ಕೃಷಿ ಗ್ರಾಮ್ ಸಂಸ್ಥೆಗೆ ಟಿಎಸ್‌ಎಸ್ ಸಹಕಾರ: ಗೋಪಾಲಕೃಷ್ಣ ವೈದ್ಯ

| Published : Mar 31 2024, 02:11 AM IST

ಕೃಷಿ ಗ್ರಾಮ್ ಸಂಸ್ಥೆಗೆ ಟಿಎಸ್‌ಎಸ್ ಸಹಕಾರ: ಗೋಪಾಲಕೃಷ್ಣ ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಶಿರಸಿಯ ಟಿಎಸ್ಎಸ್ ಸಭಾಂಗಣದಲ್ಲಿ ಟಿಎಸ್‌ಎಸ್ ಕೃಷಿ ಗ್ರಾಮ್ ಉದ್ಘಾಟನೆ ಹಾಗೂ ತೋಟ ನಿರ್ವಹಣೆ ಮತ್ತು ಸೇವೆಗಳ ಸಹಕಾರಿ ಜಾಗೃತಿ ಸಭೆ ನಡೆಯಿತು.

ಶಿರಸಿ: ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕೃಷಿ ಗ್ರಾಮ್ ಪ್ರಿಸಿಷನ್ ಫಾರ್ಮಿಂಗ್ ಸಂಸ್ಥೆಗೆ ಟಿಎಸ್‌ಎಸ್ ಸಹಕಾರ ನೀಡುತ್ತಿದೆ ಎಂದು ಟಿಎಸ್‌ಎಸ್ ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹೇಳಿದರು.

ಟಿಎಸ್‌ಎಸ್ ಸೊಸೈಟಿ ಹಾಗೂ ಬೆಂಗಳೂರಿನ ಕೃಷಿ ಗ್ರಾಮ್ ಪ್ರಿಸಿಷನ್ ಫಾರ್ಮಿಂಗ್ ಸಹಯೋಗದಲ್ಲಿ ಟಿಎಸ್ಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಟಿಎಸ್‌ಎಸ್ ಕೃಷಿ ಗ್ರಾಮ್ ಉದ್ಘಾಟನೆ ಹಾಗೂ ತೋಟ ನಿರ್ವಹಣೆ ಮತ್ತು ಸೇವೆಗಳ ಸಹಕಾರಿ ಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೃಷಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಟಿಎಸ್ಎಸ್ ಸಂಸ್ಥೆ ಸಹ ಕೃಷಿ ಗ್ರಾಮ್ ಸಂಸ್ಥೆಗೆ ಸಹಕಾರ ನೀಡಿತ್ತಿದೆ. ಕೃಷಿಕರ ಬಗ್ಗೆ ಸಾಕಷ್ಟು ಕಾಳಜಿ ವಹಿಸಿ ಒಪ್ಪಂದ ಮಾಡಿಕೊಂಡಿದ್ದೇವೆ. ಟಿಎಸ್ಎಸ್ ಮಧ್ಯಸ್ಥಿಕೆಯಲ್ಲಿ ಇರುತ್ತದೆ‌. ನಾವು ಲಾಭಕ್ಕಾಗಿ ಮಾಡುವುದಿಲ್ಲ. ಆದರೆ ರೈತರಿಗೆ ಹೊರೆಯಾಗಬಾರದು. ಮಲೆನಾಡಿನಲ್ಲಿ ಕೃಷಿ ಮಾಡುವುದು ಬಹಳ ಕಷ್ಟಕ್ಕೆ ಬಂದಿದೆ ಎಂದರು.

ಬೆಂಗಳೂರಿನ ಕೃಷಿ ಗ್ರಾಮ್ ಪ್ರಿಸಿಷನ್ ಫಾರ್ಮಿಂಗ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣಪತಿ ಹೆಗಡೆ ಹುಳಗೋಳ ಮಾತನಾಡಿ, ದೇಶದ ಅಭಿವೃದ್ಧಿ ಸಂಕೇತ ಆ ದೇಶದ ಸಾಕ್ಷರತೆಯ ಪ್ರಮಾಣವಾಗಿರುತ್ತದೆ. ಸಾಕ್ಷರತೆ ಪ್ರಮಾಣ ಹೆಚ್ಚಿದಂತೆ ಜನರು ನಗರದತ್ತ ಹೋಗುವುದು ಸಾಮಾನ್ಯ. ಕೃಷಿಕರ ಮಕ್ಕಳಿಗೆ ಕೃಷಿಯ ಬಗ್ಗೆ ಆಸಕ್ತಿ ಕಡಿಮೆಯಾಗಿಲ್ಲ. ಆದರೆ ತೋಟದ ನಿರ್ವಹಣೆ ಕಷ್ಟವಾಗುತ್ತಿದೆ. ಕೃಷಿ ಕೆಲಸ ಲಾಭದಾಯಕ ಉದ್ಯಮ. ಲಾಭ ಕೊಡುವ ಉದ್ಯಮವೊಂದಿದ್ದರೆ ಅದು ಕೃಷಿ ಉದ್ಯಮ ಮಾತ್ರ. ಸಾಕಷ್ಟು ಸಾಧಕರು ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ. ಸುಮಾರು ಎರಡು ವರ್ಷಗಳ ಹಿಂದೆ ಸಮಾನ ಮನಸ್ಕರ ತಂಡದಿಂದ ಕೃಷಿ ಗ್ರಾಮ್ ಸಂಸ್ಥೆ ಹುಟ್ಟಿಕೊಂಡಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ, ಸಾಗರ, ಬೆಂಗಳೂರು ಸೇರಿ ಹಲವು ಕಡೆಗಳಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದರು.

