ಮಂಗಳೂರು ಸಂತ ಮದರ್‌ ತೆರೇಸಾ ವಿಚಾರ ವೇದಿಕೆ ವತಿಯಿಂದ ಮದರ್‌ ತೆರೇಸಾ 28ನೇ ಸಂಸ್ಮರಣ ದಿನದ ಅಂಗವಾಗಿ ನಗರದ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಗುರುವಾರ ‘ಸಹಬಾಳ್ವೆಗೆ ಎದುರಾಗಿರುವ ಅಪಾಯಗಳು: ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳು’ ವಿಚಾರ ಸಂಕಿರಣ ನೆರವೇರಿತು.

ಮಂಗಳೂರು: 2015ರಿಂದ ಕೇಂದ್ರ ಸರ್ಕಾರ ಸಂಸ್ಕೃತ ಭಾಷೆಯ ಅಭಿವೃದ್ಧಿಗಾಗಿ 548 ಕೋಟಿ ರು.ಗಳನ್ನು ಖರ್ಚು ಮಾಡಿದೆ. 2011ರ ಜನಗಣತಿ ಪ್ರಕಾರ ಸಂಸ್ಕೃತ ಭಾಷೆ ಮಾತನಾಡುವವರ ಸಂಖ್ಯೆ 24,148. ಆದರೆ 6.40 ಲಕ್ಷಕ್ಕೂ ಅಧಿಕ ಕನ್ನಡ ಭಾಷೆ ಮಾತನಾಡುವವರಿದ್ದು, ಅವರಿಗಾಗಿ ಈ ಅವಧಿಯಲ್ಲಿ ಕೇಂದ್ರ ಖರ್ಚು ಮಾಡಿದ್ದು ಕೇವಲ 8 ಕೋಟಿ ರೂ. ಮಾತ್ರ. ಇಂತಹ ತಾರತಮ್ಯ ಯಾಕೆ ಎಂಬುದನ್ನು ಪ್ರಶ್ನಿಸುವ ಜವಾಬ್ದಾರಿ ನಮ್ಮದಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ. ಮಂಗಳೂರು ಸಂತ ಮದರ್‌ ತೆರೇಸಾ ವಿಚಾರ ವೇದಿಕೆ ವತಿಯಿಂದ ಮದರ್‌ ತೆರೇಸಾರವರ 28ನೇ ಸಂಸ್ಮರಣ ದಿನದ ಅಂಗವಾಗಿ ನಗರದ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಗುರುವಾರ ‘ಸಹಬಾಳ್ವೆಗೆ ಎದುರಾಗಿರುವ ಅಪಾಯಗಳು: ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳು’ ಎಂಬ ವಿಷಯದಲ್ಲಿ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

19,569 ಭಾಷೆಗಳನ್ನು ಮಾತೃ ಭಾಷೆಗಳು ಗುರಿಸಲಾಗಿದೆ. ಇದರಲ್ಲಿ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿರುವುದು 22 ಮಾತ್ರ. 2011ರಲ್ಲಿಯೇ ತುಳು ಸೇರಿದಂತೆ ಸಂವಿಧಾನದ ಪರಿಚ್ಛೇದಕ್ಕೆ ಸೇರಲು 99 ಭಾಷೆಗಳು ಕಾಯುತ್ತಿದ್ದರೆ, ಇದೀಗ 2027ರ ಜನಗಣತಿಯ ಮೇರೆಗೆ ಅನಧಿಕೃತ ಲೆಕ್ಕಾಚಾರದ ಮೂಲಕ 135 ಮಾತೃಭಾಷೆಗಳು 8ನೇ ಪರಿಚ್ಛೇದಕ್ಕೆ ಸೇರಲು ಹೋರಾಟ ನಡೆಸುತ್ತಿವೆ ಎನ್ನಲಾಗಿದೆ. ಇಷ್ಟೊಂದು ಭಾಷೆಗಳ ನಡುವೆ ಹಿಂದಿ ಅಥವಾ ಸಂಸ್ಕೃತ ಮಾತ್ರ ಶ್ರೇಷ್ಠ ಭಾಷೆ ಆಗುವುದು ಹೇಗೆ ಎಂದು ಅವರು ಪ್ರಶ್ನಿಸಿದರು.

