ಮದುವೆಗೊಪ್ಪದ ಪ್ರೇಯಸಿ : ಕತ್ತು ಸೀಳಿಕೊಂದ ಪಾಗಲ್‌ ಪ್ರೇಮಿ!

| Published : Mar 31 2024, 02:11 AM IST / Updated: Mar 31 2024, 05:29 AM IST

Murder
ಮದುವೆಗೊಪ್ಪದ ಪ್ರೇಯಸಿ : ಕತ್ತು ಸೀಳಿಕೊಂದ ಪಾಗಲ್‌ ಪ್ರೇಮಿ!
Share this Article
  • FB
  • TW
  • Linkdin
  • Email

ಸಾರಾಂಶ

ಕೆಲಸ ಬಿಟ್ಟು ಮದುವೆಯಾಗುವಂತೆ ಫರೀದಾಗೆ ಒತ್ತಾಯಿಸಿದ್ದಾನೆ. ಇದಕ್ಕೆ ಆಕೆ ನಿರಾಕರಿಸಿದ್ದಾಳೆ. ಇದರಿಂದ ಕೋಪೋದ್ರಿಕ್ತನಾದ ಗಿರೀಶ್, ತನ್ನ ಬಳಿಯಿದ್ದ ಚಾಕುವಿನಿಂದ ತನ್ನ ಪ್ರೇಯಸಿಯ ಕತ್ತು ಕೊಯ್ದು ಕೊಲೆಗೈದಿದ್ದಾನೆ.

 ಬೆಂಗಳೂರು : ಕೆಲಸ ಬಿಟ್ಟು ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಕತ್ತು ಸೀಳಿ ಕೊಲೆಗೈದಿರುವ ದಾರುಣ ಘಟನೆ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ಕೊಲ್ಕತ್ತ ಮೂಲದ ಫರೀದಾ ಖಾನಂ(42) ಕೊಲೆಯಾದವರು. ಕೊಲೆಗೈದ ಆರೋಪಿ ಜಯನಗರ ನಿವಾಸಿ ಗಿರೀಶ್ ಅಲಿಯಾಸ್ ರಿಯಾನ್ ಖಾನ್(35) ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

ಕೊಲ್ಕತ್ತ ಮೂಲದ ಫರೀದಾ ಖಾನಂ ಪತಿ ಕೆಲ ವರ್ಷಗಳ ಹಿಂದೆ ಮೃತನಾಗಿದ್ದು, ಈಕೆಗೆ ಇಬ್ಬರು ಮಕ್ಕಳು ಇದ್ದಾರೆ. 2022ರಲ್ಲಿ ಕೊಲ್ಕತ್ತ ದಿಂದ ಬೆಂಗಳೂರಿಗೆ ಬಂದಿದ್ದ ಫರೀದಾ ಜಯನಗರದ ಸ್ಪಾವೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಇನ್ನು 2011ರಲ್ಲಿ ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಗಿರೀಶ್, ತನ್ನ ಹೆಸರನ್ನು ರಿಯಾನ್ ಖಾನ್ ಎಂದು ಬದಲಿಸಿಕೊಂಡು ನಗರದಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈ ನಡುವೆ ಸ್ಪಾಗೆ ಬಂದಿದ್ದಾಗ ಫರೀದಾಳ ಪರಿಚಯವಾಗಿ ಬಳಿಕ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.

ಕೆಲಸ ನಿಮಿತ್ತ ಮಾ.3ರಂದು ಕೊಲ್ಕತ್ತಗೆ ಹೋಗಿದ್ದ ಫರೀದಾ ಖಾನಂ, ಪ್ರಿಯಕರ ಗಿರೀಶ್ ನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಾ.28ರಂದು ಬೆಂಗಳೂರಿಗೆ ವಾಪಾಸ್ ಆಗಿದ್ದಳು. ಜೆ.ಪಿ.ನಗರದ ಓಯೋ ರೂಮ್ ಬಾಡಿಗೆ ಪಡೆದು ಇಬ್ಬರು ತಂಗಿದ್ದರು. ಮಾ.29ರಂದು ಪ್ರೇಮಿಗಳಿಬ್ಬರು ಸಿನಿಮಾ ಪಾರ್ಕ್, ಶಾಪಿಂಗ್ ಮಾಲ್, ಹೋಟೆಲ್, ಪಾರ್ಕ್‌ಗಳಲ್ಲಿ ಸುತ್ತಾಡಿದ್ದಾರೆ.

ಈ ವೇಳೆಯೇ ಆರೋಪಿ ಗಿರೀಶ್, ಕೆಲಸ ಬಿಟ್ಟು ಮದುವೆಯಾಗುವಂತೆ ಫರೀದಾಗೆ ಒತ್ತಾಯಿಸಿದ್ದಾನೆ. ಇದಕ್ಕೆ ಆಕೆ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಗಿರೀಶ್, ಫರೀದಾಳನ್ನು ಓಯೋ ರೂಮ್ ಗೆ ಬಿಟ್ಟು ಹೋಗಿದ್ದಾನೆ. ಶನಿವಾರ ಬೆಳಗ್ಗೆೆ 11 ಗಂಟೆ ಸುಮಾರಿಗೆ ಮತ್ತೆೆ ರೂಮ್ ಬಳಿ ಬಂದು ಪ್ರೇಯಸಿಯನ್ನು ಕರೆದೊಯ್ದು ಹೋಟೆಲ್‌ನಲ್ಲಿ ತಿಂಡಿ ತಿನ್ನಿಸಿ ಬಳಿಕ ಮಾಲ್‌ಗೆ ಕರೆದೊಯ್ದಿದ್ದಾನೆ. ಮಧ್ಯಾಹ್ನವೂ ಹೋಟೆಲ್‌ನಲ್ಲಿ ಊಟ ಮಾಡಿ, ಜಯನಗರ, ಜೆ.ಪಿ.ನಗರದ ಕೆಲ ಪಾರ್ಕ್‌ಗಳಲ್ಲಿ ಸುತ್ತಾಡಿದ್ದಾರೆ.

ಅರೋಪಿ ಗಿರೀಶ್ ಸಂಜೆ 7 ಗಂಟೆ ಸುಮಾರಿಗೆ ಫರೀದಾಳನ್ನು ಜಯನಗರದ ಶಾಲಿನಿ ಪಾರ್ಕ್‌ಗೆ ಕರೆದೊಯ್ದಿದ್ದಾನೆ. ಈ ವೇಳೆ ಸ್ಪಾ ಕೆಲಸ ಬಿಟ್ಟು ತನ್ನೊಂದಿಗೆ ಮದುವೆಯಾಗುವಂತೆ ಕೇಳಿಕೊಂಡಿದ್ದಾನೆ. ಆದರೆ, ಫರೀದಾ ಕೆಲಸ ಬಿಟ್ಟು ಮದುವೆಯಾಗಲು ನಿರಾಕರಿಸಿದ್ದಾಳೆ. ಇದರಿಂದ ಕೋಪೋದ್ರಿಕ್ತನಾದ ಗಿರೀಶ್, ತನ್ನ ಬಳಿಯಿದ್ದ ಚಾಕುವಿನಿಂದ ಆಕೆಯ ಕತ್ತು ಕೊಯ್ದು ಕೊಲೆಗೈದಿದ್ದಾನೆ. ಬಳಿಕ ಆತನೇ ಚಾಕು ಸಮೇತ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.