ಆರಂಭದಲ್ಲಿ ಈ ಸೇವೆಯನ್ನು ಅನಿವಾಸಿ ರೈತರಿಗೆ ನೀಡಲಿದ್ದೇವೆ‌. ತೋಟದ ವರ್ಷ ಪೂರ್ತಿ ನಿರ್ವಹಣೆ ಹಾಗೂ ಹೊಸ ತೋಟದ ನಿರ್ಮಾಣವನ್ನೂ ಮಾಡುತ್ತೇವೆ. ಪಾರದರ್ಶಕವಾಗಿ ಕೆಲಸ ಮಾಡುತ್ತೇವೆ. ಕಡಿಮೆ ವೆಚ್ಚದಲ್ಲಿ ಕೆಲಸ ಮಾಡಿಕೊಡಿಕೊಡಲಾಗುತ್ತದೆ. ತಂತ್ರಜ್ಞಾನ, ಯಂತ್ರಗಳ ಬಳಕೆ ಮಾಡಿ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಕೆಲಸ ಮಾಡುತ್ತೇವೆ. ಪ್ರತಿ ತಿಂಗಳು ನಿಗದಿತ ದರವನ್ನು ನಿಗದಿಪಡಿಸಲಾಗುವುದು. ಕೃಷಿಯಲ್ಲಿ ಬದಲಾವಣೆ ತರುವ ಉದ್ದೇಶ ನಮ್ಮದಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಪ್ರಕಾಶ ಹೆಗಡೆ ಹುಳಗೋಳ ಮಾತನಾಡಿ, ತಡವಾಗಿಯಾದರೂ ಕೃಷಿಕರಿಗೆ ಉತ್ತಮ ವ್ಯವಸ್ಥೆಯನ್ನು ಕೃಷಿ ಗ್ರಾಮ್ ಸಂಸ್ಥೆ ಮಾಡಿಕೊಡುತ್ತಿದೆ. ಆರಂಭಿಕ ಹಂತದಲ್ಲಿ ಜನರಿಗೆ ಹೆಚ್ಚಿನ ತಿಳಿವಳಿಕೆ ನೀಡುವ ಅಗತ್ಯತೆ ಇರುತ್ತದೆ. ರೈತರಿಗೆ ಮನವರಿಕೆ ಮಾಡುವುದು ಬಹಳ‌ಮುಖ್ಯವಾಗಿದೆ. ಟಿಎಸ್ಎಸ್ ಸೊಸೈಟಿ ಸಹ ಇದಕ್ಕೆ ಸಹಕಾರ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಭಾಸ್ಕರ್ ಹೆಗಡೆ ಕಾಗೇರಿ ಮಾತನಾಡಿ, ಮುಂದಿನ ದಿನಗಳಲ್ಲಿ ಕೃಷಿ ಗ್ರಾಮ್ ಹೆಮ್ಮರವಾಗಿ ಬೆಳೆದು ನಿಲ್ಲುವ ವಿಶ್ವಾಸವನ್ನು ನಾವು ಇಟ್ಟುಕೊಳ್ಳಬಹುದು. ಪ್ರಾದೇಶಿಕವಾಗಿ ಪಾರಂಪರಿಕ ಜ್ಞಾನವನ್ನೂ ಒಳಗೊಂಡ ಕೃಷಿ ಪದ್ಧತಿಯ ಬಗ್ಗೆ ಚಿಂತಿಸಬೇಕು. ಒಳ್ಳೆಯ ಪ್ರಯತ್ನ ಪ್ರಾರಂಭವಾಗಿದೆ ಎಂದರು.

ಪರಿಸರ ಬರಹಗಾರ ಶಿವಾನಂದ ಕಳವೆ ಮಾತನಾಡಿ, ಕೃಷಿ ನಿರ್ವಹಣೆ ಬಗ್ಗೆ ಟಿಎಸ್‌ಎಸ್ ಸಂಸ್ಥೆ ಮನಸ್ಸು ಮಾಡಿರುವುದು ಸಂತಸದ ಸಂಗತಿಯಾಗಿದೆ. ನಮ್ಮೆಲ್ಲರ ಬೇರು ಅಡಕೆಯಲ್ಲೆ ಇದೆ. ಆದ್ದರಿಂದ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವ ಕಾರ್ಯ ಆಗಬೇಕಿದೆ ಎಂದರು.

ಕೃಷಿ ಗ್ರಾಮ್ ಪ್ರಿಸಿಷನ್ ಫಾರ್ಮ್ ಮುಖ್ಯ ಕಾರ್ಯನಿರ್ವಾಹಕ ಗಣೇಶ ಹೆಗಡೆ, ಸಂಘದ ಉಪಾಧ್ಯಕ್ಷ ಮಾಭ್ಲೇಶ್ವರ ಭಟ್, ಭಾಸ್ಕರ ಹೆಗಡೆ ಕಾಗೇರಿ, ಪ್ರಕಾಶ ಹೆಗಡೆ, ವಿಜಯಾನಂದ ಭಟ್ ಸೇರಿ ಹಲವರು ಇದ್ದರು.

ವಸುಮತಿ ಭಟ್ ಸ್ವಾಗತಿಸಿದರು. ಗೋಪಾಲ ಹೆಗಡೆ ನಿರ್ವಹಿಸಿದರು. ಟಿಎಸ್ಎಸ್ ಸಂಸ್ಥೆಯಲ್ಲಿ ಕೃಷಿ ತಜ್ಞರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಶ್ರೀಕಾಂತ ಭಟ್ ಅವರನ್ನು ಸನ್ಮಾನಿಸಲಾಯಿತು.