ದೇಶಕ್ಕೆ ನರೇಂದ್ರ ಮೋದಿಯವರ ಅವಶ್ಯಕತೆ ಇದೆ: ಗೋವಿಂದ ಕಾರಜೋಳ

| Published : Apr 25 2024, 01:11 AM IST

ಸಾರಾಂಶ

ಪ್ರಧಾನಮಂತ್ರಿ ನರೇಂದ್ರ ಮೋದಿ ಎಂದರೆ ಒಬ್ಬ ವ್ಯಕ್ತಿಯಲ್ಲ, ಅವರು ಈ ದೇಶದ ಶಕ್ತಿ. ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾದರೆ ಭಾರತ ವಿಶ್ವಗುರುವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕನ್ನಡಪ್ರಭ ವಾರ್ತೆ ಶಿರಾ

ದೇಶದ ಸುಭದ್ರತೆ ಹಾಗೂ ಆರ್ಥಿಕ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಅವಶ್ಯಕತೆ ಇದೆ. ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ, ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎನ್.ಡಿ.ಎ. ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.

ಮಂಗಳವಾರ ತಾಲೂಕಿನ ಹುಲಿಕುಂಟೆ, ಬರಗೂರು, ತಾವರೆಕೆರೆ ಸೇರಿ ಹಲವು ಗ್ರಾಮಗಳು ಹಾಗೂ ಶಿರಾ ನಗರದಲ್ಲಿ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಎಂದರೆ ಒಬ್ಬ ವ್ಯಕ್ತಿಯಲ್ಲ, ಅವರು ಈ ದೇಶದ ಶಕ್ತಿ. ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾದರೆ ಭಾರತ ವಿಶ್ವಗುರುವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಪ್ಪರ ಭದ್ರ ನೀರಾವರಿ ಯೋಜನೆಯಿಂದ ಶಿರಾ ತಾಲೂಕಿನ 65 ಕೆರೆಗಳು ಭರ್ತಿಯಾಗಲಿದ್ದು, ಇದಕ್ಕೆ ಕೇಂದ್ರ ಸರಕಾರ 5300 ಕೋಟಿ ರು.ಮೀಸಲಿಟ್ಟಿದೆ. ನಾನು ಸಂಸದನಾಗಿ ಆಯ್ಕೆಯಾದ ತಕ್ಷಣ ಹಣ ಬಿಡುಗಡೆಗೊಳಿಸಿ ಅಪ್ಪರ ಭದ್ರ ನೀರಾವರಿ ಯೋಜನೆ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸುತ್ತೇನೆ ಎಂದರು.

ವಿಧಾನಪರಿಷತ್ ಸದಸ್ಯ ಚಿದಾನಂದ ಎಂ ಗೌಡ, ಮಾಜಿ ಶಾಸಕ ಡಾ. ಸಿ.ಎಂ. ರಾಜೇಶ್ ಗೌಡ, ಜೆಡಿಎಸ್ ರಾಜ್ಯ ಪರಿಷತ್ ಸದಸ್ಯ ಆರ್.ಉಗ್ರೇಶ್ ಮಾತನಾಡಿದರು.

ಬೃಹತ್ ರೋಡ್ ಶೋ:

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ಮಂಗಳವಾರ ರಾತ್ರಿ ಬೃಹತ್ ಚುನಾವಣಾ ಪ್ರಚಾರದ ರೋಡ್ ಶೋ ನಡೆಸಿದರು. ವಿಧಾನ ಪರಿಷತ್ ಸದಸ್ಯ ಕೆ. ತಿಪ್ಪೇಸ್ವಾಮಿ, ವೈ.ಎ.ನಾರಾಯಣ ಸ್ವಾಮಿ, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ, ತೆಂಗು ನಿಗಮದ ಮಾಜಿ ಅಧ್ಯಕ್ಷ ಬಿ.ಕೆ. ಮಂಜುನಾಥ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ಡಿ.ರಂಗನಾಥ್ ಕೊಟ್ಟ, ನಗರ ಅಧ್ಯಕ್ಷ ಗಿರಿಧರ್, ತಾಲೂಕು ಜೆಡಿಎಸ್ ಅಧ್ಯಕ್ಷ ಸತ್ಯಪ್ರಕಾಶ್, ಕಾಡುಗೊಲ್ಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಚಂಗಾವರ ಮಾರಣ್ಣ, ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಗೌಡಪ್ಪ, ಗ್ರಾಪಂ ಸದಸ್ಯ ಶಿವು ಸ್ನೇಹಪ್ರಿಯ, ಮುಖಂಡ ಹುಣಸೇಹಳ್ಳಿ ಶಿವಕುಮಾರ್, ರೇಣುಕಮ್ಮ ಸೇರಿ ಸಹಸ್ರಾರು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ರೋಡ್ ಶೋನಲ್ಲಿ ಪಾಲ್ಗೊಂಡಿದ್ದರು.