡಿ ನಡುವಿನಮನಿ, ಪ್ರಕಾಶ್ ಕುಂಬಾರ, ಶ್ರೀಧರ ಆಸಂಗಿ, ಎಚ್.ಎನ್. ಸುನಗದ, ಸಂಜಯ್ ನಡುವಿನಮನಿ, ಸುಭಾಷ್ ಗೌಡ ಪಾಟೀಲ್, ಬಸವರಾಜ್ ವನ್ನಳ್ಳಿ ಫಕೀರಪ್ಪ ಯಲ್ಲಾರಿ, ರಾಮನಗೌಡ ಪಾಟೀಲ, ಬಸಪ್ಪ ಬಾಲಪ್ಪನವರ ಸೇರಿದಂತೆ ಮುಕ್ಕಲ ಆಸ್ತಕಟ್ಟಿ ಇನಾಮಂಗಲ, ಬಾಗಲಕೋಟೆ ಶಿರೂರ ಭಕ್ತರು ಉಪಸಿತರಿದ್ದರು.