ಬಿಜೆಪಿ ನಾಯಕಿ ಜಾಮೀನು ರದ್ಧತಿಗೆ ಸಿಪಿಎಂ ಒತ್ತಾಯ

| Published : Sep 12 2025, 12:06 AM IST

ಸಾರಾಂಶ

ವಂಚನೆ ಪ್ರಕರಣ ಕುರಿತಂತೆ ನಗರದ ಪ್ರಿಯಾಂಕಾ ಮಹಿಳಾ ಮತ್ತಿನ ಸಹಕಾರ ಸಂಘದ ಅಧ್ಯಕ್ಷೆ ಹಾಗೂ ಬಿಜೆಪಿ ನಾಯಕಿ ಪ್ರಿಯಾಂಕಾ ಜೈನ್‌ಗೆ ನೀಡಿರುವ ಜಾಮೀನು ರದ್ದುಪಡಿಸಿ, ಅವರನ್ನು ಪೊಲೀಸ್ ಕಸ್ಟಡಿಗೆ ನೀಡಬೇಕು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ವಂಚನೆ ಪ್ರಕರಣ ಕುರಿತಂತೆ ನಗರದ ಪ್ರಿಯಾಂಕಾ ಮಹಿಳಾ ಮತ್ತಿನ ಸಹಕಾರ ಸಂಘದ ಅಧ್ಯಕ್ಷೆ ಹಾಗೂ ಬಿಜೆಪಿ ನಾಯಕಿ ಪ್ರಿಯಾಂಕಾ ಜೈನ್‌ಗೆ ನೀಡಿರುವ ಜಾಮೀನು ರದ್ದುಪಡಿಸಿ, ಅವರನ್ನು ಪೊಲೀಸ್ ಕಸ್ಟಡಿಗೆ ನೀಡಬೇಕು. ಈ ಪ್ರಕರಣ ಕುರಿತಂತೆ ಶ್ರೀ ತಾಯಮ್ಮ ಮಹಿಳಾ ಶಕ್ತಿ ಸಂಘದ ಅಧ್ಯಕ್ಷೆ ಹಾಗೂ ಕಾಂಗ್ರೆಸ್‌ ನಾಯಕಿ ಕವಿತಾ ಈಶ್ವರ್ ಸಿಂಗ್ ಅವರ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ಸಿಪಿಎಂನ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಯು.ಬಸವರಾಜ್‌ ಒತ್ತಾಯಿಸಿದರು.

ನಗರದ ಪ್ರತಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 300ಕ್ಕೂ ಅಧಿಕ ಮಹಿಳೆಯರಿಗೆ ಕೋಟ್ಯಂತರ ರು. ವಂಚಿಸಲಾಗಿದೆ, ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ದೂರು ಸಲ್ಲಿಸಿರುವವರ ಅಭಿಪ್ರಾಯ ಪರಿಗಣಿಸಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಪ್ರಿಯಾಂಕಾ ಜೈನ್ ಅವರು ದೂರು ಸಲ್ಲಿಸಿದವರಿಗೆ ಬೆದರಿಕೆ ಹಾಕುವುದು, ಮತ್ತೆ ವಂಚಿಸಲು ಅವರ ದಾರಿ ತಪ್ಪಿಸುತ್ತಿರುವ ಆರೋಪ ಇದ್ದು, ಅವರ ಜಾಮೀನು ರದ್ದುಪಡಿಸಬೇಕು, ದೂರು ಸಲ್ಲಿಸಿರುವ ಮತ್ತು ಸಲ್ಲಿಸಲಿರುವ ಕುಟುಂಬಗಳಿಗೆ ಸೂಕ್ತ ಕಾನೂನು ಹಾಗೂ ಜೀವ ರಕ್ಷಣೆ ನೀಡಬೇಕು, ಸಬ್ಸಿಡಿ ಸಾಲ ಕೊಡಿಸುವ ಹೆಸರಿನಲ್ಲಿ ಮುಂಗಡ ಹಣ ಕಟ್ಟಿಸಿಕೊಂಡಿರುವ ಹತ್ತಾರು ಕೋಟಿ ರು. ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಒತ್ತಾಯಿಸಿದರು.

ಸಂತ್ರಸ್ತ ಮಹಿಳೆಯರ ಪೈಕಿ ಪದ್ಮಾ, ವಾಣಿ, ಮೇಘಾ, ಚೈತ್ರಾ ಮೊದಲಾದವರು ಮಾತನಾಡಿ, ತಾವು ಸಾಲ ಮಾಡಿ ಲಕ್ಷಾಂತರ ರು. ತಾಯಮ್ಮ ಸಂಸ್ಥೆಯ ಅಧ್ಯಕ್ಷೆ ಕವಿತಾ ಈಶ್ವರ ಸಿಂಗ್ ಅವರ ಮಾತು ನಂಬಿ ಪ್ರಿಯಾಂಕಾ ಪತ್ತಿನ ಸಂಘಕ್ಕೆ ನೀಡಿದ್ದು, ನಮಗೆ ವಂಚನೆಯಾಗಿದೆ. ಕವಿತಾ ಸಿಂಗ್ ವಿರುದ್ಧ ದೂರು ನೀಡಲು ಹೋದರೆ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ. ನಮಗೆ ನ್ಯಾಯ ಬೇಕು ಎಂದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಆರ್.ಭಾಸ್ಕರ ರೆಡ್ಡಿ, ಮುಖಂಡರಾದ ಎ.ಕರುಣಾನಿಧಿ, ಮರಡಿ ಜಂಬಯ್ಯ ನಾಯಕ, ಈಡಿಗರ ಮಂಜುನಾಥ, ವಿ.ಸ್ವಾಮಿ ಇದ್ದರು.