ಬಳ್ಳಾರಿ: ನಗರದ ಕಂಟೋನ್ಮೆಂಟ್ ಪ್ರದೇಶದ ತಿಲಕನಗರ ನಿವಾಸಿ ಅನಿರುದ್ಧ ಕಟ್ಟಿಮನಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 786ನೇ ರ‍್ಯಾಂಕ್ ಗಳಿಸಿದ್ದಾರೆ.
ಬಳ್ಳಾರಿಯ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಯಾದ ಅನಿರುದ್ಧ ಅವರು ಪದವಿ ಪೂರ್ವ ಶಿಕ್ಷಣವನ್ನು ಬೆಂಗಳೂರಿನ ನಾರಾಯಣ ಸಂಸ್ಥೆಯಲ್ಲಿ ಪೂರ್ಣಗೊಳಿಸಿದ್ದಾರೆ. ಐಐಟಿ ಮದ್ರಾಸ್‌ನಿಂದ ಭೌತಶಾಸ್ತ್ರದಲ್ಲಿ ಬಿ.ಟೆಕ್ ಪದವಿ ಪಡೆದಿದ್ದು, 2023ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ ಐಎಫ್‌ಎಸ್ ಪಾಸು ಮಾಡಿದ್ದರು. ಅವರು ಸದ್ಯ ಡೆಹ್ರಾಡೂನ್‌ನ ಇಂದಿರಾಗಾಂಧಿ ರಾಷ್ಟ್ರೀಯ ಅರಣ್ಯ ಪ್ರತಿಷ್ಠಾನದಲ್ಲಿ ತರಬೇತಿಯಲ್ಲಿದ್ದಾರೆ. ತಮ್ಮ ಮೂರನೇ ಪ್ರಯತ್ನದಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.ತಂದೆ ಪುರುಷೋತ್ತಮ್ ಜೆಸ್ಕಾಂನಲ್ಲಿ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್. ತಾಯಿ ನಾಗಮಣಿ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಈ ಮೊದಲಿನಿಂದಲೂ ಐಎಎಸ್ ಅಧಿಕಾರಿಯಾಗಬೇಕು ಎಂಬ ಬಯಕೆ ಇತ್ತು. ಹೀಗಾಗಿಯೇ ಸಿವಿಲ್ಸ್ ಪರೀಕ್ಷೆ ಬರೆದಿದ್ದೆ. ಇನ್ನು ಉನ್ನತ ರ್‍ಯಾಂಕ್ ಬರುವ ನಿರೀಕ್ಷೆಯಿತ್ತು. ಮುಂದೆ ಮತ್ತೆ ಪರೀಕ್ಷೆ ಬರೆಯುವ ಯೋಚನೆ ಇಲ್ಲ. ನನ್ನ ಓದಿಗೆ ಅಪ್ಪ ಹಾಗೂ ಅಮ್ಮ ನೀಡಿರುವ ಪ್ರೋತ್ಸಾಹ ಮರೆಯಲಾರೆ ಎಂದು ಅನಿರುದ್ಧ ಕಟ್ಟಿಮನಿ ಕನ್ನಡಪ್ರಭಕ್ಕೆ ತಿಳಿಸಿದರು.