ಸಹಬಾಳ್ವೆಯ ಕಾರಣದಿಂದಲೇ ಭಾರತ ಉಳಿದಿದ್ದು, ರಾಜಕೀಯ ಲಾಭಕ್ಕಾಗಿ ಬಿತ್ತಲಾಗುತ್ತಿರುವ ಮಾನವ ದ್ವೇಷದಿಂದ ಇದು ಸಾಧ್ಯವಿಲ್ಲ. ಗಣೇಶ ಮೆರವಣಿಗೆಯ ವೇಳೆ ದ್ವೇಷ, ದಸರಾಕ್ಕೆ ಸಾಹಿತಿ ಬಾನು ಮುಷ್ತಾಕ್‌ರನ್ನು ಕರೆಸಿದರೆ ದ್ವೇಷ ಮಾಡುವಂತಹ ಪ್ರಕ್ರಿಯೆಗಳು ಸಂವಿಧಾನದ ಗಂಭೀರ ಉಲ್ಲಂಘನೆ. ನ್ಯಾಯಾಂಗ ವ್ಯವಸ್ಥೆಯೂ ಇದನ್ನು ಪರಿಗಣಿಸದೆ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಹೆಚ್ಚಿಸಿದೆ ಎಂದರು.

ಸಾಹಿತಿ ಡಾ. ಕೆ. ಶರೀಫಾ ಅವರು ಸೌರ್ಹಾತೆಯ ಕೇಂದ್ರವಾಗಿರುವ ಮಂಗಳೂರಿನಲ್ಲಿ ದ್ವೇಷದ ಬೀಜ ಬಿತ್ತಿ ಅದರ ಫಲ ಉಣ್ಣುತ್ತಿರುವ ನಾವು ಶಾಪಗ್ರಸ್ತ ಸಂತಾನಗಳು ಎಂದು ಮಾತು ಆರಂಭಿಸಿ, ತೆರೆಸಾ ಅವರ ಸಮಗ್ರ ಬದುಕು- ಜೀವನ ಸಾಧನೆಯ ಕುರಿತಾದ ಸಮಗ್ರ ಪುಸ್ತಕ ಕನ್ನಡದಲ್ಲಿ ಸಿಗುವಂತಾಗಬೇಕು ಎಂದರು.

ಮಂಗಳೂರು ಧರ್ಮ ಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷ ರೆ.ಫಾ. ಡಾ. ಅಲೋಶಿಯಸ್‌ ಪಾವ್ಲ್‌ ಡಿಸೋಜಾ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ, ದಲಿತ ಮುಖಂಡ ದೇವದಾಸ್‌, ಸಾಮರಸ್ಯ ಮಂಗಳೂರು ಅಧ್ಯಕ್ಷೆ ಮಂಜುಳಾ ನಾಯಕ್‌, ಮಹಿಳಾ ನಾಯಕಿ ಸುಮತಿ ಎಸ್‌. ಹೆಗ್ಡೆ, ವೇದಿಕೆಯ ಗೌರವ ಸಲಹೆಗಾರ ರೂಪೇಶ್‌ ಮಾಡ್ತ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್‌ ಮತ್ತಿತರರು ಇದ್ದರು.

ಸಂತ ಮದರ್‌ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷ ರಾಯ್‌ ಕ್ಯಾಸ್ತಲಿನೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಏಕತಾರಿ ಹಾಡುಗಾರ ನಾದಾ ಮಣಿನಾಲ್ಕೂರು ಅವರು ಸೌಹಾರ್ದ ಗೀತೆಗಳನ್ನು ಹಾಡಿದರು. ಅವಿಭಜಿತ ದ.ಕ ಜಿಲ್ಲೆಯ ಮೂಲ ನಿವಾಸಿಗಳಾದ ಕೊರಗ ಸಮುದಾಯದ ಏಳಿಗಾಗಿ ಶ್ರಮಿಸಿದ, ಡಾ.ಬಾಬು ಜಗ ಜೀವನ್‌ ರಾಮ್‌ ಪ್ರಶಸ್ತಿ ಪುರಸ್ಕೃತ ಕರಿಯ ಕೆ. ಅವರನ್ನು ಸನ್ಮಾನಿಸಲಾಯಿತು.

ಕೆಥೋಲಿಕ್‌ ಸಭಾ ಮಂಗಳೂರು ಪ್ರದೇಶ್‌ ಅಧ್ಯಕ್ಷ ಸಂತೋಷ್‌ ಡಿಸೋಜಾ ಸ್ವಾಗತಿಸಿದರು. ಸಂತ ಮದರ್‌ ತೆರೇಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನೀಲ್‌ ಕುಮಾರ್‌ ಬಜಾಲ್‌ ನಿರೂಪಿಸಿದರು.