ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಮೊದಲ ನಾಮಪತ್ರ

| Published : Mar 31 2024, 02:11 AM IST

ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಮೊದಲ ನಾಮಪತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದ ಅಭ್ಯರ್ಥಿಯಾಗಿ ಸುಜಾತ ಡಿ. ಅವರು ಶನಿವಾರ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಸಂಬಂಧ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದ್ದು, ಮಾರ್ಚ್ 30ರಂದು ಒಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದ ಅಭ್ಯರ್ಥಿಯಾಗಿ ಸುಜಾತ ಡಿ. ಅವರು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಮಾ.28 ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದ್ದು, ಸಾರ್ವತ್ರಿಕ ರಜಾದಿನ ಹೊರತುಪಡಿಸಿ, ಪ್ರತಿದಿನ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸ್ವೀಕಾರ ಮಾಡಲಾಗುತ್ತದೆ. ಏಪ್ರಿಲ್.4 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ರಂಗಯ್ಯನ ಬಾಗಿಲನಿಂದ ಪಕ್ಷದ ಕಾರ್ಯರ್ತರೊಂದಿಗೆ ಮೆರವಣಿಗೆಯಲ್ಲಿ ಬಂದ ಸುಜಾತ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಸಂಘಟನೆಯ ಮಂಜುಳಾ, ಕುಮುದಾ, ರವಿಕುಮಾರ್ ಈ ವೇಳೆ ಉಪಸ್ಥಿತರಿದ್ದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‍ಯುಸಿಐ ಪಕ್ಷದ ಅಭ್ಯರ್ಥಿ ಕುಮುದಾ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 50 ರಷ್ಟು ಮಹಿಳೆಯರಿದ್ದು ಮಹಿಳಾ ಪ್ರತಿನಿಧಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ ಎಂದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ಮತ್ತು ಸೌಲಭ್ಯಗಳನ್ನು ಹೆಚ್ಚಿಸುವುದು, ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ರಕ್ಷಣೆ ಮತ್ತು ಸಬಲೀಕರಣ, ಚಿತ್ರದುರ್ಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಉತ್ತಮ ಪಡಿಸಲು ಮತ್ತು ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಗಾಗಿ ನಾವು ಆಧ್ಯತೆ ನೀಡಿದ್ದೇವೆ. ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯನ್ನು ಕಾಲಮಿತಿಯಾಗಿ ಪೂರ್ಣಗೊಳಿಸುವುದು, ದಾವಣಗೆರೆ - ತುಮಕೂರು ನೇರ ರೈಲ್ವೆ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವುದು, ಮಹಿಳೆಯರ ಘನತೆ, ಗೌರವ ಕಾಪಾಡುವುದಕ್ಕಾಗಿ ಮತ್ತು ಸ್ವಾತಂತ್ರ್ಯ, ಸಮಾನತೆಗಳಿಗಾಗಿ,ಕಾರ್ಮಿಕರಿಗೆ ಖಾಯಂ ಉದ್ಯೋಗ ಹಾಗೂ ಕನಿಷ್ಟ ವೇತನಗಳನ್ನು ಖಚಿತಪಡಿಸುವುದಕ್ಕಾಗಿ, ಎಲ್ಲಾ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಮತ್ತು ಸಂಪೂರ್ಣ ಸರ್ಕಾರಿ ವ್ಯಾಪಾರಕ್ಕಾಗಿ, ಆಶಾ, ಅಂಗನವಾಡಿ, ಬಿಸಿಯೂಟ ಹಾಗೂ ಇನ್ನಿತರ ಹೊರಗುತ್ತಿಗೆ ಮತ್ತು ದಿನಗೂಲಿ ಕಾರ್ಮಿಕರ ಉದ್ಯೋಗವನ್ನು ಖಾಯಂಗೊಳಿಸುವುದಕ್ಕಾಗಿ ತಮ್ಮನ್ನು ಬೆಂಬಲಿಸುವಂತೆ ಕ್ಷೇತ್ರದ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿರುವುದಾಗಿ ಸುಜಾತ ಹೇಳಿದರು.