ಸಾರಾಂಶ
ಹಳಿಯಾಳ: ಅರಣ್ಯ ಮತ್ತು ವನ್ಯಜೀವಿಗಳು ಮತ್ತು ಜೀವ ವೈವಿಧ್ಯತೆ ರಕ್ಷಿಸಲು ಪ್ರಾಣ ನೀಡಿದ ವೀರ ಅರಣ್ಯ ಹುತಾತ್ಮರ ತ್ಯಾಗವು ನಮಗೆಲ್ಲ ಪ್ರೇರಣೆಯಾಗಲಿ ಎಂದು ಹಳಿಯಾಳ ಅರಣ್ಯ ವಿಭಾಗ ಉಪ ಸಂರಕ್ಷಣಾಧಿಕಾರಿ ಡಾ. ಪ್ರಶಾಂತಕುಮಾರ ಕೆ.ಸಿ ಹೇಳಿದರು.
ಗುರುವಾರ ಹಳಿಯಾಳ ಅರಣ್ಯ ವಿಭಾಗದ ಆವರಣದಲ್ಲಿ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ನಿಮಿತ್ತ ಏರ್ಪಡಿಸಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.500 ವರ್ಷಗಳ ಹಿಂದೆ ಅರಣ್ಯ ಸಂರಕ್ಷಣೆಗಾಗಿ ಬಿಷ್ಣೋಯಿ ಸಮಾಜದವರು ಎತ್ತಿದ್ದ ಕೂಗು ಇನ್ನುವರೆಗೂ ಪ್ರತಿಧ್ವನಿಸುತ್ತಿದೆ. ಪರಿಣಾಮ ದೇಶದಲ್ಲಿ ಇಂದಿಗೂ ಪರಿಸರ ಸಂರಕ್ಷಣೆಯಲ್ಲಿ ಈ ಬಿಷ್ಣೋಯಿ ಸಮಾಜವು ಎಲ್ಲರಿಗೆ ಮಾದರಿಯಾಗಿ ನಿಂತಿದೆ ಎಂದರು.
ಹವಾಮಾನ ಬದಲಾವಣೆ ಮತ್ತು ಜೀವ ವೈವಿಧ್ಯಗಳ ನಷ್ಟದಂತಹ ಜಾಗತಿಕ ಸವಾಲುಗಳನ್ನು ಎದುರಿಸುತ್ತಿರುವ ಈ ದಿನಮಾನಗಳಲ್ಲಿ ಪರಿಸರ ಸಂರಕ್ಷಣೆಯೊಂದೇ ಈ ಸವಾಲುಗಳಿಗೆ ಪರಿಹಾರವಾಗಿದೆ. ಅದಕ್ಕಾಗಿ ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯ ಜವಾಬ್ದಾರಿ ಹಾಗೂ ಹಕ್ಕಾಗಲಿ. ಅರಣ್ಯ ಸಂರಕ್ಷಣೆಯಲ್ಲಿ ಸರ್ವರೂ ಕೈಜೋಡಿಸಬೇಕು ಎಂದರು.ದೇಶ ಸಂರಕ್ಷಣೆಯಷ್ಟೇ ಪರಿಸರ ಸಂರಕ್ಷಣೆ ಮುಖ್ಯ:
ಹಳಿಯಾಳ ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಸುಜಾತಾ ಪಾಟೀಲ ಮಾತನಾಡಿ, ದೇಶ ಸಂರಕ್ಷಣೆಯಷ್ಟೇ ಪರಿಸರ ಸಂರಕ್ಷಣೆಯು ಮುಖ್ಯವಾಗಿದೆ, ನಮ್ಮ ಸೈನಿಕರು ರಾಷ್ಟ್ರ ಸಂರಕ್ಷಣೆಯಲ್ಲಿ ತೊಡಗಿದರೆ ಅರಣ್ಯ ಇಲಾಖೆಯು ಪರಿಸರ ಸಂರಕ್ಷಣೆಗಾಗಿ ಹಸಿರು ಯೋಧರಾಗಿ ಸೇವೆ ಸಲ್ಲಿಸುತ್ತಿದೆ. ಪರಿಸರ ಸಂರಕ್ಷಣೆಗಾಗಿ ಮೀನಮೇಷ ಮಾಡುವುದು, ಪರಿಸರ ಸಂರಕ್ಷಣೆಯು ನಮ್ಮ ಕರ್ತವ್ಯವಾಗಿದೆ. ಅರಣ್ಯ ಇಲಾಖೆಯೊಂದಿಗೆ ನಾವು ಇದ್ದೇವೆ ಎಂದು ಧೈರ್ಯ, ಸಹಕಾರ ನೀಡಬೇಕಾಗಿದೆ ಎಂದರು.ಪರಿಸರ ಸಂರಕ್ಷಣೆಯಲ್ಲಿ ನಾವು ನಿಷ್ಕಾಳಜಿ ತೋರಿದರೆ ಈಗ ಶುದ್ಧ ನೀರಿನ ಬಾಟಲ್ ಬಳಸುವುದನ್ನು ನೋಡುತ್ತಿರುವ ನಮಗೆ ಮುಂದೆ ಆಕ್ಸಿಜನ್ ಸಿಲಿಂಡರ್ ಹೊತ್ತುಕೊಂಡು ಬದುಕುವ ಗಳಿಗೆ ಬರಬಹುದು. ಅದಕ್ಕಾಗಿ ಅರಣ್ಯ ಸಂರಕ್ಷಣೆಯೊಂದಿಗೆ ಆರೋಗ್ಯಯುತ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡೋಣ ಎಂದರು.
ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಸುಜಾತಾ ಪಾಟೀಲ, ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಗೀತಾ, ಹಳಿಯಾಳ ಅರಣ್ಯ ವಿಭಾಗ ಉಪ ಸಂರಕ್ಷಣಾಧಿಕಾರಿ ಡಾ.ಪ್ರಶಾಂತಕುಮಾರ ಕೆ.ಸಿ., ದಾಂಡೇಲಿ ಉಪವಿಭಾಗದ ಡಾ.ಸಂತೋಷ ಚವ್ಹಾನ, ತಾಪಂ ಇಒ ವಿಲಾಸರಾಜ್ ಪ್ರಸನ್ನ್, ಪಿಎಸೈ ಬಸವರಾಜ ಮಬನೂರ, ವಲಯ ಅರಣ್ಯಾಧಿಕಾರಿಗಳ ಸಂಘ, ಉಪ ವಲಯ ಅರಣ್ಯಾಧಿಕಾರಿಗಳ ಸಂಘ, ಅರಣ್ಯ ರಕ್ಷಕರ-ವೀಕ್ಷಕರ ಸಂಘ, ಡಿ ಗ್ರೂಪ್ ನೌಕರ ಸಂಘ, ವಾಹನ ಚಾಲಕರ ಸಂಘ, ಪತ್ರಕರ್ತರ ಸಂಘದ ಪರವಾಗಿ ಹುತಾತ್ಮ ಸ್ಮಾರಕಕ್ಕೆ ಪುಷ್ಮ ನಮನ ಸಲ್ಲಿಸಿ ಗೌರವಿಸಿದರು.ವಲಯ ಅರಣ್ಯಾಧಿಕಾರಿ ಬಸಲಿಂಗಪ್ಪ ಅರಣ್ಯ ಹುತಾತ್ಮ ದಿನಾಚರಣೆ ಇತಿಹಾಸವನ್ನು ತಿಳಿಸಿದರು, ಜೋಯಿಡಾ ವಲಯ ಅರಣ್ಯಾಧಿಕಾರಿ ಪ್ರವೀಣ ಚಲವಾದಿ ಹುತಾತ್ಮರ ಹೆಸರುಗಳನ್ನು ಓದಿದರು. ಹಳಿಯಾಳ ವಲಯ ಅರಣ್ಯಾಧಿಕಾರಿ ಬಸವರಾಜ ಎಂ. ಕಾರ್ಯಕ್ರಮ ನಿರ್ವಹಿಸಿದರು. ಅರಣ್ಯ ಹುತಾತ್ಮ ದಿನಾಚರಣೆಯ ಅಂಗವಾಗಿ ಅರಣ್ಯ ಇಲಾಖೆಯ ಪ್ರವಾಸಿ ಭವನದಲ್ಲಿ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿ ವರ್ಗದವರಿಂದ ರಕ್ತದಾನ ಶಿಬಿರವು ನಡೆಯಿತು.
ಕಾರ್ಯಕ್ರಮದಲ್ಲಿ ಹಳಿಯಾಳ ಎಸಿಎಪ್ ಮಾಜಿ ಭೀರಪ್ಪ, ವಲಯ ಅರಣ್ಯಾಧಿಕಾರಿಗಳಾದ ಅಶೋಕ ಶೀಳ್ಳೆಣ್ಣನವರ, ಶಶಿಧರಗೌಡಾ ಪಾಟೀಲ, ಎನ್.ಎಂ. ನದಾಫ್, ರಶ್ಮಿ ದೇಸಾಯಿ, ಮಹಿಮ ಜನ್ನು, ವಿನಯ್ ಭಟ್, ಸಂಗಮೇಶ ಪಾಟೀಲ, ಜೈವಂತ ಕಾಮರೇಕರ ಇದ್ದರು.